Chikkamagaluru: ಇನ್ಸ್ಟಾಗ್ರಾಮ್ ಪ್ರೀತಿ ಕೊಲೆಯಲ್ಲಿ ಅಂತ್ಯ; ಚಾಕುವಿನಿಂದ ಗೃಹಿಣಿಗೆ ಇರಿದ ಪ್ರಿಯಕರ
Chikkamagaluru: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕನೋರ್ವ ಗೃಹಿಣಿಯೋರ್ವರನ್ನು ಆಕೆಯ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಎದುರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆಯೊಂದು ಬಾಳೆಹೊನ್ನೂರು ಸಮೀಪದ ಕಿಚ್ಚಂಬಿ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದ ಮಹಿಳೆ ತೃಪ್ತಿ ಜೊತೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೇ ಚಿರಂಜೀವಿ. ಪರಿಚಯ ಸ್ನೇಹಕ್ಕೆ ತಿರುಗಿದ್ದು, ಅನಂತರ ತಿಂಗಳ ಹಿಂದೆ ಈಕೆ ಚಿರಂಜೀವಿ ಜೊತೆ ತೃಪ್ತಿ ಹೋಗಿದ್ದಳು. ಈ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅನಂತರ ಈಕೆ ಮನೆಗೆ ವಾಪಾಸು ಬಂದಿದ್ದು, ರಾಜಿ ಬಳಿಕ ಚಿರಂಜೀವಿ ಜೊತೆ ಈಕೆ ಮಾತು, ಸ್ನೇಹವನ್ನು ಬಿಟ್ಟಿದ್ದಳು ಎನ್ನಲಾಗಿದೆ.
ಆದರೆ ಈಕೆ ಮಾತು ಬಿಟ್ಟಿದ್ದರಿಂದ ಕೋಪಗೊಂಡು ಚಿರಂಜೀವಿ ಶನಿವಾರ ತೃಪ್ತಿಯ ಮನೆಗೆ ನುಗ್ಗಿದ್ದು, ಆಕೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ನಂತರ ಆಕೆಯನ್ನು ಮನೆಯಿಂದ ಎಳೆದೊಯ್ದು ಗ್ರಾಮದ ಸಮೀಪದ ಕೆರೆಗೆ ಬಿಸಾಡಿದ್ದಾನೆ. ಈ ಸಮಯದಲ್ಲಿ ತೃಪ್ತಿ ಅವರ ಪತಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.