

Madhyapradesh: ಸುಮಾರು 15 ಕ್ಕೂ ಹೆಚ್ಚು ಹಸುಗಳನ್ನು ಕ್ರೂರಿ ವ್ಯಕ್ತಿಗಳ ಗುಂಪೊಂದು ಹಿಡಿದಿಡಿದು ನದಿಗೆ ಎಸೆಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹೌದು, ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಈ ಒಂದು ಮನಮಿಡಿಯುವ ಘಟನೆ ನಡೆದಿದ್ದು, ಬಮ್ಹೋರ್ ಬಳಿಯ ರೈಲ್ವೇ ಸೇತುವೆಯ ಕೆಳಗಿರುವ ಸಾತ್ನಾ ನದಿಗೆ ಕೆಲವರು ಹಸುಗಳನ್ನು ಎಸೆಯುತ್ತಿರುವ ವಿಡಿಯೋವೊಂದು ಹೊರಬಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಸೃಷ್ಟಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ನಾಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ (ಆ 27) ಸಂಜೆ ಸಂಭವಿಸಿದ ಘಟನೆಯಲ್ಲಿ 15 ರಿಂದ 20 ಹಸುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೃತ್ಯ ಎಸಗಿದವರು ಬೇಟಾ ಬಗ್ರಿ, ರವಿ ಬಗ್ರಿ, ರಾಂಪಾಲ್ ಚೌಧರಿ ಮತ್ತು ರಾಜ್ಲು ಚೌಧರಿ ಎಂದು ಗುರುತಿಸಲಾಗಿದ್ದು, ನಾಲ್ವರ ವಿರುದ್ಧ ಮಧ್ಯಪ್ರದೇಶ ಗೌವಂಶ್ ವಧ್ ಪ್ರತಿಶೇಧ್ ಅಧಿನಿಯಮ್, ರಾಜ್ಯದಲ್ಲಿ ಗೋಹತ್ಯೆ ತಡೆಯುವ ಕಾನೂನಿನ ಸಂಬಂಧಿತ ವಿಭಾಗಗಳು ಮತ್ತು ಭಾರತೀಯ ನ್ಯಾಯದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.













