Donkey Sale: ನೂರಾರು ಕತ್ತೆ ಸೇಲ್ ಮಾಡಿ ರೈತರಿಗೆ ಮೋಸ; ಪ್ರಕರಣ ಸಿಐಡಿ ಕೈಗೆ
Donkey Sale: ಕತ್ತೆಗಳನ್ನು ಮಾರಾಟ ಮಾಡಿ ಲಕ್ಷ ಲಕ್ಷ ದೋಚಿ ಓಡಿ ಓದ ಪ್ರಕರಣಕ್ಕೆ ಕುರಿತಂತೆ ಜಿನ್ನಿ ಮಿಲ್ಕ್ ಕಂಪನಿ ಕಳ್ಳಾಟ ಕೇಸನ್ನು ಸಿಐಡಿ (CID) ತನಿಖೆಗೆ ವಹಿಸಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿದೆ. ಜಿನ್ನಿ ಮಿಲ್ಕ್ ಕಂಪನಿ ಎಂಡಿ, ಮ್ಯಾನೇಜರ್ 13.50 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾರೆ.
ಎಂಡಿ, ಮ್ಯಾನೇಜರ್ ಇಬ್ಬರೂ ನಾಪತ್ತೆಯಾಗಿದ್ದು, ಸಿಐಡಿ ಟೀಂ ಈ ವಂಚನೆ ಪ್ರಕರಣ ಕೈಗೆತ್ತಿಕೊಂಡಿದೆ. ಸಿಐಡಿ ಅಧಿಕಾರಿಗಳ ತಂಡ ಇನ್ನೆರಡು ದಿನಗಳಲ್ಲಿ ಹೊಸಪೇಟೆಗೆ ಬರಲಿದೆ. 300 ಕ್ಕೂ ಅಧಿಕ ಅನ್ನದಾತರು ಈ ಕತ್ತೆ ಹಾಲಿನ ಮೋಸದ ಜಾಲಕ್ಕೆ ಸಿಲುಕಿದ್ದಾರೆ.
ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ತುಮಕೂರು, ಬಾಗಲಕೋಟೆ, ಬಿಜಾಪುರ, ಗದಗ, ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ನೂರಾರು ರೈತರು ಹೊಸಪೇಟೆಗೆ ಆಗಮಿಸಿ ಕತ್ತೆ ಖರೀದಿಗೆ ಹಣ ಹೂಡಿ ಒಡಂಬಡಿಕೆ ಬಾಂಡ್ ಸಮೇತ ದೂರು ಸಲ್ಲಿಸುತ್ತಲೇ ಇದ್ದಾರೆ.
ಈ ಪ್ರಕರಣ ಏನು?
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆರು ತಿಂಗಳ ಹಿಂದೆ ʼಜಿನ್ನಿ ಮಿಲ್ಕ್ʼ ಎಂಬ ಕಂಪನಿ ಆಫೀಸ್ ತೆರೆದು ಕತ್ತೆಗಳ ಸಾಕಾಣಿಕೆ ಕುರಿತು ಹೇಳಿ, ಹೈನುಗಾರಿಕೆಯಿಂದ ತಿಂಗಳಿಗೆ ಲಕ್ಷ ಲಕ್ಷ ದುಡಿಯಿರಿ ಎಂದು ಸ್ಲೋಗನ್ ಹಾಕಿ ರೈತರಿಗೆ ಕತ್ತೆಗಳನ್ನು ಮಾರಾಟ ಮಾಡಿತ್ತು. ರೈತರು ಮೂರು ಲಕ್ಷ ರೂಪಾಯಿಗೆ ಮೂರು ಕತ್ತೆ, ಮೂರು ಕತ್ತೆ ಮರಿಗಳನ್ನು ಖರೀದಿಸಿದ್ದರು. ಮೊದ ಮೊದಲಿಗೆ ಒಂದು ಲೀಟರ್ ಕತ್ತೆ ಹಾಲಿಗೆ 2300 ರೂ. ಗೆ ಕೊಟ್ಟು ಈ ಜಿನ್ನಿ ಕಂಪನಿ ಖರೀದಿ ಮಾಡಿತ್ತು.
ಆದರೆ ವಿಜಯನಗರ ಜಿಲ್ಲಾಡಳಿತ ಕಂಪನಿ ಟ್ರೇಡ್ ಲೈಸನ್ಸ್ ಹೊಂದಿಲ್ಲ ಎಂದು ಆಫೀಸನ್ನು ಕ್ಲೋಸ್ ಮಾಡಿಸಿದೆ. ದೂರು ದಾಖಲಾಗಿ 7 ದಿನ ಕಳೆದರೂ ಜಿನ್ನಿ ಮಿಲ್ಕ್ ಕಂಪನಿ ಎಂಡಿ ನೂತಲಪತಿ ಮುರಳಿ, ಮ್ಯಾನೇಜರ್ ಶಂಕರ ರೆಡ್ಡಿ ಪತ್ತೆಯಾಗಿಲ್ಲ.