R Ashok: ಚನ್ನಪಟ್ಟಣ ಉಪ ಚುನಾವಣೆ- ಇವರನ್ನೇ ಅಭ್ಯರ್ಥಿ ಮಾಡಿರೆಂದು ಹೈಕಮಾಂಡ್ ಬಳಿ ಮನವಿ ಮಾಡುತ್ತೇವೆ ಎಂದ ಆರ್ ಅಶೋಕ್!!
R Ashok: ಚನ್ನಪಟ್ಟಣ ಉಪ ಚುನಾವಣೆ(Channapattana By election) ಕಾವು ಮತ್ತೆ ರಂಗೇರುತ್ತಿದೆ. ಇದೀಗ ಕಾಂಗ್ರೆಸ್ ಗಿಂತಲೂ ದೋಸ್ತಿಗಳಾದ ಬಿಜೆಪಿ-ಜೆಡಿಎಸ್(BJP- JDS) ನಡುವೆ ಈ ಚುನಾವಣೆಯ ಚರ್ಚೆಗಳು ಗರಿಗೆದರಿವೆ. ಟಿಕೆಟ್ ಯಾರಿಗೆ ಎಂಬ ಪ್ರಶ್ನೆ ಎದುರಾಗಿದೆ. ಜೆಡಿಎಸ್ ಪರೋಕ್ಷವಾಗಿ ನನಗೆಂದರೆ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್(C P Yogishwar) ನೇರವಾಗಿಯೇ ಟಿಕೆಟ್ ನನಗೆ ಎಂದಿದ್ದಾರೆ. ಒಟ್ಟಿನಲ್ಲಿ ಮೈತ್ರಿ ಒಳಗೆ ಇದು ಗೊಂದಲದ ಗೂಡಾಗಿದೆ. ಈ ನುಡವೆ ರಾಜ್ಯದ ವಿಪಕ್ಷ ನಾಯಕ ಆರ್ ಅಶೋಕ್(R Ashok) ಅವರು ನಾವು ಹೈಕಮಾಂಡ್ ಬಳಿ ತೆರಳಿ ಇವರಿಗೇ ಟಿಕೆಟ್ ಕೊಡಿ ಎಂದು ಮನವಿ ಮಾಡುತ್ತೇವೆ ಎಂದಿದ್ದಾರೆ.
ಹೌದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ನಂತರ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬ ಪ್ರಶ್ನೆ ಉದ್ಭವಿಸಿದ್ದು, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಇದಕ್ಕೆ ಉತ್ತರಿಸಿದ್ದು, ಉಪಚುನಾವಣೆಯ ಟಿಕೆಟ್ ಅನ್ನು ಸಿಪಿ ಯೋಗೇಶ್ವರ್ (CP Yogeshwar) ಅವರಿಗೆ ನೀಡುವಂತೆ ಹೈಕಮಾಂಡ್ ಬಳಿ ಮನವಿ ಮಾಡುತ್ತೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು, ಅಶ್ವತ್ಥ್ ನಾರಾಯಣ ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿ ಮಾಡಿದ್ದೇವೆ. ಹಾಗೆ ಹೆಚ್. ಡಿ.ಕುಮಾರಸ್ವಾಮಿ (HD Kumarawamy) ಅವರ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಸಿಪಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಬಳಿ ಕೇಳುತ್ತೇವೆ. ಯಾವಾಗ ದೆಹಲಿಗೆ ಹೋಗುತ್ತೇವೆ ಎಂದು ಶೀಘ್ರದಲ್ಲೇ ತಿಳಿಸುತ್ತೇವೆ ಎಂದ ಹೇಳಿದರು.