Putturu : ಬೈಕ್ ನಿಂದ ಬಿದ್ದು ಅಪಘಾತಕ್ಕೀಡಾದ ಅರ್ಚಕರಿಗೆ ನೆರವಾದ ಮುಸ್ಲಿಮರು – ಮಸೀದಿಯಲ್ಲಿ ಚಿಕಿತ್ಸೆ !!

Putturu : ಬೈಕ್ ನಲ್ಲಿ ಹೋಗುವಾಗ ಕೆಳಗೆ ಅಪಘಾತಕ್ಕೀಡಾದ ದೇವಾಲಯದ ಅರ್ಚಕರೊಬ್ಬರಿಗೆ ಮಸೀದಿಯಲ್ಲಿ ಚಿಕಿತ್ಸೆ ನೀಡಿ ಕೋಮು ಸೌಹಾರ್ದತೆ ಮೆರೆದಂತ ಅಪರೂಪದ ಘಟನೆ ಪುತ್ತೂರಿನಲ್ಲಿ ಬೆಳಕಿಗೆ ಬಂದಿದೆ.

 

ಹೌದು, ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯ ಪುತ್ತೂರು(Putturu) ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಮುಂಡ್ಯ ಎಂಬಲ್ಲಿರುವ ಶಾಸ್ತಾರ ದೇವಸ್ಥಾನದಲ್ಲಿ ಅರ್ಚಕರಾಗಿರುವ ರಘುರಾಮ ಭಟ್ ಬುಧವಾರ ಬೈಕ್‌ನಲ್ಲಿ ಬರುವಾಗ, ಕುಂಬ್ರ ಬದ್ರಿಯಾ ಮಸೀದಿಯ ಎದುರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಅವರ ಕಾಲಿಗೆ ಗಾಯವಾಗಿ, ರಕ್ತಸ್ರಾವ ಆಗುತ್ತಿತ್ತು. ಆಗ ಗಾಯಗೊಂಡ ಅರ್ಚಕರ ನೆರವಿಗೆ ಧಾವಿಸಿದ ಸಮೀಪದ ಮಸೀದಿಯಲ್ಲಿದ್ದವರು, ಅವರನ್ನು ಮಸೀದಿಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ. ಅಲ್ಲದೆ ರಿಕ್ಷಾ ಚಾಲಕ ಬಶೀರ್ ಕಡ್ತಿಮಾರ್ ಗಾಯಾಳುವನ್ನು ಸ್ಥಳೀಯ ಕ್ಲಿನಿಕ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಲು ನೆರವಾದರು.

ಇನ್ನು ಆಸ್ಪತ್ರೆ ಚಿಕಿತ್ಸೆ ಮುಗಿಸಿ ತನ್ನ ಬೈಕ್‌ ಇದ್ದ ಮಸೀದಿ ಬಳಿಗೆ ಮರಳಿದ ಅರ್ಚಕ ರಘುರಾಮ್‌ ಭಟ್‌ ಅವರು ಸುಮಾರು ಎರಡು ಗಂಟೆಗಳ ಕಾಲ ಮಸೀದಿಯಲ್ಲಿಯೇ ವಿಶ್ರಾಂತಿ ಪಡೆದಿದ್ದು, ಬಳಿಕ ಅವರ ಆಪ್ತರು ಮನೆಗೆ ಕರೆದೊಯ್ದರು ಎಂದು ತಿಳಿದುಬಂದಿದೆ.

Comments are closed, but trackbacks and pingbacks are open.