Actor Darshan: ಜೈಲಿನಲ್ಲಿ ನಟ ದರ್ಶನ್ ಮಾತಿನ ವಿಡಿಯೋ ಕಾಲ್ ವೈರಲ್: ದುಡ್ಡಿದ್ರೆ ದುನಿಯಾ ಅಂದ್ರೇ ಹೀಗೆ ನೋಡಿ

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ (Actor Darshan) ಸೆಂಟ್ರಲ್ ಜೈಲಿನಲ್ಲಿದ್ದರೂ ಐಷಾರಾಮಿ ಜೀವನ ಮಾಡುತ್ತಿದ್ದಾನೆ ಎಂಬ ಸುದ್ದಿ ಆಗಿದ್ದು, ಅದಕ್ಕೆ ಸಂಬಂಧ ಪಟ್ಟಂತೆ ಕೆಲವು ಸಾಕ್ಷಿಗಳು ದೊರೆತಿದೆ.

ಹೌದು, ಈಗಾಗಲೇ ನಟ ದರ್ಶನ್ ಜೈಲಿನಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಕುಳಿತು ಹರಟೆ ಹೊಡೆಯುತ್ತಿದ್ದು, ಜೊತೆಗೆ ಒಂದು ಕೈಯಲ್ಲಿ ಕಾಫಿ ಮಗ್ , ಇನ್ನೊಂದು ಕೈಯಲ್ಲಿ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ಇದರ ಜೊತೆಗೆ ಜೈಲಿನಲ್ಲಿ ಮೊಬೈಲ್ ಬಳಸಲು ಅವಕಾಶ ಇಲ್ಲದಿದ್ದರೂ ಜೈಲಿನಲ್ಲಿದ್ದುಕೊಂಡೇ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮೂಲಕ ನಗು ಮುಖದಲ್ಲಿ ಹೊರಗಿನವರೊಂದಿಗೆ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಈಗಾಗಲೇ ಬೆಂಗಳೂರಿನ ಬಾಣಸವಾಡಿಯಲ್ಲಿ ಮೇ 7ರಂದು ನಡೆದ ರೌಡಿಶೀಟರ್ ಕಾರ್ತಿಕೇಯನ್ ಎಂಬುವವನ ಕೊಲೆ ಪ್ರಕರಣದಲ್ಲಿ ಈ ರೌಡಿಶೀಟರ್ ಧರ್ಮ ಕೂಡ ಭಾಗಿಯಾಗಿದ್ದನು. ಆರೋಪಿಯಾಗಿದ್ದ ಧರ್ಮನನ್ನು ಬಂಧಿಸಿದ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು. ಆದ್ರೆ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದರೂ ಹಣ ಬಲದಿಂದ ಧರ್ಮ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದನು. ಇನ್ನು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ ದರ್ಶನ್‌ಗೆ ಅಭಿಮಾನಿಯೂ ಆಗಿರುವ ಧರ್ಮ ಜೈಲಿನಲ್ಲಿ ತುಸು ಹೆಚ್ಚಾಗಿಯೇ ಪರಿಚಿತನಾಗಿದ್ದಾನೆ. ಇನ್ನು ದರ್ಶನ್ ಪರಿಚಯವನ್ನು ತೀರಾ ಸಲುಗೆಗೆ ತೆಗೆದುಕೊಂಡ ರೌಡಿಶೀಟರ್ ಧರ್ಮ ಜೈಲಿನಲ್ಲಿ ತನ್ನ ಆಪ್ತನಿಗೆ ಇನ್‌ಸ್ಟಾಗ್ರಾಮ್ ಮೂಲಕ ವಿಡಿಯೋ ಕರೆ ಮಾಡಿ ಮಾತನಾಡಿದ್ದಾನೆ. ನಂತರ, ತನ್ನ ಬಳಿ ನಟ ದರ್ಶನ್ ಕೂಡ ಇದ್ದಾನೆ ಮಾತನಾಡು ಎಂದು ಹೇಳಿದ್ದಾನೆ. ಆಗ ದರ್ಶನ್‌ನೊಂದಿಗೆ ಹೊರಗಿನ ವ್ಯಕ್ತಿ ಮಾತನಾಡಿದ್ದಾನೆ.
ಆದರೆ, ದರ್ಶನ್ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ರೌಡಿಶೀಟರ್ ಧರ್ಮನ ಆಪ್ತ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಆ ರೆಕಾರ್ಡ್ ತುಣುಕನ್ನು ಮೊಬೈಲ್‌ನ ಸ್ಟೇಟಸ್‌ಗೆ ಹಾಕಿಕೊಂಡಿದ್ದಾನೆ. ಮತ್ತು ಅದನ್ನು ಕೂಡಲೇ ಡಿಲೀಟ್ ಮಾಡಿದ್ದಾನೆ. ಆದರೆ, ಅಷ್ಟರೊಳಗೆ ಆ ವಿಡಿಯೋ ಕ್ಲಿಪ್ ಎಲ್ಲೆಡೆ ಲೀಕ್ ಆಗಿದೆ. ಇದೀಗ ವಿಐಪಿ ಸೆಲ್‌ನಲ್ಲಿರುವ ನಟ ದರ್ಶನ್‌ಗೆ ಐಷಾರಾಮಿ ವ್ಯವಸ್ಥೆ ಲಭ್ಯವಾಗುತ್ತಿದೆ ಎಂಬುದಕ್ಕೆ ಇಂದಿನ ಫೋಟೋ ಮತ್ತು ವಿಡಿಯೋಗಳೇ ಸಾಕ್ಷಿಯಾಗಿವೆ.
ಒಟ್ಟಿನಲ್ಲಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದರೂ ಕಂತ್ರಿ ಬುದ್ದಿ ಬಿಡದ ನಟ ದರ್ಶನ್‌ನ ಅಸಲಿ ಸತ್ಯಗಳು ಒಂದೊಂದೇ ಬಯಲಾಗುತ್ತಲೇ ಇವೆ.