OTP: ಚುಚ್ಚುಮದ್ದು ಬೇಕಾದರೆ ಒಟಿಪಿ: ಒಟಿಪಿ ಕೊಟ್ರೆ ಬಿಜೆಪಿ ಸದಸ್ಯತ್ವ, ಬಿಜೆಪಿಯ ಸದಸ್ಯತ್ವ ಅಭಿಯಾನದಲ್ಲಿ ಹೊಸ ವಿವಾದ

Share the Article

OTP: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರನ್ನು ಅವರ ಒಪ್ಪಿಗೆ ಇಲ್ಲದೆಯೇ ಬಿಜೆಪಿ ಸದಸ್ಯನನ್ನಾಗಿ ಮಾಡಿದ ಘಟನೆ ಗುಜರಾತ್ ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ. ಚುಚ್ಚುಮದ್ದು ನೀಡಬೇಕಾದರೆ ಒಟಿಪಿ ಬೇಕೆಂದು ಕೇಳಿ, ಆ ಓಟಿಪಿಯನ್ನು ಬಿಜೆಪಿ ಸದಸ್ಯತ್ವಕ್ಕೆ ಬಳಸಿಕೊಂಡ ನಾಚಿಕೆಗೇಡಿನ ಮಾರ್ಕೆಟಿಂಗ್ ನಡೆದಿದೆ.

ಗುಜರಾತಿನ ವಿಸ್ ನಗರದಲ್ಲಿ ಸಿವಿಲ್ ಆಸ್ಪತ್ರೆಯಲ್ಲಿ ನಾಯಿ ಕಡಿತದ ಚುಚ್ಚುಮದ್ದು ಪಡೆಯಲು ಕುಟುಂಬವೊಂದು ಆಸ್ಪತ್ರೆಗೆ ಹೋಗಿತ್ತು. ಆಗ ಈ ಘಟನೆ ನಡೆದಿದ್ದು, ಚುಚ್ಚು ಮದ್ದು ಪಡೆಯುತ್ತಿದ್ದ ರೋಗಿಯ ಬಳಿ ಮೊಬೈಲ್ ನಂಬರ್ ಕೇಳಿದ ಸಿಬ್ಬಂದಿ ಒಟಿಪಿಯನ್ನು ಕೇಳಿ ಪಡೆದಿದ್ದಾರೆ. ನಂತರ ಅದನ್ನು ದಾಖಲಿಸಿಕೊಳ್ಳುವ ಮೂಲಕ ಆತನನ್ನು ಬಿಜೆಪಿ ಸದಸ್ಯನನ್ನಾಗಿ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಬಿಜೆಪಿಗೆ ಈ ಘಟನೆ ತೀರಾ ಇರಿಸು ಮುರಿಸು ಉಂಟುಮಾಡಿದೆ.

ಬಿಜೆಪಿಯ “ಪ್ರಾಥಮಿಕ ಸದಸ್ಯತ್ವ ಅಭಿಯಾನ – 2024″ದಲ್ಲಿ ಹೊಸ ವಿವಾದ ಶುರುವಾಗಿದೆ. ಬಿಜೆಪಿಯು ಹೊಸ ಬಿಜೆಪಿ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳುವವರಿಗೆ ಗುಜರಾತಿನ ಭಾವನಗರದ ಕಾರ್ಪೊರೇಟರ್‌ಗಳು ಹಣ ನೀಡುತ್ತಿರುವುದನ್ನು ತೋರಿಸುವ ಮತ್ತೊಂದು ವಿಡಿಯೋ ಮಂಗಳವಾರ ವೈರಲ್ ಆಗಿತ್ತು. ಈಗ ಅದೇ ಗುಜರಾತಿನ, ವಿಸ್‌ನಗರ ಸಿವಿಲ್ ಆಸ್ಪತ್ರೆಯಲ್ಲಿ ನಡೆದ ಈ ಪ್ರತ್ಯೇಕ ಘಟನೆಯಲ್ಲಿ ಬಲವಂತವಾಗಿ ಬಿಜೆಪಿ ಸದಸ್ಯತ್ವ ನೀಡಲಾಗಿದೆ. ನಾಯಿ ಕಡಿತದ ಚುಚ್ಚು ಮದ್ದಿಗೆ ಹೋದ ರೋಗಿಯನ್ನು ಆಕೆಗೆ ತಿಳಿಯದೆ ಬಿಜೆಪಿ ಸದಸ್ಯರಾಗಿ ಮಾಡಲಾಗಿದೆ.

