Exit Poll History: ಎಕ್ಸಿಟ್ ಪೋಲ್ ಇತಿಹಾಸ ಏನು, ಅದನ್ನು ಹೇಗೆ ನಡೆಸ್ತಾರೆ ?
Exit Poll History: ಭಾರತದಲ್ಲಿನ ಎಕ್ಸಿಟ್ ಪೋಲ್‌ಗಳ ಇತಿಹಾಸದ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಮೊದಲ ಎಕ್ಸಿಟ್ ಪೋಲ್ ಅನ್ನು 1957 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಒಪಿನಿಯನ್ ಎನ್ನುವ ಹೆಸರಿನಲ್ಲಿ ನಡೆಸಲಾಯಿತು. ಎರಡನೇ ಲೋಕಸಭಾ ಚುನಾವಣೆಯ ನಂತರ ಸಮೀಕ್ಷೆಯನ್ನು ನಡೆಸಲಾಯಿತು. ತದನಂತರ 1996 ರಲ್ಲಿ ದೇಶದಾದ್ಯಂತ ಎಕ್ಸಿಟ್ ಸಮೀಕ್ಷೆಗಳನ್ನು ನಡೆಸಲು ಸರ್ಕಾರಿ ಪ್ರಸಾರಕ ಸಂಸ್ಥೆಯಾದ ದೂರದರ್ಶನವು ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ನ್ನು ನೇಮಿಸಿಕೊಂಡಿತು. ಇದರ ನಂತರದ ದಿನಗಳಲ್ಲಿ ಹಲವರು ಸಮೀಕ್ಷೆಗಳನ್ನು ನಡೆಸಲು ಪ್ರಾರಂಭ ಮಾಡಿದರು. ಇನ್ನು ಸ್ವಲ್ಪ ಸಮಯದ ನಂತರ ಹಲವು ಸಮೀಕ್ಷಾ ತಂಡಗಳು ಟಿವಿ ಚಾನಲ್ಲುಗಳ ಜೊತೆಗೆ ಟೈ ಅಪ್ ಮಾಡಿಕೊಂಡು ಚುನಾವಣಾ ಫಲಿತಾಂಶ ನೀಡಲು ಶುರು ಮಾಡಿದವು.
ಎಕ್ಸಿಟ್ ಪೋಲ್ ಎಂದರೇನು, ಅದನ್ನು ಹೇಗೆ ನಡೆಸುತ್ತಾರೆ?
ಎಕ್ಸಿಟ್ ಪೋಲ್ ಎನ್ನುವುದು ಚುನಾವಣೋತ್ತರ ಸಮೀಕ್ಷೆಯಾಗಿದ್ದು ಅದು ರಾಷ್ಟ್ರದ ಅಧಿಕಾರವನ್ನು ಹಿಡಿಯುವ ನಿಟ್ಟಿನಲ್ಲಿ ಇಡೀ ರಾಷ್ಟ್ರದ ಮನಸ್ಥಿತಿ ಏನಿದೆ ಅನ್ನುವುದನ್ನು ಗ್ರಹಿಸಲು ಮಾಡುವ ಸಮೀಕ್ಷೆಯಾಗಿರುತ್ತದೆ. ಇದು ಒಂದು ರಾಜಕೀಯ ಪಕ್ಷವು ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದನ್ನು ತೋರಿಸುವ ಅಭಿಪ್ರಾಯ ಸಂಗ್ರಹವಾಗಿದೆ. ಎಕ್ಸಿಟ್ ಪೋಲ್‌ಗಳು ಅಧಿಕೃತ ಚುನಾವಣಾ ಫಲಿತಾಂಶಗಳಂತೆಯೇ ಇರುವುದಿಲ್ಲ ಎಂಬುದನ್ನು ಒಪ್ಪಿದರೂ ಹೆಚ್ಚಿನ ಸಂದರ್ಭಗಳಲ್ಲಿ ಎಕ್ಸಿಕ್ ಪೋಲುಗಳು ಮುಖ್ಯ ಚುನಾವಣೆಯ ಫಲಿತಾಂಶದ ಮಾದರಿಯಲ್ಲಿಯೇ ಇರುತ್ತವೆ.
