Illegal entry: ರಾಷ್ಟ್ರೀಯ ಉದ್ಯಾನವನಕ್ಕೆ ಅಕ್ರಮ ಪ್ರವೇಶ: ಅರಣ್ಯ ಇಲಾಖೆ ಮಾಡಿದ್ದೇನು..?

Illegal entry: ‘ಸ್ವಾತಂತ್ರ್ಯ ದಿನಾಚರಣೆಯಂದು (ಆಗಸ್ಟ್ 15) ರಾಜಸ್ಥಾನದ ರಣಥಂಬೋರ್‌ನ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಫಾರಿ ಮಾಡೋದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಆದರೆ ಅಂದು ಉದ್ಯಾನವನಕ್ಕೆ ಅಕ್ರಮವಾಗಿ ಪ್ರವೇಶ (Illegal entry) ಮಾಡಿ ವನ್ಯಜೀವಿಗಳಿಗೆ ತೊಂದರೆ ಮಾಡಿರುವ ಆರೋಪದಡಿ 14 ಮಹೀಂದ್ರ ಎಸ್‌ಯುವಿ ಮಾಲೀಕರಿಗೆ ರಾಜಸ್ಥಾನ ಅರಣ್ಯ ಇಲಾಖೆ ಬರೋಬ್ಬರಿ ತಲಾ ₹1 ಲಕ್ಷ ದಂಡ ವಿಧಿಸಿದೆ ಎಂದು ವರದಿಯಾಗಿದೆ.

ಸಫಾರಿ ಮಾತ್ರವಲ್ಲದೆ, ಪ್ರವಾಸಿಗರಿಗೆ ಮತ್ತು ಖಾಸಗಿ ವಾಹನಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿತ್ತು. ಆದರೂ ಎಸ್‌ಯುವಿಗಳಲ್ಲಿ ರ್‍ಯಾಲಿ ನಡೆಸಲು ಅರಣ್ಯ ಇಲಾಖೆ ರೇಂಜರ್ ಮತ್ತು ಗಾರ್ಡ್ಗಳೇ ಅನುಮತಿ ಕೊಟ್ಟಿದ್ದಾರೆ’ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇದೀಗ ಅರಣ್ಯ ರಕ್ಷಕರಾದ ವಿಷ್ಣು ಗುಪ್ತಾ ಮತ್ತು ಸುರೇಶ್ ಕುಮಾರ್ ಅವರನ್ನು ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ‘ಪ್ರಕರಣ ಸಂಬಂಧ ದಂಡ ಪಾವತಿಸಿದ ನಂತರ ಎಸ್‌ಯುವಿ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ರ್‍ಯಾಲಿಯನ್ನು ಯಾರು ಆಯೋಜನೆ ಮಾಡಿದ್ದಾರೆ ಅನ್ನುವ ಬಗ್ಗೆ ತನಿಖೆ ಕೈ ಗೊಳ್ಳುತ್ತಿದ್ದೇವೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಪಿ.ಕೆ. ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.
ಒಂದು ವಿಷಯ ಏನೆಂದರೆ ಅದೃಷ್ಟವಶಾತ್ ರ್‍ಯಾಲಿಯಲ್ಲಿ ಪಾಲ್ಗೊಂಡವರು ಯಾರೂ ಮರಗಳಿಗೆ ಹಾನಿ ಮಾಡಿಲ್ಲ. ಹಾಗೂ ಹಾರ್ನ್ ಮಾಡುವ ಕೆಲಸ ಮಾಡಿಲ್ಲ. ಹಾಗೆ ಅರಣ್ಯದ ಇತರೆ ಯಾವುದೇ ವಸ್ತುಗಳನ್ನು ಬಳಸಿಕೊಂಡಿಲ್ಲ. ಈ ಕಾರಣಕ್ಕಾಗಿ ದಂಡ ಪಾವತಿಸಿದ ಕೂಡಲೆ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲವಾದಲ್ಲಿ ವಾಹನಗಳ ಬಿಡುಗಡೆ ಅಸಾಧ್ಯವಾಗುತ್ತಿತ್ತತು ಎಂದು ಉಪಾಧ್ಯಾಯ ಹೇಳಿದ್ದಾರೆ. ಆಟೋ ಚಾಲಕರಾದ ರತ್ತನ್ ಧಿಲ್ಲೋನ್ ಎಂಬುವವರು ಘಟನೆಯ ವಿಡಿಯೊ ಮಾಡಿ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಹಾಗೆ ಈ ರೀತಿಯ ನಿರ್ಲಕ್ಷ್ಯಕ್ಕೆ ಮಹೀಂದ್ರಾ ಕಂಪನಿಯೇ ಹೊಣೆ ಹೊತ್ತುಕೊಳ್ಳಬೇಕು’ ಎಂದು ಆಗ್ರಹ ಮಾಡಿದ್ದಾರೆ.