Puri Jagannath: ಪುರಿ ಜಗನ್ನಾಥ ರಥ ಯಾತ್ರೆ, ಏನಿದರ ವಿಶೇಷತೆ ? ಇಲ್ಲಿನ ವಿಗ್ರಗಳು ಅಪೂರ್ಣ ಯಾಕೆ? ಇಲ್ಲಿನ ರಹಸ್ಯಗಳೇ ರೋಚಕ !!
Puri Jagannath: ಆಶಾಢ ಮಾಸ ಶುಕ್ಲ ಪಕ್ಷದ ಎರಡನೇ ದಿನ ಎಂದರೆ ಒರಿಸ್ಸಾ ರಾಜ್ಯಕ್ಕೆ ಇನ್ನಿಲ್ಲದ ಸಡಗರ. ಇಲ್ಲಿನ ಜನಪ್ರಿಯ ಪುರಿ ಜಗನ್ನಾಥ(Lord Jagannath)ನ ವಿಶ್ವಪ್ರಸಿದ್ಧ ರಥಯಾತ್ರೆ ಆರಂಭವಾಗುವ ದಿನವದು. ಜಗನ್ನಾಥನು ಸಕಲ ವೈಭೋಗಗಳೊಂದಿಗೆ ತನಗಾಗಿ ವಿಶೇಷವಾಗಿ ತಯಾರಾದ ಮರದ ರಥದಲ್ಲಿ ಕುಳಿತು ತನ್ನ ಚಿಕ್ಕಮ್ಮ ಗುಂಡಿಚಾ(Gundicha) ಮನೆಗೆ ತೆರಳುತ್ತಾನೆ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ ಜಗನ್ನಾಥನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ಕೂಡಾ ಒಂದೊಂದು ರಥದಲ್ಲಿ ಕುಳಿತು ಯಾತ್ರೆ ತೆರಳುತ್ತಾರೆ. ಈ ಮೂರೂ ರಥಗಳನ್ನು ನೆರೆದ ಲಕ್ಷಾಂತರ ಜನ ಎಳೆಯುತ್ತಾ ಡಮರು, ನಗಾರಿ, ಶಂಖಗಳ ನಾದ ಮೊಳಗಿಸುತ್ತಾ ಸಂಭ್ರಮದ ಘೋಷ ಕೂಗುತ್ತಾರೆ. ಅದನ್ನು ಕೇಳುತ್ತಾ ಕಣ್ತುಂಬಿಕೊಳ್ಳುವುದೇ ಒಂದು ಸಡಗರ.
ಇತ್ತೀಚಿನ ದಿನಗಳಲ್ಲಿ ಭಗವಾನ್ ಜಗನ್ನಾಥ ರಥಯಾತ್ರೆ ವಿಶ್ವವಿಖ್ಯಾತವಾಗಿದೆ. ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ದೂರದೂರುಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ರಥಯಾತ್ರೆಯ ಈ ಹಬ್ಬವನ್ನು ಇಡೀ 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದು ಹೇಗೆ ಹಬ್ಬವೋ, ಇದರಲ್ಲಿ ಪಾಲ್ಗೊಂಡವರ ಮೇಲೆ ಜಗನ್ನಾಥನ ಅನುಗ್ರಹ ಸದಾ ಇರುತ್ತದೆ ಎಂಬ ನಂಬಿಕೆ ಇದಕ್ಕೆ ಮತ್ತೊಂದು ಬೋನಸ್. ಈ ವರ್ಷದ ಪುರಿ ಜಗನ್ನಾಥ ರಥಯಾತ್ರೆ ಈಗತಾನೆ ಸಂಪನ್ನವಾಗಿದೆ. ಹಾಗಿದ್ರೆ ಈ ಜಾತ್ರೆಯ ವಿಶೇಷತೆಗಳೇನು? ಅರ್ಧ ಮೂರ್ತಿಗಳು ಮಾತ್ರ ಇರೋದ್ಯಾಕೆ? ಎಂಬ ಕೆಲವು ವಿಚಾರಗಳ ಕುರಿತು ನೋಡೋಣ ಬನ್ನಿ.
ಅಪೂರ್ಣ ವಿಗ್ರಹಗಳ ವಿಶೇಷತೆ ಏನು?
