Home News Puttur: ಪುತ್ತೂರಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ

Puttur: ಪುತ್ತೂರಿಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ

Hindu neighbor gifts plot of land

Hindu neighbour gifts land to Muslim journalist

Puttur: ಪುತ್ತೂರಿನಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕಿಯೆಗೆ ಚಾಲನೆ ನೀಡುವಂತೆ ಇಲಾಖಾ ಇಂಜನಿಯರ್‌ಗೆ ಸೂಚನೆ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನೂತನ ರಸ್ತೆಗೆ ೩ ಕೋಟಿ ಅನುದಾನ ಮಂಜೂರು, ಪ್ರವಾಸಿ ಮಂದಿರಕ್ಕೆ ಹೆಚ್ಚುವರಿಯಾಗಿ ೫ ಕೋಟಿ ಮಂಜೂರು, ಪುತ್ತೂರು ಉಪ್ಪಿನಂಗಡಿ ರಸ್ತೆಯ ಹಾರಾಡಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ, ಆನೆಮಜಲಿನಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣದಲ್ಲಿರುವ ಬಾರ್ ಅಸೋಸಿಯೇಶನ್‌ನ ಪೀಠೋಪಕರಣಗಳ ಖರೀದಿಗೆ ಅನುದಾನ ಮತ್ತು ಪುತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ಶೀಘ್ರ ಮುಗಿಸುವಂತೆ ಸೂಚನೆ ಇದು ಪುತ್ತೂರಿಗೆ ಭಾನುವಾರ ದಿಡೀರನೆ ಆಗಮಿಸಿದ್ದ ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಪುತ್ತೂರಿಗೆ ನೀಡಿದ ಹೊಸ ಯೋಜನೆ ಮತ್ತು ಅನುದಾನಗಳು.

ಭಾನುವಾರ ಸಂಜೆ ದಿಡೀರನೆ ಪುತ್ತೂರಿಗೆ ಆಗಮಿಸಿದ ಸಚಿವರನ್ನು ಶಾಸಕರಾದ ಅಶೋಕ್ ರೈಯವರು ಪ್ರವಾಸಿ ಮಂದಿರದಲ್ಲಿ ಸ್ವಾಗತಿಸಿದರು. ಪ್ರವಾಸಿ ಮಂದಿರದಲ್ಲಿ ಸಚಿವರ ಜೊತೆ ಶಾಸಕರು ಪುತ್ತೂರಿನ ಅಭಿವೃದ್ದಿಯ ವಿಚಾರಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿ ವಿಚಾರಕ್ಕೆ ಸಂಬಂದಿಸಿದಂತೆ ಚರ್ಚೆ ನಡೆಸಿದರು. ಈಗಾಗಲೇ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ೩೫ ಕೋಟಿ ಅನುದಾನವನ್ನು ನೀಡಿದ್ದೀರಿ ಮುಂದೆಯೂ ತಮ್ಮ ಮೂಲಕ ಹೆಚ್ಚಿನ ಅನುದಾನವನ್ನು ನಿರೀಕ್ಷಿಸುತ್ತಿರುವುದಾಗಿ ಶಾಸಕರು ಹೇಳಿದರು.

ರಿಂಗ್ ರೋಡು ಬೇಕು

ಸಚಿವರೊಡನೆ ಮಾತುಕತೆ ನಡೆಸಿದ ಶಾಶಕರು ಪುತ್ತೂರಿಗೆ ರಿಂಗ್ ರೋಡಿನ ಅವಶ್ಯಕತೆ ಇದೆ. ಬೆಳೆಯುತ್ತಿರುವ ನಗರ ಮತ್ತು ಮುಂದೆ ಜಿಲ್ಲಾ ಕೇಂದ್ರವಾಗಿ ರೂಪುಗೊಳ್ಳಲಿರುವ ಪುತ್ತೂರು ನಗರಕ್ಕೆ ರಿಂಗ್ ರಸ್ತೆಯ ಬೇಡಿಕೆ ಇದೆ ಇದಕ್ಕಾಗಿ ತಮ್ಮ ಅನುಮೋದನೆ ಬೇಕಿದೆ ಎಂದು ಹೇಳಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ರಿಂಗ್ ರೋಡು ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಬೇಕಿದ್ದು ತಕ್ಷಣದಿಂದಲೇ ಭೂ ಸ್ವಾಧೀನ ಪ್ರಕ್ರಿಯೆ ಚಾಲನೆ ನೀಡುವಂತೆ ಸಚಿವರು ಸೂಚನೆ ನೀಡಿದರು. ಪುತ್ತೂರಿನಲ್ಲಿ ರಿಂಗ್ ರೋಡು ನಿರ್ಮಾಣವಾದಲ್ಲಿ ಟ್ರಾಫಿಕ್ ನಿಯಂತ್ರಣದ ಜೊತೆಗೆ ಪುತ್ತೂರು ನಗರದೊಳಗೆ ಸುಲಭದಲ್ಲಿ ಸಂಚಾರ ಮಾಡಬಹುದಾಗಿದೆ.