ಈಗ ಈ ಬಗ್ಗೆ ರೋಗಿಯ ಪತಿ ಮಾತನಾಡಿದ್ದು, ತಾವು ಮತ್ತು ತಮ್ಮ ಪತ್ನಿ ಪ್ರಕಾಶ್ ಬೆನ್ ದರ್ಬಾರ್ ಬುಧವಾರ ವಿಸ್‌ನಗರ ಸಿವಿಲ್ ಆಸ್ಪತ್ರೆಗೆ ನಾಯಿ ಕಚ್ಚಿದ ಕಾರಣ ಇಂಜೆಕ್ಷನ್‌ಗಾಗಿ ಭೇಟಿ ನೀಡಿದ್ದೆವು. ಅಲ್ಲಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಂತೆಯೇ ರಿಜಿಸ್ಟ್ರಾರ್‌ನಲ್ಲಿ ಚೆಕ್ ಇನ್ ಮಾಡುವುದಕ್ಕೆ ಸೂಚಿಸಲಾಯಿತು. ಬಳಿಕ ಇಂಜೆಕ್ಷನ್ ಪಡೆಯಲು ಒಳಗೆ ಹೋದಾಗ ಆಸ್ಪತ್ರೆಯ ಸಿಬ್ಬಂದಿ ಒಟಿಪಿ ಕೊಡುವಂತೆ ಕೇಳಿದರು. ಒಟಿಪಿ ಯಾಕೆ ಬೇಕು ಎಂದಿದ್ದಕ್ಕೆ, ಇಂಜೆಕ್ಷನ್ ಬೇಕಾದಲ್ಲಿ ಒಟಿಪಿ ನೀಡಬೇಕು ಎಂದರು. ಈ ನಿಯಮವನ್ನು ಪ್ರಶ್ನಿಸಿದ್ದಕ್ಕೆ ಇದು ಸಿವಿಲ್ ಆಸ್ಪತ್ರೆಯ ಹೊಸ ರೂಲ್ಸ್ ಎಂದಿದ್ದಾರೆ ಎಂದು ರೋಗಿಯ ಪತಿ ವಿಕುಂಭ ದರ್ಬಾರ್ ಹೇಳಿದ್ದಾರೆ.