ಈ ಪುರಿ ದೇಗುಲವನ್ನು ಭಾರತದ ಪವಿತ್ರ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ದೇಗುಲದ ಸಂಬಂಧಿಸಿದ ಹಲವು ಕಥೆಗಳನ್ನೂ ನೀವು ಕೇಳಿರುತ್ತೀರಿ, ಅದರಲ್ಲಿ ಒಂದು ಇಲ್ಲಿ ಶ್ರೀಕೃಷ್ಣನ ಹೃದಯ ಮಿಡಿಯುತ್ತಂತೆ. ಇದರ ಹಿಂದೆ ಅನೇಕ ಪೌರಾಣಿಕ ಕಥೆಗಳಿವೆ. ಈ ಧಾಮವು ವಿಷ್ಣುವಿನ ಒಂದು ರೂಪವಾದ ಜಗನ್ನಾಥ ಪ್ರಭುವಿಗೆ ಸಮರ್ಪಿತವಾಗಿದೆ. ಜಗನ್ನಾಥನೊಂದಿಗೆ ಸಹೋದರಿ ಸುಭದ್ರಾ ಮತ್ತು ಸಹೋದರ ಬಲರಾಮ ಕೂಡ ಈ ಸ್ಥಳದಲ್ಲಿ ವಾಸವಾಗಿದ್ದಾರೆ. ಆದರೆ ಇಲ್ಲಿನ ವಿಗ್ರಗಳು ಅಪೂರ್ಣವಾದವು. ಅಂದರೆ ಸಂಪೂರ್ಣವಾಗಿ ಕೆತ್ತಲಾಗಿಲ್ಲ. ಯಾಕೆ ಹೀಗೆ ಗೊತ್ತಾ?
ಪ್ರತಿಮೆಯನ್ನು ತಯಾರಿಸುವ ಮೊದಲು, ದೇವ ಶಿಲ್ಪಿ ವಿಶ್ವಕರ್ಮರು ರಾಜ ಇಂದ್ರದ್ಯುಮ್ನನ ಮುಂದೆ ವಿಗ್ರಹಗಳನ್ನು ತಯಾರಿಸೋ ಸ್ಥಳಕ್ಕೆ ಯಾರೂ ಬರಬಾರದು, ಯಾರಾದರೂ ಒಳಗೆ ಬಂದರೆ, ವಿಗ್ರಹಗಳನ್ನು ನಿರ್ಮಾಣ ನಿಲ್ಲಿಸಲಾಗುತ್ತೆ ಎಂದು ಷರತ್ತು ವಿಧಿಸಿದ್ದರಂತೆ. ಬೇಗನೆ ವಿಗ್ರಹಗಳನ್ನ ನೋಡುವ ಹಂಬಲದಲ್ಲಿದ್ದ ರಾಜನು ತಕ್ಷಣವೇ ಭಗವಾನ್ ವಿಶ್ವಕರ್ಮನ (Vishwakarma) ಮಾತುಗಳನ್ನು ಒಪ್ಪಿಕೊಂಡನು.
ಇದರ ನಂತರ, ವಿಶ್ವಕರ್ಮ ಆ ವಿಗ್ರಹಗಳನ್ನು ತಯಾರಿಸುವ ಕೆಲಸವನ್ನು ಪ್ರಾರಂಭಿಸಿದರು. ವಿಶ್ವಕರ್ಮರು ಮಾಡುತ್ತಿದ್ದ ಈ ದೈವೀಕ ಕಾರ್ಯದ ಶಬ್ಧ ಬಾಗಿಲಿನ ಹೊರಗೂ ಕೇಳಿಸುತ್ತಿತ್ತು, ಆ ಶಬ್ಧವನ್ನು ರಾಜನು ಪ್ರತಿದಿನ ಕೇಳಿ ತೃಪ್ತನಾಗುತ್ತಿದ್ದನು, ಆದರೆ ಒಂದು ದಿನ ಇದ್ದಕ್ಕಿದ್ದಂತೆ ಶಬ್ಧವೇ ಬರೋದು ನಿಂತು ಹೋಯಿತಂತೆ. ಇದರಿಂದಾಗಿ ರಾಜ ಇಂದ್ರದ್ಯುಮ್ನನು ವಿಗ್ರಹಗಳ ಕಾರ್ಯ ಪೂರ್ಣಗೊಂಡಿರಬಹುದು, ಹಾಗಾಗಿ ಶಬ್ಧ ಬರುತ್ತಿಲ್ಲ ಎಂದು ಅಂದುಕೊಂಡನು. ಈ ತಪ್ಪು ತಿಳುವಳಿಕೆಯಲ್ಲಿ, ಅವರು ಬಾಗಿಲು ತೆರೆದರು, ಷರತ್ತು ಪ್ರಕಾರ, ಬಾಗಿಲು ತೆರೆದ ಕೂಡಲೇ, ವಿಶ್ವಕರ್ಮ ದೇವರು ಅಲ್ಲಿಂದ ಕಣ್ಮರೆಯಾದರು, ಆದರೆ ಪ್ರತಿಮೆಗಳು ಇನ್ನೂ ಸಿದ್ಧವಾಗಿರಲಿಲ್ಲ. ಅಂದಿನಿಂದ ಈ ವಿಗ್ರಹಗಳು ಅಪೂರ್ಣವಾಗಿವೆ ಮತ್ತು ಈ ಮೂರು ವಿಗ್ರಹಗಳಿಗೆ ಕೈ ಮತ್ತು ಕಾಲುಗಳಿಲ್ಲ ಎನ್ನುತ್ತಾರೆ ಜನ.
