Sullia: ಸುಳ್ಯ KSRTC ಬಸ್‌ ನಿಲ್ದಾಣದ ಶೌಚಾಲಯದಲ್ಲಿದ್ದ ಮಹಿಳೆಯ ಫೋಟೋ ತೆಗೆದ ವ್ಯಕ್ತಿ

Share the Article

Sullia: ಸುಳ್ಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯದಲ್ಲಿ ಕಿಡಿಗೇಡಿಯೋರ್ವ ಕಿಟಕಿಯಿಂದ ಮಹಿಳೆಯೊಬ್ಬರ ಫೊಟೋ ತೆಗೆದು ಪರಾರಿಯಾಗಿರುವ ಘಟನೆಯೊಂದು ಶನಿವಾರ ರಾತ್ರಿ ನಡೆದಿದೆ.

ಮಹಿಳೆ ಸುಳ್ಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೋಗಿದ್ದು, ಹಿಂಬದಿಯಲ್ಲಿದ್ದ ಕಿಟಕಿಯ ಗ್ಲಾಸ್‌ ಸರಿದಿದ್ದು, ಇದರ ಮೂಲಕ ಫೊಟೋ ತೆಗೆದಿರುವುದಾಗಿ ಆರೋಪ ಮಾಡಲಾಗಿದೆ. ಆತನ ಕೈಯನ್ನು ನೋಡಿದ ಮಹಿಳೆ ಜೋರಾಗಿ ಕಿರುಚಿದ್ದು, ಅಲ್ಲಿಂದ ಆತ ಪರಾರಿಯಾಗಿದ್ದಾನೆ.

ಮಹಿಳೆ ಸುಳ್ಯ ಠಾಣೆಗೆ ಹಾಗೂ ಬಸ್‌ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಬಸ್‌ ನಿಲ್ದಾಣದ ಸಿಬ್ಬಂದಿಯನ್ನು ಠಾಣೆಗೆ ಕರೆಸಲಾಗಿದ್ದು, ಅವ್ಯವಸ್ಥೆ ಸರಿ ಮಾಡಲು ಹೇಳಿದ್ದಾರೆ. ಘಟನೆ ಕುರಿತು ಯಾವುದೇ ದೂರು ದಾಖಲಾಗಿಲ್ಲ.

ಈ ಹಿಂದೆ ಸುಳ್ಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿರೊಬ್ಬರ ಶೂ, ಬ್ಯಾಗ್‌ ಕಳ್ಳತನ ಆಗುವ ದೃಶ್ಯವೊಂದು ವೈರಲ್‌ ಆಗಿತ್ತು. ಇದೀಗ ಶೌಚಾಲಯದಲ್ಲಿ ಮಹಿಳೆ ಇದ್ದ ಸಂದರ್ಭದಲ್ಲಿ ಫೊಟೋ ಕ್ಲಿಕ್‌ ಮಾಡಲಾಗಿದೆ. ರಾತ್ರಿ ಸಮಯದಲ್ಲಿ ಇಲ್ಲಿ ಯಾವುದೇ ಭದ್ರತಾ ಸಿಬ್ಬಂದಿಗಳು ಇರುವುದಿಲ್ಲ. ಪೊಲೀಸ್‌ ಠಾಣಾ ಬಳಿಯಲ್ಲಿಯೇ ಬಸ್‌ ನಿಲ್ದಾಣವಿದ್ದು, ಅಪರಾಧ ಕೃತ್ಯ ನಡೆಯುತ್ತಿದೆ. ಸಾರ್ವಜನಿಕರು ಈ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments are closed.