Bike Wheeling: ಯುವಕರ ಬೈಕ್ ವ್ಹೀಲಿಂಗ್ ಕ್ರೇಜ್: 44 ಯುವಕರನ್ನು ಪೊಲೀಸರು ಏನ್ ಮಾಡಿದರು..?

Bike Wheeling: ಯೌವನ ಅನ್ನೋದು ಲಗಾಮು ಇಲ್ಲದ ಕುದುರೆ ರೀತಿ. ಪೋಷಕರು ಅದೆಷ್ಟೇ ಬುದ್ದಿ ಹೇಳಿದರು ಕೇಳದ ವಯಸ್ಸು. ಬೈಕೊಂದು ಕೈಯಲ್ಲಿ ಇದ್ದರೆ ಈಗಿನ ಯೂತ್ಸ್ ಗೆ ಕೆಟ್ಟದ್ದು, ಕಾನೂನು, ತಮ್ಮ ಜೀವದ ಬೆಲೆ ಯಾವುದು ತಿಳಿಯುವುದಿಲ್ಲ. ಅದರಲ್ಲೂ ಬೆಂಗಳೂರಿನ ಹುಡುಗರು ಇಂಥ ವಿಷಯದಲ್ಲಿ ಒಂದು ಕೈ ಮೇಲು. ಯುವಕರಿಗೆ ಇತ್ತೀಚೆಗೆ ವೀಲಿಂಗ್ ಕ್ರೇಜ್ ಜಾಸ್ತಿ. ಕೆಂಪೇಗೌಡ ಅಂತರಾಷ್ಚ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಕೆಲ ಯುವಕರು ಬೈಕ್ ವ್ಹೀಲಿಂಗ್ ನಡೆಸಿದ ಘಟನೆ ನಡೆದಿದೆ. ಈ ಸಂಬಂಧ ಸುಮಾರು 44 ಯುವಕರನ್ನು ಯಲಹಂಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪುಂಡಾಟ ಮೆರೆದ ಯುವಕರ ಮೇಲೆ ಪೊಲೀಸರು 33 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಯಲಹಂಕದ ಚಿಕ್ಕಜಾಲ ಹತ್ತಿರ ಏರ್ಪೋರ್ಟ್ ರಸ್ತೆಯಲ್ಲಿ 44 ಮಂದಿಯ ಪುಂಡ ಹುಡುಗರ ಗುಂಪು ಬೈಕ್ ವ್ಹೀಲಿಂಗ್ (Bike Wheeling) ಮಾಡಿ ಬೇಜಾವಬ್ದಾರಿ ಮೆರೆಯುತ್ತಿದ್ದರು. ಇದೇ ರಸ್ತೆಯಲ್ಲಿ ಓಡಾಡುತ್ತಿದ್ದ ಪ್ರಾಯಾಣಿಕರು ಹಾಗೂ ಸಾರ್ವಜನಿಕರು ಈ ಯುವಕರ ಪುಂಡಾಟವನ್ನು ತಮ್ಮ ಮೊಬೈಲ್ನಲ್ಲಿ ಶೂಟ್ ಮಾಡಿದ್ದಾರೆ. ದೃಶ್ಯ ಸೆರೆ ಹಿಡಿಯುದ್ದನ್ನು ಕಂಡ ಹುಡುಗನೊಬ್ಬ ಅಸಭ್ಯವಾಗಿ ವರ್ತಿಸಿ, ಕಾರ್ ಚಾಲಕನಿಗೆ ಬೆದರಿಕೆ ಹಾಕಿದ್ದಾನೆ. ಕಾರ್ ಚಾಲಕ ಮೊಬೈಲ್ನಲ್ಲಿ ಸೆರೆ ಹಿಡಿದ  ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ಬೈಕ್ ವ್ಹೀಲಿಂಗ್ ಮಾಡುವ ಮೂಲಕ ಯುವಕರು ಕೇವಲ ತಮ್ಮ ಪ್ರಾಣಗಳಿಗೆ ಕುತ್ತು ತಂದುಕೊಳ್ಳುವುದಲ್ಲದೆ ಇತರ ಅಮಾಯಕರ ಪ್ರಾಣಕ್ಕೆ ಆಪತ್ತು ತರುತ್ತಿದ್ದಾರೆ. ಈ ರೀತಿ ಪುಂಡಾಟ ಮೆರೆಯುವ ಯುವಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡಿದ್ದರು. ವಿಡಿಯೋಗಳನ್ನು ಆಧಾರವಾಗಿ ಇಟ್ಟುಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು, ಏರ್ಪೋರ್ಟ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದ 44 ಯುವಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಯಲಹಂಕ ವಿಭಾಗದಲ್ಲಿ ಈ ಘಟನೆ ಸಂಬಂಧ ಯುವಕರ ವಿರುದ್ಧ33 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ 9, ಯಲಹಂಕ ಠಾಣೆಯಲ್ಲಿ 6 ಮತ್ತು ಹೆಬ್ಬಾಳ ಠಾಣೆಯಲ್ಲಿ 18 ಪ್ರಕರಣಗಳು ದಾಖಲಿಸಲಾಗಿವೆ. ಈ ರೀತಿ ಬೈಕ್ ವ್ಹೀಲಿಂಗ್ ಮಾಡುವ ಪುಂಡರ ಹೆಡೆಮುರಿ ಕಟ್ಟಲು ಪೊಲೀಸರು ಹೆಚ್ಚಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.

Leave A Reply

Your email address will not be published.