ಅಲ್ಲಿ ಜನರನ್ನು ಬಿಜೆಪಿ ಸದಸ್ಯರನ್ನಾಗಿ ದಾಖಲಿಸಲು ಆಸ್ಪತ್ರೆಯ ಮೂಲಕ ಅಲ್ಲಿನ ಸಿಬ್ಬಂದಿ ಒಟಿಪಿಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಇದೆಲ್ಲಾ ಕಾರ್ಯವಿಧಾನದ ಒಂದು ಭಾಗವಾಗಿದೆ ಎಂದು ನಂಬಿ ನಾನು OTP ಯನ್ನು ನೀಡಿದ್ದೇನೆ, ಆದರೆ ಸ್ವಲ್ಪವೇ ಸಮಯದಲ್ಲಿ ನನಗೆ ಬಿಜೆಪಿ ಸದಸ್ಯತ್ವವನ್ನು ದೃಢೀಕರಿಸುವ ಸಂದೇಶವೊಂದು ಬಂತು. ಇದು ಆಸ್ಪತ್ರೆಗೆ ಸಂಬಂಧಿಸಿಲ್ಲ ಎಂದು ನಾನು ತಕ್ಷಣ ಅರಿತುಕೊಂಡೆ. ಅಲ್ಲಿದ್ದ ಕಾರ್ಯಕರ್ತನೋರ್ವ ನನ್ನನ್ನು ಎದುರುಗೊಂಡು ‘ಈ ಸದಸ್ಯತ್ವ ಬಿಜೆಪಿಗೆ. ಆಸ್ಪತ್ರೆಗೆ ಅಲ್ಲ ಎಂದು ಹೇಳಿದ ಮತ್ತು ಯಾವುದೇ ಮಾತಿಲ್ಲದೆ ಹೊರಟುಹೋದ. ಆಸ್ಪತ್ರೆಯ ಸಿಬ್ಬಂದಿಗೆ ಅವರು ಕಾನೂನುಬಾಹಿರವಾಗಿ ವರ್ತಿಸುತ್ತಿದ್ದಾರೆ ಎಂದು ಹೇಳಿದೆ, ಆದಾಗ್ಯೂ, ಅಧಿಕಾರಿಗಳು ಘಟನೆಯ ಬಗ್ಗೆ ಯಾವುದೇ ದೂರುಗಳನ್ನು ಸ್ವೀಕರಿಸಲಿಲ್ಲ ಎಂದು ವಿಕುಂಬ್ ದರ್ಬಾರ್ ವಿವರಿಸಿದರು.

ಇದೀಗ ವಿಸ್‌ನಗರ ಆಸ್ಪತ್ರೆಯ ಅಧೀಕ್ಷಕ ಪಾರುಲ್ ಪಟೇಲ್ ಸ್ಥಳೀಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, “ಈ ಘಟನೆಯ ಬಗ್ಗೆ ನನಗೆ ಯಾವುದೇ ಔಪಚಾರಿಕ ದೂರು ಬಂದಿಲ್ಲ, ವೀಡಿಯೊ ನೋಡಿದ ನಂತರವೇ ನನಗೆ ಇದು ಅರಿವಾಯಿತು. ಭಾಗಿಯಾಗಿರುವ ಉದ್ಯೋಗಿ ಖಾಯಂ ಸಿಬ್ಬಂದಿ ಅಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಇಲ್ಲ. ಆಸ್ಪತ್ರೆಯಲ್ಲಿ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಚಟುವಟಿಕೆಯನ್ನು ಇತ್ತೀಚೆಗೆ ಬಾಹ್ಯ ಏಜೆನ್ಸಿಯೊಂದು ಇಲ್ಲಿ ನಡೆಸುತ್ತಿದೆ ಎನ್ನುವ ಮಾಹಿತಿಯಿದೆ ಎಂದು ಹೇಳಿದ್ದಾರೆ.

ಮೊನ್ನೆ ಮಂಗಳವಾರ ಒಂದು ವೈರಲ್ ವೀಡಿಯೊದಲ್ಲಿ, ಗುಜರಾತಿನ ಭಾವನಗರದಲ್ಲಿರುವ ಬಿಎಂಸಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಯುವರಾಜ್ ಸಿಂಗ್ ಗೋಹಿಲ್ ಎಂಬವರು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆದಿದ್ದರು. ವೀಡಿಯೊದಲ್ಲಿ, ಗೋಹಿಲ್ ಅವರು “100 ಬಿಜೆಪಿ ಸದಸ್ಯರನ್ನು ಮಾಡಿ ಮತ್ತು ನನ್ನಿಂದ ₹ 500 ತೆಗೆದುಕೊಳ್ಳಿ” ಎಂದು ಹೇಳಿಕೆ ನೀಡುತ್ತಿರುವುದು ದಾಖಲಾಗಿತ್ತು ಈ ಘಟನೆಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೆ ಇಂಥಹಾ ಚೀಪ್ ಅಭಿಯಾನ ಬೇಕಾ ಅನ್ನುವ ಪ್ರಶ್ನೆ ಕೇಳುವಂತೆ ಆಗಿದೆ.

Leave A Reply