Hariyana: ಬೆಳಿಗ್ಗೆ ಬಿಜೆಪಿ ಪರ ಪ್ರಚಾರ ನಡೆಸಿ ಮಧ್ಯಾಹ್ನ ಕಾಂಗ್ರೆಸ್ ಸೇರಿದ ಮಾಜಿ ಸಂಸದ !!

Hariyana: ರಾಜಕೀಯ ಅಂದರೆ ಅದು ‘ಮಂಗನಾಟ’ ಎಂದು ಇಂದು ಜನ ಮಾತನಾಡುತ್ತಿದ್ದಾರೆ. ಯಾಕೆಂದರೆ ನಾಯಕರದ್ದು ಬರೀ ಪಕ್ಷಾಂತರವೇ ಕಂಡುಬರುವಾಗ ಮತ್ತಿನ್ನೇನು ಹೇಳಬೇಕು ಅಲ್ವೇ? ಇಂದು ಈ ಪಕ್ಷದಲ್ಲಿರುವ ನಾಯಕ ನಾಳೆ ಯಾವ ಪಕ್ಷದಲ್ಲಿರುತ್ತಾನೆ, ನಾಡಿದ್ದು ಎಲ್ಲಿರಬಹುದು ಎಂಬುದನ್ನು ಬಲ್ಲವರಾರು? ಇಷ್ಟೇಕೆ ಬೆಳಗೆ ಒಂದು ಪಕ್ಷ ಸೇರಿ ಮದ್ಯಾಹ್ನ ಮತ್ತೊಂದು ಪಕ್ಷ ಸೇರುವವರೂ ಇದ್ದಾರೆ. ಅಂತೆಯೇ ಇದೀಗ ಈ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು, ಹರಿಯಾಣದಲ್ಲಿ(Hariyana) ವಿಧಾನಸಭಾ ಚುನಾವಣೆಗೆ(Assembly Election) ದಿನಗಣನೆ ಶುರುವಾಗಿದ್ದು, ಈ ವೇಳೆ ಬಿಜೆಪಿ ಪಾಳಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸಿರ್ಸಾದ ಮಾಜಿ ಸಂಸದ ಅಶೋಕ್ ತನ್ವಾರ್(Ashok Tanwar) ಅವರು ಬಿಜೆಪಿ ತೊರೆದು ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಚ್ಚರಿ ಏನಂದರೆ ಇವರು ಬೆಳಿಗ್ಗೆ ತಾನೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ, ಕಾಂಗ್ರೆಸ್ ನಾಯಕರನ್ನು ಹೀನಾಯವಾಗಿ ಬೈದು, ಮದ್ಯಾಹ್ನದ ವೇಳೆಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಯಸ್, ಗುರುವಾರ ಬೆಳಿಗ್ಗೆ ಜಿಂದ್ ಜಿಲ್ಲೆಯ ಸಫಿಡಾನ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ತನ್ವಾರ್ ರಾಲಿ ನಡೆಸಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಗುರುವಾರ (ಅ. 3) ಮಹೇಂದ್ರಗಢದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ತನ್ವರ್ ಅವರು ಹಿರಿಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಭೂಪೇಂದ್ರ ಸಿಂಗ್ ಹೂಡಾ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

ಅಂದಹಾಗೆ ಅಶೋಕ್ ತನ್ವಾರ್ ಅವರು ಕಳೆದ ಜನವರಿಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ್ದರು ಆದರೆ ಇಂದು ಮತ್ತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 2014 ರಿಂದ 2019 ರವರೆಗೆ ಹರಿಯಾಣ ಕಾಂಗ್ರೆಸ್ ಮುಖ್ಯಸ್ಥರಾಗಿ ಸೇವೆಯನ್ನೂ ಸಲ್ಲಿಸಿದರು. ಇದಾದ ಬಳಿಕ ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದಾದ ಕೆಲವೇ ಸಮಯದಲ್ಲಿ ಬಿಜೆಪಿ ಪಕ್ಷವನ್ನು ಸೇರಿಕೊಂಡರು. ಈ ವೇಳೆ ಸಿರ್ಸಾದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ವಿರುದ್ಧ ಸೋಲುಂಡರು.

 

Leave A Reply

Your email address will not be published.