ಪ್ರವಾಸಿ ಮಂದಿರಕ್ಕೆ ೫ ಕೋಟಿ

ಪುತ್ತೂರಿನ ಪ್ರವಾಸಿ ಮಂದಿರಕ್ಕೆ ಈಗಾಗಲೇ ೩ ಕೋಟಿ ಮಂಜೂರಾಗಿದ್ದು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಇನ್ನೂ ೫ ಕೋಟಿ ಅವಶ್ಯಕತೆ ಇದ್ದು ಅನುದಾನ ನೀಡುವ ಕುರಿತು ಶಾಸಕರು ಸಚಿವರಲ್ಲಿ ಮನವಿ ಮಾಡಿದ್ದು ಸ್ಪಂದಿಸಿದ ಸಚಿವರು ಹೆಚ್ಚುವರಿಯಗಿ ೫ ಕೋಟಿ ಮಂಜೂರು ಮಾಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥನದ ಬಳಿಕ ನಿರ್ಮಾಣವಾಗಲಿರುವ ನೂತನ ರಸ್ತೆಗೆ ಹೆಚ್ಚುವರಿಯಾಗಿ ೩ ಕೋಟಿ ಅನುದಾನವನ್ನು ಸಚಿವರು ಮಂಜೂರು ಮಾಡಿದರು.

ಪುತ್ತೂರು ಉಪ್ಪಿನಂಗಡಿ ರಸ್ತೆ ವೀಕ್ಷಣೆ

ಬೆಳ್ತಂಗಡಿಗೆ ತೆರಳುವ ದಾರಿ ಮಧ್ಯೆ ಬೊಳುವಾರಿನಲ್ಲಿ ಕಾರಿನಿಂದ ಇಳಿದ ಸಚಿವರು ಪುತ್ತೂರು ವಿಟ್ಲ ರಸ್ತೆಯನ್ನು ವೀಕ್ಷಣೆ ಮಾಡಿ ಹಾರಾಡಿಯ ರೈಲ್ವೇ ಸೇತುವೆಯ ನಿರ್ಮಾಣಕ್ಕೆ ೭ ಕೋಟಿ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ಸೂಚನೆಯನ್ನು ನೀಡಿದರು.

ಅಶೋಕ್ ರೈಗಾಗಿ ಪುತ್ತೂರಿಗೆ ಬಂದೆ

ನಿಮ್ಮ ಶಾಸಕರು ಬಹಳ ಸ್ಪೀಡ್ ಇದ್ದಾರೆ. ಪುತ್ತೂರು ಮೂಲಕ ಬೆಳ್ತಂಗಡಿಗೆ ಹೋಗುವ ವೇಳೆ ಶಾಸಕರಿಗೆ ಕರೆ ಮಾಡಿ ಇಲ್ಲಿಗೆ ಬಂದಿದ್ದೇನೆ. ಅಶೋಕ್ ರವರು ಬಹಳ ಉತ್ಸಾಹದಿಂದ ಕೆಲಸ ಕಾರ್ಯ ಮಾಡುತ್ತಿದ್ದಾರೆ, ಅವರಿಗೆ ಬಡವರ ಮೇಲೆ ಅಪಾರ ಕಾಳಜಿ ಇದೆ, ಕ್ಷೇತ್ರದ ಅಭಿವೃದ್ದಿಗೆ ಪಣ ತೊಟ್ಟಿದ್ದಾರೆ. ಅವರ ಮುಂದಾಲೋಚನೆಗಳು ನಿಮ್ಮ ಕ್ಷೇತ್ರವನ್ನು ಉತ್ತರೋತ್ತರ ಅಭಿವೃದ್ದಿಯತ್ತ ಕೊಂಡೊಯ್ಯಲಿದೆ ಇಲ್ಲಿನ ಜನ ಅವರನ್ನು ಎಂದಿಗೂ ಕೈ ಬಿಡಬೇಡಿ, ಇಂಥಹ ಒಬ್ಬ ಶಾಸಕರನ್ನು ಆಯ್ಕೆ ಮಾಡಿದ ನೀವು ಭಾಗ್ಯವಂತರು ಅವರನ್ನು ಎಂದಿಗೂ ಕೈಬಿಡಬೇಡಿ, ಶಾಸಕರು ಕೇಳಿದ್ದೆಲ್ಲವನ್ನೂ ಕೊಟ್ಟಿದ್ದೇನೆ, ಇನ್ನೂ ಕೊಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕೇಳದೆ ಅನುದಾನ ಕೊಡುವ ಏಕೈಕ ಸಚಿವ