ಶ್ರೀ ಕೃಷ್ಣನ ಹೃದಯ ಇಲ್ಲಿ ಇಂದಿಗೂ ಮಿಡಿಯುತ್ತಿದೆ
ಧಾರ್ಮಿಕ ನಂಬಿಕೆಗಳು ಮತ್ತು ಪುರಾಣಗಳ ಪ್ರಕಾರ, ಭಗವಾನ್ ಕೃಷ್ಣನ (Lord Krishna) ಹೃದಯವು ಇಂದಿಗೂ ಜಗನ್ನಾಥ ಧಾಮದಲ್ಲಿ ಮಿಡಿಯುತ್ತದೆ. ಶ್ರೀಕೃಷ್ಣ ತನ್ನ ದೇಹವನ್ನು ತ್ಯಾಗ ಮಾಡಿದಾಗ, ಅವನನ್ನು ಪಾಂಡವರು ದಹನ ಮಾಡಿದರಂತೆ. ದೇಹವನ್ನು ಸುಟ್ಟ ನಂತರವೂ, ಕೃಷ್ಣನ ಹೃದಯವು ಉರಿಯದೇ ಹಾಗೇ ಉಳಿಯಿತು, ಇದರಿಂದಾಗಿ ಪಾಂಡವರು ಹೃದಯವನ್ನ ಪವಿತ್ರ ನದಿಗೆ ಹಾಕಿದರಂತೆ.
ಶ್ರೀಕೃಷ್ಣನ ಹೃದಯವು ನೀರಿನಲ್ಲಿ ಹರಿಯುತ್ತಾ, ಮರದ ದಿಮ್ಮಿಯ ರೂಪವನ್ನು ತೆಗೆದುಕೊಂಡಿತು ಎಂದು ಹೇಳಲಾಗುತ್ತದೆ, ಇದನ್ನು ಶ್ರೀ ಕೃಷ್ಣನು ರಾಜ ಇಂದ್ರದ್ಯುಮ್ನನಿಗೆ ಕನಸಿನಲ್ಲಿ ತಿಳಿಸಿದನು, ನಂತರ ರಾಜನು ಜಗನ್ನಾಥ ಬಲಭದ್ರ ಮತ್ತು ಸುಭದ್ರಾ ವಿಗ್ರಹವನ್ನು ಮರದ ದಿಮ್ಮಿಯಿಂದ ಮಾಡುವ ನಿರ್ಮಾಣ ಕಾರ್ಯವನ್ನು ವಿಶ್ವಕರ್ಮರಿಗೆ ನಿರ್ವಹಿಸಿದರಂತೆ. ಹಾಗಾಗಿ ಇಂದಿಗೂ ಇಲ್ಲಿನ ವಿಗ್ರಹದಲ್ಲಿ ಶ್ರೀಕೃಷ್ಣನ ಹೃದಯ ಮಿಡಿಯುತ್ತಿದೆ ಎನ್ನಲಾಗುತ್ತದೆ.
ರಥದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು:
* ಅಕ್ಷಯ ತೃತೀಯ ದಿನದಂದು ಜಗನ್ನಾಥನ ರಥದ ನಿರ್ಮಾಣ ಪ್ರಾರಂಭವಾಗುತ್ತದೆ.
* ಈ ರಥವು ಸಂಪೂರ್ಣವಾಗಿ ಮರ(wood)ದಿಂದ ಮಾಡಲ್ಪಟ್ಟಿದೆ ಮತ್ತು ಜಗನ್ನಾಥನ ರಥದಲ್ಲಿ ಒಂದೇ ಒಂದು ಮೊಳೆಯನ್ನು ಬಳಸುವುದಿಲ್ಲ ಎಂಬುದು ವಿಶೇಷ.
* ರಥವನ್ನು ಮಾಡಲು ವಸಂತ ಪಂಚಮಿ(Vasant Panchmi)ಯಿಂದ ಮರದ ಸಂಗ್ರಹವು ಪ್ರಾರಂಭವಾಗುತ್ತದೆ. ಇದನ್ನು ವಿಶೇಷ ಅರಣ್ಯವಾದ ದಶಪಲ್ಲದಿಂದ ಸಂಗ್ರಹಿಸಲಾಗುತ್ತದೆ ಮತ್ತು ಶ್ರೀ ಮಂದಿರದಲ್ಲಿ ಕೆಲಸ ಮಾಡುವ ಬಡಗಿಗೆ ಮಾತ್ರ ತಯಾರಿಸುವ ಅವಕಾಶ ನೀಡಲಾಗುತ್ತದೆ.