ಎಕ್ಸಿಟ್ ಪೋಲ್ ನಡೆಯುವುದು ಸಂಖ್ಯಾಶಾಸ್ತ್ರದ ಆಧಾರದ ಮೇಲೆ. ದೇಶದ ವಿವಿಧ ರಾಜ್ಯಗಳಲ್ಲಿ ಜಿಲ್ಲೆಗಳಲ್ಲಿ ಮತ್ತು ಪ್ರದೇಶಗಳಲ್ಲಿ ಜನರ ಸರ್ವೇ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸಿ ಒಟ್ಟು ಮಾಡಿ ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಇದಕ್ಕೆ ಸ್ಯಾಂಪಲ್ ಸರ್ವೆ ಎಂದು ಹೆಸರು.
ದೇಶದ ಒಟ್ಟು 543 ಸ್ಥಾನಗಳಿಗೆ ನಡೆಯುವ ಚುನಾವಣೆಯ ಫಲಿತಾಂಶದ ದಿಕ್ಸೂಚಿಯನ್ನು ಅಳೆಯಲು ನಡೆಯುವ ಈ ಸರ್ವೇಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತದೆ. ಸರಿಸುಮಾರು 97 ಕೋಟಿ ಜನರ ಹೆಸರು ಈ ಸಲದ ಮತ ಪಟ್ಟಿಯಲ್ಲಿದ್ದು, ಅದರಲ್ಲಿ ಸರಿಸುಮಾರು 65% ಮತದಾನ ಆಯಿತು ಅಂದುಕೊಂಡರೂ ದೇಶದ ಅರ್ಧಕ್ಕಿಂತ ಹೆಚ್ಚು ಜನರು ಈ ಸಲ ಮತ ಚಲಾಯಿಸಿರುತ್ತಾರೆ. ಈ ಅಂಕಿ ಅಂಶಗಳನ್ನು ಪರಿಗಣಿಸಿಕೊಂಡು ಆಯಾ ಪ್ರದೇಶಗಳಲ್ಲಿ ಎಷ್ಟು ಸಂಖ್ಯೆಯ ಸ್ಯಾಂಪಲ್ ಗಳನ್ನು (ಅಂದರೆ ಜನರನ್ನು ಪ್ರಶ್ನಿಸುವುದು ಮತ್ತು ಅವರಿಂದ ಮಾಹಿತಿ ಸಂಗ್ರಹಿಸುವುದು, ಎಷ್ಟು ಜನರನ್ನು ಪ್ರಶ್ನಿಸಬೇಕು ಎಂದು ನಿರ್ಧರಿಸುವುದು) ಸ್ಟಾಟಿಸ್ಟಿಕ್ಸ್ ಟೂಲ್ಸ್ ಮುಖಾಂತರ ನಿರ್ಧರಿಸಲಾಗುತ್ತದೆ.
ಎಕ್ಸಿಟ್ ಪೋಲ್‌ಗಳು ಯಾವಾಗ ಬಿಡುಗಡೆಯಾಗುತ್ತವೆ?
ಚುನಾವಣೆ ನಡೆಯುವ ತನಕ ಯಾವುದೇ ಸಮೀಕ್ಷೆಗಳಿಗೆ ಚುನಾವಣಾ ಆಯೋಗದಿಂದ ಅನುಮತಿ ಇಲ್ಲ. ಸಮೀಕ್ಷೆಗಳು ಅಥವಾ ಸುಳ್ಳು ವರದಿಗಳು ಜನರ ಮನಸ್ಸು ಕೆಡಿಸಿ, ಮತದಾರರನ್ನು ತಪ್ಪು ದಾರಿಗೆ ಹಿಡಿಯಬಹುದು ಎನ್ನುವ ಕಾರಣಕ್ಕಾಗಿ ಚುನಾವಣಾ ಸಂದರ್ಭದಲ್ಲಿ ಮಾಡುವ ಸಮೀಕ್ಷೆಗಳಿಗೆ ಆಯೋಗವು ನಿರ್ಬಂಧ ಹೇರಿದೆ. ಚುನಾವಣಾ ಆಯೋಗವು ಏಪ್ರಿಲ್ 19 ರಂದು ಬೆಳಿಗ್ಗೆ 7 ರಿಂದ ಸಂಜೆ 6.30 ರ ನಡುವೆ ನಿರ್ಗಮನ ಮತದಾನಕ್ಕೆ ನಿಷೇಧ ಹೇರಿದೆ. ಅದರಂತೆ ಇಷ್ಟು ದಿನ ಸುಮ್ಮನಿದ್ದ ಮಾಧ್ಯಮ ಸಂಸ್ಥೆಗಳು ಇಂದು ಸಂಜೆ 6:30 ರ ನಂತರ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ. ಇಂದು ಶನಿವಾರ, ಜೂನ್ 1 ರ ಚುನಾವಣೆಗೆ ಮತದಾನ ಮುಗಿದ ನಂತರವೇ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಬಹುದು.
