Belthangady Murder: ಬೆಳಾಲು ಶಿಕ್ಷಕ ಬಾಲಕೃಷ್ಣ ಭಟ್ ಹತ್ಯೆ, ತೀರಾ ಹತ್ತಿರದ ಸಂಬಂಧಿಯಿಂದಲೇ ನಡೆಯಿತಾ ದುಷ್ಕೃತ್ಯ?
Belthangady: ಬೆಳ್ತಂಗಡಿ ತಾಲೂಕಿನ ಬೆಳಾಲಿನಲ್ಲಿ (Belalu) ಹಾಡಹಗಲೇ ಮನೆಯ ಅಂಗಳದಲ್ಲಿಯೇ ಶಾಲಾ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ (83) ರವರನ್ನು ಕೊಲೆ ಮಾಡಲಾದ ಘಟನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದ್ದು, ತೀರ ಹತ್ತಿರದ ಸಂಬಂಧಿಗಳೇ ಈ ಕೊಲೆ ಮಾಡಿದ್ದಾರಾ? ಎನ್ನುವ ಬಗ್ಗೆ ಅನುಮಾನ ಮಾಹಿತಿ ತಿಳಿದು ಬಂದಿದೆ.
ಜಿಲ್ಲಾ ಪೋಲಿಸ್ ತಂಡಗಳು ಮತ್ತು ಎಸ್ ಪಿ ಯವರು ಎರಡೆರಡು ಬಾರಿ ಕೊಲೆ ನಡೆದ ಜಾಗಕ್ಕೆ ಆಗಮಿಸಿದ್ದರು. ಆದರೆ ಸದ್ಯದ ಮಾಹಿತಿಯ ಪ್ರಕಾರ ಈವರೆಗೆ ಕೊಲೆಯ ನಡೆದ ಅಪರಾಧಿಯ ಜಾಡು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕೊಲೆ ಕೃತ್ಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಬಾಲಕೃಷ್ಣ ಭಟ್ ಕಿರಿಯ ಮಗ ಸುರೇಶ್ ಭಟ್ ಆ.20 ರಂದು ರಾತ್ರಿ ನೀಡಿದ ದೂರಿನಂತೆ ಬಿ.ಎನ್.ಎಸ್ 103 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ತಂಡ, ಧರ್ಮಸ್ಥಳ ಇಬ್ಬರು ಸಬ್ ಇನ್ಸಪೆಕ್ಟರ್ ಗಳ ತಂಡ ಹಾಗೂ ಮತ್ತೊಂದು ತಂಡದಿಂದ ವಿವಿಧ ತಂಡಗಳನ್ನು ದ.ಕ.ಎಸ್ಪಿ ಯತೀಶ್.ಎನ್ ಮಾಡಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ:
ಆ.20 ರಂದು ದ. ಕ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ (Belthangady) ಬೆಳಾಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಇರುವ ಬಾಲಕೃಷ್ಣ ಭಟ್ ಅವರ ಮನೆಯಲ್ಲಿ ವೃದ್ಧ ಬಾಲಕೃಷ್ಣ ಭಟ್ ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಅಲ್ಲದೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದಂತೆ ಮಾಡಿ ಹತ್ಯೆ ನಡೆಸಲಾಗಿತ್ತು. ಗೆಳೆಯನ ಮನೆಗೆ ಮಧ್ಯಾಹ್ನ ಹೋಗಿ ಅಲ್ಲಿಂದ ವಾಪಸ್ ಬಂದಿದ್ದ ಕೆಲವೇ ಗಂಟೆಗಳಲ್ಲಿ ಬಾಲಕೃಷ್ಣ ಭಟ್ ಅವರ ಕೊಲೆ ನಡೆದಿತ್ತು.