ಶಾಸಕರಾದವರು ಅನುದಾನ ಪಡೆದುಕೊಳ್ಳಬೆಕಾದರೆ ಸಚಿವರುಗಳ ಬಳಿ ಅಲೆದಾಡಬೇಕು ಆದರೆ ಲೋಕೋಪಯೋಗಿ ಸಚಿವರು ಎಲ್ಲರಿಗೂ ಭಿನ್ನ ಅವರು ಕೇಳದೆಯೇ ನಮ್ಮ ಕ್ಷೇತ್ರಕ್ಕೆ ಈಗಾಗಲೇ ೩೫ ಕೋಟಿ ಅನುದಾನ ಕೊಟ್ಟಿದ್ದಾರೆ, ಇಂತಹ ಮಂತ್ರಗಳಿದ್ದಲ್ಲಿ ನಮ್ಮ ರಾಜ್ಯ ಖಂಡಿತವಾಗಿಯೂ ಉದ್ದಾರ ಆಗಬಹುದು. ಸಚಿವರು ನಮ್ಮ ಕ್ಷೇತ್ರಕ್ಕೆ ಬಂದಿರುವುದು ನಮ್ಮ ಪುಣ್ಯ ಎಂದು ಭಾವಿಸಿದ್ದೇನೆ. ಮುಂದಿನ ಮೂರೂವರೆ ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ತಮ್ಮ ಸಂಪೂರ್ಣ ಸಹಕಾರ ಬೇಕು ಎಂದು ಸಚಿವರಲ್ಲಿ ಶಾಸಕ ಅಶೋಕ್ ರೈ ವಿನಂತಿಸಿದರು.

ರೂಟ್ ಬದಲಿಸಿದ ಸಚಿವರು

ಪುತ್ತೂರಿನಿಂದ ಬಂಟ್ವಾಳ ರಸ್ತೆಯ ಮೂಲಕ ಮೂಡಬಿದ್ರೆಗೆ ಹೋಗುವವರಿದ್ದ ಸಚಿವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ರಸ್ತೆಗಳು ಕೆಟ್ಟು ಹೋಗಿರುವ ಬಗ್ಗೆ ಬೆಳ್ತಂಗಡಿಯ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂರವರು ಸಚಿವರ ಗಮನಕ್ಕೆ ತಂದರು. ಆ ವೇಳೆ ಸಚಿವರು ತಾವು ಕೆಟ್ಟು ಹೋದ ರಸ್ತೆಯನ್ನು ವೀಕ್ಷಣೆ ಮಾಡಲು ಅದೇ ರಸ್ತೆಯ ಮೂಲಕ ತೆರಳಬೇಕು ಎಂದು ಹೇಳಿ ಬಳಿಕ ಉಪ್ಪಿನಂಗಡಿಯಾಗಿ ಬೆಳ್ತಂಗಡಿಗೆ ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಸನ್ನ ಕುಮಾರ್ ಸಿಝ್ಲರ್, ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಯುವಕ ಕಾಂಗ್ರೆಸ್ ಅಧ್ಯಕ್ಷರಾದ ಅಖಿಲ್ ಕಲ್ಲಾರೆ, ಪಕ್ಷದ ಮುಖಂಡರಾದ ಫಾರೂಕ್ ಬಾಯಬ್ಬೆ, ಯುವ ಕಾಂಗ್ರೆಸ್ ನ ಪ್ರಸಾದ್ ಪಾಣಾಜೆ, ಫಾರೂಕ್ ಪೆರ್ನ, ಸಿಯಾನ್ ದರ್ಬೆ, ಅರ್ಷದ್ ದರ್ಬೆ, ಮಹಾಲಿಂಗ ನಾಯ್ಕ್, ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಜಗನ್ನಾಥ ರೈ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.