Weather Forecast: ಇಂದು ಕರ್ನಾಟಕದ ಹವಾಮಾನ ಹೇಗಿದೆ? ಎಲ್ಲೆಲ್ಲಿ ಮಳೆಯ ಮುನ್ಸೂಚನೆ ಇದೆ?
Weather Forecast: ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಭಾಗದ ಅಲ್ಲಲ್ಲಿ ಬಿಟ್ಟು ಬಿಟ್ಟು ಮಳೆ ಆಗುವ ಮುನ್ಸೂಚೆನೆ ಇದೆ. ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಲ್ಲಿ ಮಳೆ ಸ್ವಲ್ಪ ಜಾಸ್ತಿ ಇರಬಹುದು. ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು, ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಹಾಸನ ಜಿಲ್ಲೆಯಲ್ಲಿ ಮೋಡ ಹಾಗೂ ಅಲ್ಲಲ್ಲಿ ಒಂದೆರಡು ತುಂತುರು ಮಳೆಯಾಗುವ ಸೂಚನೆ ಇದೆ. ಇನ್ನುಳಿದಂತೆ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕೊಂಚ ಮಳೆಯ ಪ್ರಮಾಣ ಜಾಸ್ತಿ ಇರಬಹುದು.
ಇನ್ನು ಮಧ್ಯ ಕರ್ನಾಟಕಕ್ಕೆ ಬಂದರೆ ದಾವಣಗೆರೆಯ ಒಂದೆರಡು ಕಡೆ, ಹಾವೇರಿ, ಧಾರವಾಡದಲ್ಲಿ ಅಲ್ಲಲ್ಲಿ ಮಳೆಯಾಗಬಹುದು. ಅತ್ತ ಉತ್ತರ ಕರ್ನಾಟಕದಲ್ಲಿ ನೋಡೋದಾದ್ರೆ ಯಾದಗಿರಿ, ಕಲಬುರ್ಗಿ, ಬೀದರ್ ಬೆಳಗಾವಿ ಜಿಲ್ಲೆಗಳ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯಾಗುವ ಮುನ್ಸೂಚನೆ ಇದೆ. ರಾಜ್ಯದ ಇನ್ನುಳಿದ ಕೆಲ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಲಿದ್ದು ಒಂದೆರಡು ಕಡೆ ತುಂತುರು ಮಳೆಯಾಗಬಹುದು.
ಈಗಿನಂತೆ ಉತ್ತರ ಭಾರತದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಂತಹ ತಿರುವಿಕೆಯು ಮಧ್ಯಪ್ರದೇಶದಿಂದ ಪಶ್ಚಿಮಕ್ಕೆ ಚಲಿಸುತ್ತಿದ್ದು, ಆಗಸ್ಟ್ 28ರಂದು ಉತ್ತರ ಗುಜರಾತ್ ಮೂಲಕ ಅರಬ್ಬಿ ಸಮುದ್ರ ಸೇರುವ ಲಕ್ಷಣಗಳಿವೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಆಗಸ್ಟ್ ತಿಂಗಳ ಕೊನೆಯ ತನಕವೂ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ರಾಜ್ಯದ ಒಳನಾಡು ಭಾಗಗಳಲ್ಲಿ ಮೋಡ ಹಾಗೂ ಒಂದೆರಡು ಕಡೆ ಸಾಮಾನ್ಯ ಮಳೆ ಹೊರತುಪಡಿಸಿ ಜೋರು ಮಳೆ ಬೀಳುವ ಸಾಧ್ಯತೆ ಗೋಚರಿಸುತ್ತಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.