Dharmasthala: ಧರ್ಮಸ್ಥಳ : ದೇವರ ದರ್ಶನಕ್ಕೆ ಬಂದ ಮಹಿಳೆಯ 12.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಗದು ಕಳವು

Share the Article

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ (Dharmasthala) ದೇವರ ದರ್ಶನಕ್ಕೆ ಬಂದ ಕುಟುಂಬವೊಂದರ ಮಹಿಳೆಯ ಬ್ಯಾಗ್ ನಲ್ಲಿದ್ದ ನಗದು ಸಹಿತ ಸುಮಾರು 12.80 ಲಕ್ಷ ರೂ. ಮೌಲ್ಯದ 40 ಪವನ್ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿದ ಘಟನೆ ನ.24ರಂದು ನಡೆದಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಹಿತಿ ಪ್ರಕಾರ, ಉಡುಪಿ ಜಿಲ್ಲೆಯ ಕಾಪು ಕೋಟೆ ಗ್ರಾಮದ ಜೋಗಿ ಕಂಪೌಂಡ್ ನಿವಾಸಿ ಗಾಯತ್ರಿ ಆರ್. ಜೋಗಿ ಅವರಿಗೆ ಸೇರಿದ ಬ್ಯಾಗ್ ನಲ್ಲಿದ್ದ 10 ಸಾವಿರ ರೂ. ನಗದು ಹಾಗೂ 12.80 ಲಕ್ಷ ರೂ. ಮೌಲ್ಯದ 40 ಪವನ್ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ.

ಗಾಯತ್ರಿ ಅವರು ತನ್ನ ಮಗಳು ರಜಿತಾ, ಆಕೆಯ 7 ತಿಂಗಳ ಮಗು ಹಾಗೂ ತಾಯಿ ತಾರಾ ಜೋಗಿ ಜೊತೆ ನ.24ರಂದು ಬೆಳಗ್ಗೆ 10 ಗಂಟೆಗೆ ಮನೆಯಿಂದ ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದರು.

ಧರ್ಮಸ್ಥಳದಲ್ಲಿ ಕಾರು ಪಾರ್ಕ್ ಮಾಡಿ ಬ್ಯಾಗ್ ನಲ್ಲಿ ಮಗಳ ಹಾಗೂ ಮಗುವಿನ ಹಾಗೂ ತನಗೆ ಸೇರಿದ 40 ಪವನ್ ಚಿನ್ನಾಭರಣಗಳನ್ನು ಎರಡು ಪರ್ಸ್ ನಲ್ಲಿ ಇಟ್ಟು 10 ಸಾವಿರ ನಗದನ್ನು ಇನ್ನೊಂದು ಬ್ಯಾಗ್ ನಲ್ಲಿಟ್ಟು ದೇವರ ದರ್ಶನಕ್ಕೆ ಹೋಗಿದ್ದರು. ದೇವರ ದರ್ಶನಕ್ಕೆ ದೇವಸ್ಥಾನದ ಒಳಗಡೆ ಹೋಗಿ ದೇವರ ದರ್ಶನ ಮುಗಿಸಿ ಮಧ್ಯಾಹ್ನ 2.30 ಗಂಟೆಯ ಸಮಯಕ್ಕೆ ಬ್ಯಾಗನ್ನು ನೋಡಿದಾಗ, ಜಿಪ್ ತೆರೆದುಕೊಂಡಿರುವುದು ಕಂಡುಬಂದಿತ್ತು.

ಕೂಡಲೇ ಬ್ಯಾಗ್ ಪರಿಶೀಲನೆ ಮಾಡಿದಾಗ ಬ್ಯಾಗ್ ನಲ್ಲಿಟ್ಟಿದ್ದ ಸುಮಾರು 40 ಪವನ್ ಚಿನ್ನಾಭರಣಗಳನ್ನು ಇರಿಸಿದ್ದ ಎರಡು ಪರ್ಸ್ ಹಾಗೂ ನಗದು ನಾಪತ್ತೆಯಾಗಿತ್ತು. ಎಲ್ಲಿ ಹುಡುಕಾಡಿದರೂ ಚಿನ್ನಾಭರಣ ಪತ್ತೆಯಾಗಿರಲಿಲ್ಲ. ದೇವರ ದರ್ಶನ ಸಂದರ್ಭದಲ್ಲಿಯೇ ಬ್ಯಾಗಿನಲ್ಲಿದ್ದ ಚಿನ್ನಾಭರಣವನ್ನು ಯಾರೋ ಕಳವುಗೈದಿರಬೇಕೆಂದು ಗಾಯತ್ರಿ ಜೋಗಿ ಅವರು ಇದೀಗ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave A Reply