RBI ನೂತನ ಗವರ್ನರ್ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ – ಕೇಂದ್ರದಿಂದ ಘೋಷಣೆ !! ಯಾರು ಈ ಸಂಜಯ್‌ ಮಲ್ಹೋತ್ರಾ ?

RBI: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ನೂತನ ಗವರ್ನರ್‌ ಆಗಿ ಕಂದಾಯ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ (Sanjay Malhotra) ಅವರನ್ನು ನೇಮಕ ಮಾಡಲಾಗಿದೆ.‌

ಹೌದು, ಪ್ರಸ್ತುತ ಕಂದಾಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಮಲ್ಹೋತ್ರಾ ಅವರನ್ನ ಮುಂದಿನ ಮೂರು ವರ್ಷಗಳ ಕಾಲ ಆರ್ಬಿಐ ಗವರ್ನರ್ ಆಗಿ ನೇಮಿಸಲಾಗಿದೆ. ಹಾಲಿ ಗರ್ವನರ್‌ ಶಕ್ತಿಕಾಂತ ದಾಸ್‌ (Shaktikanta Das) ಅವರ ಅಧಿಕಾರಾವಧಿ ಡಿ.10ರಂದು (ಮಂಗಳವಾರ) ಕೊನೆಗೊಳ್ಳಲಿದೆ. ಡಿಸೆಂಬರ್‌ 11ರಂದು ಬುಧವಾರ ರಿಸರ್ವ್‌ ಬ್ಯಾಂಕ್‌ನ ಮುಂದಿನ ಗವರ್ನರ್‌ ಆಗಿ ಮಲ್ಹೋತ್ರಾ ಅಧಿಕಾರ ಸ್ವೀಕರಿಸಲಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಅವರು ಕೇಂದ್ರೀಯ ಬ್ಯಾಂಕ್‌ ಅನ್ನು ಮುನ್ನಡೆಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಯಾರು ಈ ಸಂಜಯ್ ಮಲ್ಹೋತ್ರಾ?
ಸಂಜಯ್‌ ಮಲ್ಹೋತ್ರಾ ಅವರು 1990ರ ಬ್ಯಾಚ್‌ನ ರಾಜಸ್ಥಾನ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ. ಅವರು ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್‌ಇಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಅಲ್ಲದೇ ತೆರಿಗೆ ಸಂಗ್ರಹ ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಾಣುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಬಜೆಟ್‌ ವಿಚಾರದಲ್ಲಿ ತೆರಿಗೆ ಸಂಬಂಧಿತ ಪ್ರಸ್ತಾವನೆಗಳನ್ನು ಅವರು ಪರಿಶೀಲಿಸುತ್ತಿದ್ದರು. ಜಿಎಸ್‌ಟಿ ಕೌನ್ಸಿಲ್‌ನ ಪದನಿಮಿತ್ತ ಕಾರ್ಯದರ್ಶಿಯಾಗಿ ಹಾಗೂ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳ ನಿರೀಕ್ಷೆಗಳ ವಿಚಾರಗಳಂಥ ಕ್ಲಿಷ್ಟ ಸಂದರ್ಭಗಳನ್ನು ಜಾಣ್ಮೆಯಿಂದ ನಿಭಾಯಿಸಿದ್ದರು.

ಅಲ್ಲದೆ ವೃತ್ತಿಜೀವನದಲ್ಲಿ ಅವರು ವಿದ್ಯುತ್, ಹಣಕಾಸು ಮತ್ತು ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿಗಳು, ಇತ್ಯಾದಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಲ್ಹೋತ್ರಾ ಅವರು ರಾಜ್ಯದ ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕಂದಾಯ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೊದಲು ಮಲ್ಹೋತ್ರಾ ಅವರು ಹಣಕಾಸು ಸಚಿವಾಲಯದ ಅಡಿಯಲ್ಲಿ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ಮತ್ತು ಬ್ಯಾಂಕಿಂಗ್ ವಲಯವನ್ನು ಬಲಪಡಿಸುವಲ್ಲಿ ಅವರು ನಿರ್ಣಾಯಕ ಪಾತ್ರವನ್ನು ವಹಿಸಿದರು. ಮಲ್ಹೋತ್ರಾ ಅವರು ಜಿಎಸ್‌ಟಿ ಕೌನ್ಸಿಲ್‌ನ ಪದನಿಮಿತ್ತ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಲ್ಹೋತ್ರಾ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಹಣಕಾಸು ಮತ್ತು ತೆರಿಗೆಯಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ. ನೇರ ಮತ್ತು ಪರೋಕ್ಷ ತೆರಿಗೆಗಳಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಮಲ್ಹೋತ್ರಾ ಅವರು ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಅವರು ಯುನೈಟೆಡ್ ಸ್ಟೇಟ್ಸ್‌ನ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

Leave A Reply

Your email address will not be published.