* ಜಗನ್ನಾಥ ರಥವು ಕೆಂಪು ಮತ್ತು ಹಳದಿ ಬಣ್ಣ(red and yellow colour)ದಲ್ಲಿ ಮಾಡಲ್ಪಡುತ್ತದೆ. ಮತ್ತು ಅದರಲ್ಲಿ ಒಟ್ಟು 16 ಚಕ್ರಗಳಿರುತ್ತವೆ.
* ಜಗನ್ನಾಥನ ರಥವು ಇತರ ಎರಡು ರಥಗಳಿಗೆ ಹೋಲಿಸಿದರೆ ಸ್ವಲ್ಪ ದೊಡ್ಡದಾಗಿರುತ್ತದೆ. ಅಲ್ಲದೆ, ಬಲಭದ್ರ ಮತ್ತು ಸುಭದ್ರೆಯ ರಥಗಳನ್ನು ಭಗವಾನ್ ಜಗನ್ನಾಥನ ರಥವು ಅನುಸರಿಸುತ್ತದೆ.
ರಥಯಾತ್ರೆಯಲ್ಲಿ ಬಲಭದ್ರನ ರಥವು ಮೊದಲನೆಯದು. ಇದು ಸುಮಾರು 45 ಅಡಿ ಎತ್ತರ ಇದ್ದು, ಕೆಂಪು ಮತ್ತು ಹಸಿರು ಬಣ್ಣದಿಂದ ಅಲಂಕೃತಗೊಂಡಿದೆ. ಇದು 14 ಚಕ್ರಗಳನ್ನು ಹೊಂದಿರುವ ಈ ರಥದ ಹೆಸರು ‘ತಾಳಧ್ವಜ್’.
ಇದರ ಹಿಂದೆ 44 ಅಡಿ ಎತ್ತರದ ಕೆಂಪು ಮತ್ತು ಕಪ್ಪು ಬಣ್ಣದ ಸುಭದ್ರಾ ದೇವಿಯ ‘ದೇವದಳನ್’ ಎಂಬ ರಥವಿದೆ. ಇದು 12 ಚಕ್ರಗಳನ್ನು ಹೊಂದಿದೆ. ಕೊನೆಗೆ ಜಗನ್ನಾಥನ ರಥ ಚಲಿಸುತ್ತದೆ. ಇದರ ಹೆಸರು ‘ನಂದಿಘೋಷ್’, ಇದು ಹಳದಿ ಬಣ್ಣದ ಸುಮಾರು 45 ಅಡಿ ಎತ್ತರವಿದೆ. ಈ ರಥವು 16 ಚಕ್ರಗಳನ್ನು ಹೊಂದಿದ್ದು, ಇದರ ಅಲಂಕಾರಕ್ಕೆ ಸುಮಾರು 1100 ಮೀಟರ್ ಬಟ್ಟೆ ಬೇಕಾಗುತ್ತದೆ.
ಭಗವಾನ್ ಬಲಭದ್ರ, ಸುಭದ್ರ ಮತ್ತು ಜಗನ್ನಾಥನ ರಥಗಳು ಸುಮಾರು ಎರಡೂವರೆ ಮೂರು ಕಿಲೋಮೀಟರ್ ದೂರದಲ್ಲಿರುವ ಗುಂಡಿಚಾ ದೇವಸ್ಥಾನಕ್ಕೆ ಹೋಗುತ್ತವೆ. ಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ಈ ರಥಗಳನ್ನು ಹಗ್ಗಗಳ ಸಹಾಯದಿಂದ ಎಳೆಯುತ್ತಾರೆ.
ವಿಶ್ವದ ಅತಿ ದೊಡ್ಡ ಅಡುಗೆ ಮನೆ:
ಜಗನ್ನಾಥ ದೇವಾಲಯದ ಅಡುಗೆಮನೆಯು ವಿಶ್ವದ ಅತಿ ದೊಡ್ಡ ಅಡುಗೆಮನೆ ಎಂಬ ಖ್ಯಾತಿಗೆ ಭಾಜನವಾಗಿದೆ. ಜಗನ್ನಾಥ ದೇವಾಲಯವು ಪ್ರಸಾದವನ್ನು ‘ಮಹಾಪ್ರಸಾದ’ ಎಂದು ಕರೆಯುವ ಏಕೈಕ ದೇವಾಲಯವಾಗಿದೆ. ಈ ಮಹಾಪ್ರಸಾದವನ್ನು ಏಳು ಮಣ್ಣಿನ ಪಾತ್ರೆಗಳಲ್ಲಿ ಅಥವಾ ಮರದ ಪಾತ್ರೆಗಳಲ್ಲಿ ತಯಾರಿಸಲಾಗುತ್ತದೆ.