Charmadi Ghat: ಶಿರಾಡಿ ನಂತರ ಇದೀಗ ಚಾರ್ಮಾಡಿ ಘಾಟಿಯಲ್ಲೂ ಭೂಕುಸಿತದ ಆತಂಕ; ಜಿಲ್ಲಾಡಳಿತದಿಂದ ಕಟ್ಟೆಚ್ಚರದ ಆದೇಶ
Charmadi Ghat: ಮುಂಗಾರು ಮಳೆ ಅಬ್ಬರ ಹೆಚ್ಚಿದ್ದು, ಅಲ್ಲಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು, ಹಾಸನ ಹಾಗೂ ಬೆಂಗಳೂರು ಮಧ್ಯದ ಸಂಪರ್ಕ ಈಗಾಗಲೇ ಲಭ್ಯವಿಲ್ಲದಂತಾಗಿದೆ. ಇದರ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಇದೀಗ ಚಾರ್ಮಾಡಿ ಘಾಟಿಯಲ್ಲಿ ಕೂಡಾ ಭೂಕುಸಿತದ ಆತಂಕ ಎದುರಾಗಿದೆ. ಈ ಕಾರಣದಿಂದ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.
ಹಾಗಾಗಿ ಇದೀಗ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಎಲ್ಲೆಲ್ಲಿ ಭೂಕುಸಿತ ಸಂಭವಿಸಿತ್ತೋ ಅಲ್ಲೆಲ್ಲ ಪರಿಶೀಲನೆ ಮಾಡಲು ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆಯನ್ನು ಈಗಾಗಲೇ ನೀಡಿದೆ. ಚಾರ್ಮಾಡಿಗೆ ಈಗಾಗಲೇ ಎಸ್‌ಪಿ ವಿಕ್ರಂ ಅಮ್ಟೆ ಸೇರಿ ಅಧಿಕಾರಿಗಳು ಭೇಟಿ ನೀಡಿದ್ದು, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ 15 ದಿನಗಳ ಹಿಂದೆ ಅಲೇಖಾನ್ ಫಾಲ್ಸ್ ಬಳಿ ಭೂಕುಸಿತ ಉಂಟಾಗಿದ್ದು, ಸ್ಥಳಕ್ಕೆ ಅಲ್ಲಿಗೆ ಭೇಟಿ ನೀಡಿ ಅಧಿಕಾರಿಗಳು ಅವಲೋಕನ ಮಾಡಿದ್ದಾರೆ.