ಬಾಲಕೃಷ್ಣ ಭಟ್ ಅವರು ಶಿಕ್ಷಕರಾಗಿದ್ದು ಸಾಕಷ್ಟು ಆಸ್ತಿಪಾಸ್ತಿ ಮಾಡಿದ್ದಾರೆ. ಉಜಿರೆಯಲ್ಲಿ ಕೆಲವು ಸ್ಥಿರಾಸ್ತಿ ಮತ್ತು ಮಡಂತ್ಯಾರ್ ಎಂಬಲ್ಲಿ ಒಂದಷ್ಟು ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿಗಳಿವೆ. ಆರ್ಥಿಕಾಗಿ ಅಥವಾ ಯಾವುದಾದರೂ ಹಳೆಯ ವ್ಯಾಜ್ಯಕ್ಕಾಗಿ ಕೊಲೆ ನಡೆಯುತ್ತಾ ಎನ್ನುವ ಆಯಾಮದಲ್ಲೂ ಕೂಡ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಇದೀಗ ಸಂಬಂಧಿಕರ ಕಡೆಗೇ ಅನುಮಾನದ ಮುಳ್ಳು ತಿರುಗಿದೆ. ಭಟ್ಟರಿಗೆ ಮೂರು ಮಕ್ಕಳು. ಎರಡು ಗಂಡು ಒಂದು ಹೆಣ್ಣು. ದೊಡ್ಡ ಮಗ ಹರೀಶ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಅವರ ಕುಟುಂಬ ಕೂಡಾ ಬೆಂಗಳೂರಿನಲ್ಲಿ ನೆಲ್ಲಿಸಿದೆ. ಇನ್ನೋರ್ವ ಮಗ ಬೆಳಾಲಿನಲ್ಲಿ ತಂದೆಯ ಜತೆ ವಾಸವಿದ್ದಾರೆ. ಮಗಳನ್ನು ಕಾಸರಗೋಡು ಕಡೆಗೆ ಕೊಟ್ಟಿದ್ದು, ಅಪ್ಪನ ಸಾವಿನ ನಂತರ ಎಲ್ಲ ಮಕ್ಕಳು ಅಂತ್ಯಕ್ರಿಯೆ ಸಂದರ್ಭ ಬಂದಿದ್ದರು.
ಆದರೆ ಕೆಲವು ತೀರ ಆತ್ಮೀಯ ಸಂಬಂಧಿಕರು ತರಾತುರಿಯಲ್ಲಿ ಬಂದು ಹೋಗಿದ್ದರ ಬಗ್ಗೆ ವರದಿಯಾಗಿದೆ. ಅದುವೇ ಈಗ ಅಪರಾಧಿಯನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡಿದೆ ಎನ್ನಲಾಗುತ್ತಿದೆ. ಹಾಗಾಗಿ ಶಿಕ್ಷಕ ಬಾಲಕೃಷ್ಣ ಭಟ್ ಅವರ ಕುಟುಂಬಸ್ಥರಲ್ಲಿ ಒಬ್ಬರ ಕಡೆಗೆ ಬಲವಾದ ಅನುಮಾನ ಉಂಟಾಗಿದೆ. ಈ ಬಗ್ಗೆ ಊರಿನ ತುಂಬಾ ಗುಸು-ಗುಸು ಸುದ್ದಿ ಹರಡುತ್ತಿದ್ದರೂ ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿಗಾಗಿ ಕಾಯಲಾಗುತ್ತಿದೆ.
ಒಟ್ಟಾರೆ ಭಟ್ಟರ ಸಾವಿನ ನಂತರ ಈ ಕೊಲೆ ಕೃತ್ಯದಲ್ಲಿ ತೀರಾ ಕುಟುಂಬಸ್ಥರು ಭಾಗಿಯಾಗಿದ್ದಾರಾ ಎನ್ನುವ ಅನುಮಾನ ಹೊರಗೆ ದಟ್ಟವಾಗಿ ಬಂದಿದ್ದು, ಈ ಕುರಿತು ಸದ್ಯದಲ್ಲೇ ಮಾಹಿತಿ ಹೊರ ಬೀಳಲಿದೆ.