Rummy : ಮೂರು ಜೀವ ಬಲಿ ಪಡೆದ ರಮ್ಮಿ: ಆನ್ಲೈನ್ ಆಟದ ಚಟ ಇಡೀ ಕುಟುಂಬ ಭಸ್ಮ !

Rummy: ನೀವು ದುಡ್ಡು ಮಾಡಬೇಕಾ? ಹಾಗಾದರೆ ರಮ್ಮಿ ಆಟವಾಡಿ. ಯಾವುದೇ ಅಪಾಯವಿಲ್ಲ ಎಂದು ಯಾವುದೇ ವೆಬ್ ಲಿಂಕ್ ಒತ್ತಿದರೂ ಓಪನ್ ಆಗುವ ರಮ್ಮಿ ಬಗ್ಗೆ ಎಲ್ಲರೂ ಎಚ್ಚರದಿಂದಿರಿ. ಇದೆಲ್ಲಾ ಗ್ರಾಹಕರನ್ನು ಬಲೆ ಬೀಳಿಸುವ ತಂತ್ರ. ಒಂದು ಬಾರಿ ಇದಕ್ಕೆ ಇಳಿದರೆ ಮತ್ತೆ ಗೀಳಾಗಿ ಪರಿಣಮಿಸುತ್ತದೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಇದೀಗ ಅದರ ಚಟಕ್ಕೆ ಬಿದ್ದ ಮನೆಯ ಯಜಮಾನ ಮನೆ ಮಂದಿಯನ್ನೆಲ್ಲಾ ಮೃತ್ಯ ಕೂಪಕ್ಕೆ ತಳ್ಳಿದ್ದಾನೆ.

ಸಾಲದ ಸುಳಿಗೆ ಸಿಲುಕಿ ಒಂದೇ ಮನೆಯ ಮೂರು ಮಂದಿ ನಾಲೆಗೆ ಹಾರಿ ತಮ್ಮ ಜೀವವನ್ನೇ ಕಳೆದುಕೊಂಡಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಕೆರೆಬೀದಿಯಲ್ಲಿ ನಡೆದಿದೆ. ಮೃತ ವ್ಯಕ್ತಿಗಳು ಶ್ರೀನಿವಾಸ್ (43), ಆತನ ಪತ್ನಿ ಶ್ವೇತಾ (36) ಹಾಗೂ ಪುತ್ರಿ ನಾಗಶ್ರೀ (13) ಎಂದು ತಿಳಿದುಬಂದಿದೆ. ಶ್ರೀನಿವಾಸ್ ಕಾರು ಚಾಲಕನಾಗಿದ್ದ. ಇನ್ನು ಈತನ ಪತ್ನಿ ಶ್ವೇತಾ ಖಾಸಗಿ ಶಾಲೆಯೊಂದರಲ್ಲಿ ಟೀಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರ ಮಗಳು ನಾಗಶ್ರೀ ಏಳನೇ ತರಗತಿ. ಈ ಮೂವರ ಜೀವವನ್ನು ರಮ್ಮಿ ಬಲಿ ಪಡೆದಿದೆ.
ಡ್ರೈವರ್ ಕೆಲಸ ಬಿಟ್ಟಿದ್ದ ಶ್ರೀನಿವಾಸ್ ಕೊರೊನಾ ವೇಳೆ ಊರಿಗೆ ವಾಪಾಸಾಗಿದ್ದ. ನಂತರ ಕೆಲಸ ಮಾಡದೇ ಆನ್ಲೈನ್ ರಮ್ಮಿ (Online Rummy) ಆಡಲು ಆರಂಭಿಸಿದ್ದ. ಈ ಚಟಕ್ಕೆ ಬಿದ್ದ ಶ್ರೀನಿವಾಸ್ ಸಾಲದ ಸುಳಿಗೆ ಬಿದ್ದಿದ್ದ. ಸಾಲಗಾರರ ಕಾಟ ತಾಳಲಾರದೆ ಬೇಸತ್ತಿದ್ದ. ಕಳೆದ ಮಂಗಳವಾರ ಕುಟುಂಬ ಸಮೇತ ಹೋದವರು ಹಿಂತಿರುಗಿ ಬಂದಿರಲಿಲ್ಲ. ಆತಂಕಗೊಂಡು ಹುಡುಕಾಟ ನಡೆಸಿದ ಪೋಷಕರಿಗೆ ಎಲ್ಲಿಯೂ ಸಿಗದಿದ್ದಾಗ ಚನ್ನರಾಯಪಟ್ಟಣ (Channarayapatna) ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ ಪೊಲೀಸರಿಗೆ ಬುಧವಾರ ಸಂಜೆ ಬಾಗೂರು ಹೋಬಳಿಯ, ಮುದ್ಲಾಪುರ ಹತ್ತಿರದ ಹೇಮಾವತಿ ನಾಲೆಯಲ್ಲಿ ದಂಪತಿಗಳ ಶವ ಸಿಕ್ಕಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಶ್ರೀನಿವಾಸ್ ಹಾಗೂ ಶ್ವೇಂತಾ ಶವಗಳನ್ನು ಹೊರತೆಗೆದಿದ್ದಾರೆ. ಮಗಳು ನಾಗಶ್ರೀ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.