ಚುನಾವಣಾ ಫಲಿತಾಂಶದ ದಿಕ್ಸೂಚಿ ಎಂದೇ ಕರೆಯಲಾಗುವ ಎಕ್ಸಿಟ್ ಪೋಲ್ ಗಳು ಪ್ರತಿ ಬಾರಿ ಕೂಡಾ ಸರಿ ಆಗುತ್ತವೆ ಅಂತ ಹೇಳಲಿಕ್ಕಾಗೋದಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಎಕ್ಸಿಟ್ ಪೋಲ್ ಗಳು ಬಹುತೇಕ ಭವಿಷ್ಯ ನುಡಿಯುತ್ತವೆ. ಬಹುತೇಕವಾಗಿ ಚುನಾವಣಾ ಎಕ್ಸಿಟ್ ಪೋಲ್ ಗಳು ಸತ್ಯವಾಗುತ್ತವೆ. ಎಕ್ಸಿಟ್ ಪೋಲ್ ಗಳು ಪೂರ್ತಿ ಸತ್ಯವಾಗದೆ ಇದ್ದರೂ ಅವು ದೇಶದ ಅಧಿಕಾರದ ದಿಕ್ಸೂಚಿ ದರ್ಶನ ಮಾಡಿಸುವುದಂತೂ ಖಚಿತ.
ಲೋಕಸಭೆ ಚುನಾವಣೆ 2024 ಏಳು ಹಂತಗಳಲ್ಲಿ ನಡೆದಿದ್ದು, ಮೊದಲ ಹಂತ ಏಪ್ರಿಲ್ 17 ರಂದು ನಡೆದರೆ ಕೊನೆಯದು, ಇಂದು ಜೂನ್ 1 ರಂದು ನಡೆದಿದೆ. ಈಗ ಈ ಎಲ್ಲಾ 7 ಹಂತಗಳ 543 ಲೋಕಸಭಾ ಸ್ಥಾನಗಳಿಗೆ ಆದ ಚುನಾವಣೆಗಳ ಫಲಿತಾಂಶ ದಿಕ್ಸೂಚಿ ಬಿಡುಗಡೆಗೊಳ್ಳಲು ಇನ್ನೇನು ಎರಡೇ ಗಂಟೆಗಳ ಸಮಯ.
ಏತನ್ಮಧ್ಯೆ, ಒಡಿಶಾ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂಗೆ ಏಕಕಾಲದಲ್ಲಿ ವಿಧಾನಸಭಾ ಚುನಾವಣೆಗಳು ನಡೆದವು. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಯ ಫಲಿತಾಂಶ ಜೂನ್ 2 ರಂದು ಪ್ರಕಟವಾಗಲಿದ್ದು, ಆಂಧ್ರಪ್ರದೇಶ ಮತ್ತು ಒಡಿಶಾದ ಫಲಿತಾಂಶಗಳು ಜೂನ್ 4 ರಂದು ಪ್ರಕಟವಾಗಲಿದೆ. ಅವುಗಳ ಚುನಾವಣಾ ಸಮೀಕ್ಷೆ ಕೂಡ ಹಿಂದೆ ಪ್ರಕಟಗೊಳ್ಳುವ ನೀರಿಕ್ಷೆಯಿದೆ.
ಎಕ್ಸಿಟ್ ಪೋಲ್- 2024 ; ಪ್ರಸಾರ ವೀಕ್ಷಿಸಲು ಕಾದು ಕೂತ ಜನತೆ; ಇಂದು ಸಂಜೆ 6.30 ಕ್ಕೆ ಚುನಾವಣಾ ಸಮೀಕ್ಷೆ