Udupi: ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಲಾರೆ ,ದುಡುಕಿನ ನಿರ್ಧಾರವಲ್ಲ ಯೋಚಿಸಿಯೇ ನಿರ್ಧರಿಸಿದ್ದೇನೆ – ರಘುಪತಿ ಭಟ್
Udupi: ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಲಾರೆ ,ಇದುವದುಡುಕಿನ ನಿರ್ಧಾರವಲ್ಲ ಯೋಚಿಸಿಯೇ ನಿರ್ಧರಿಸಿದ್ದೇನೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಬಿಜೆಪಿಯ ಕೆ. ರಘುಪತಿ ಭಟ್ ಹೇಳಿದರು.
ಇದನ್ನೂ ಓದಿ: Puttur: ಚಿಕಿತ್ಸೆ ಸರಿಯಾಗಿ ನೀಡದ ಆರೋಪ- ವ್ಯಕ್ತಿ ಸಾವು! ದೂರು ದಾಖಲು
ಅವರು ತಮ್ಮ ಮನೆಯಲ್ಲಿ ನಡೆದ ಹಿತೈಷಿಗಳ ಸಭೆಯಲ್ಲಿ ಮಾತನಾಡಿದರು.
ನನ್ನ ಜೀವನದಲ್ಲಿ ಇಂತಹ ದಿನ ಬರಬಹುದು ಎಂದು ನಾನು ಎಂದೂ ಯೋಚಿಸಿರಲಿಲ್ಲ. ಕಾರ್ಯಕರ್ತರ ಧ್ವನಿಯಾಗಿ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಗೆದ್ದ ಮೇಲೆ ನಾನಾಗಿಯೇ ಬಿಜೆಪಿ ಕಚೇರಿಗೆ ಹೋಗುವೆ. ಸೋತರೂ ಬಿಜೆಪಿ ಕಾರ್ಯ ಕರ್ತನಾಗಿಯೇ ಇರುವೆ. ಸಂಘದ ಹಿರಿಯರೂ ಆಯ್ತು ನೋಡೋಣ ಕೆಲಸ ಮಾಡಿ ಎನ್ನುವ ಅನಿವಾರ್ಯ ಸ್ಥಿತಿಯಲ್ಲಿ ಇದ್ದಾರೆ ಎಂದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೈತಪ್ಪಿದಾಗ ಕಾಂಗ್ರೆಸ್ ಅಥವಾ ಪಕ್ಷೇತರರಾಗಿ ಸ್ಪರ್ಧಿಸಲು ಒತ್ತಡ ಇತ್ತು. ಆದರೂ ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡಿದೆ. ಲೋಕಸಭೆ ಚುನಾವಣೆಯಲ್ಲೂ ಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಆದರೆ ಪಕ್ಷದ ನಾಯಕರು ನಾನು ಮೂರು ಬಾರಿ ಗೆದ್ದಿರುವ ಮಾಜಿ ಶಾಸಕ ಎಂಬುದನ್ನು ಮರೆತು ಕಚೇರಿಯಲ್ಲಿದ್ದ ನನ್ನ ಭಾವಚಿತ್ರವನ್ನು ತೆಗೆದು ಹಾಕಿದರು. ಕನಿಷ್ಠ ಮನ್ನಣೆ, ಪ್ರೀತಿ, ಗೌರವವನ್ನು ತೋರಿಸಿಲ್ಲ ಎಂದು ದೂರಿದರು.
ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ದಶಕಗಳ ಪದ್ಧತಿ ಮುರಿದಿದ್ದಾರೆ. ನಾನು ಯಾರನ್ನೂ ಸೋಲಿಸಲು ನಿಲ್ಲುತ್ತಿಲ್ಲ. ಜನರ ಸೇವೆ ಮಾಡಲು ಸ್ಪರ್ಧಿಸುತ್ತಿದ್ದೇನೆ.ಪ್ರಧಾನಿ ನರೇಂದ್ರ ಮೋದಿಯವರ ಆದರ್ಶ, ಡಾ| ವಿ.ಎಸ್. ಆಚಾರ್ಯರ ಮಾರ್ಗದರ್ಶನ ಹಾಗೂ ಕರಂಬಳ್ಳಿ ಸಂಜೀವ ಶೆಟ್ಟಿಯವರು ನೀಡಿದ್ದ ಪಾಠ ಸದಾ ನನ್ನೊಂದಿಗೆ ಇರುತ್ತದೆ ಮತ್ತು ನಾನು ಎಂದಿಗೂ ಬಿಜೆಪಿಗನೇ ಆಗಿರುತ್ತೇನೆ ಎಂದರು.
ಕರ್ನಾಟಕ ವಿಧಾನ ಪರಿಷತ್ ಚುನಾವಣೆ -2024 ಇದರ ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಹಿತೈಷಿಗಳ ಸಭೆ ನಡೆಸಿ, ಚುನಾವಣಾ ಕಾರ್ಯಾಲಯ ಉದ್ಘಾಟಿಸಲಾಯಿತು.
ನಾನು ಎಂದಿಗೂ ಬಿಜೆಪಿಯ ಕಾರ್ಯಕರ್ತ. ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿಯಾಗಿ ಮೈಸೂರಿನಲ್ಲಿ ದಿನಾಂಕ 16-05-2024 ರಂದು ಗುರುವಾರ ಮಧ್ಯಾಹ್ನ 1.00 ಗಂಟೆಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.
ಸಭೆಯಲ್ಲಿ ಸರಸ್ವತಿ ಭಾರಿತ್ತಾಯ ಕರಂಬಳ್ಳಿ, ಪ್ರಮುಖರಾದ ರಘುರಾಮ್ ಶೆಟ್ಟಿ ಕರಂಬಳ್ಳಿ, ಪಕ್ಷದ ಹಿರಿಯರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಕೆ.ಟಿ. ಪೂಜಾರಿ, ಬಿಜೆಪಿಯ ಹಿರಿಯ ಮುಖಂಡರಾದ ಪಾಂಡುರಂಗ ಮಲ್ಪೆ, ಶಿವರಾಮ್ ಉಡುಪ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಉಪೇಂದ್ರ ನಾಯಕ್, ನಿವೃತ್ತ ಉಪನ್ಯಾಸಕರಾದ ಸುರೇಂದ್ರ ಶೆಟ್ಟಿ ಕೊಕ್ಕರ್ಣೆ, ವಿಶ್ವ ಹಿಂದೂ ಪರಿಷತ್ ನ ಮಾಜಿ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಆಚಾರ್ಯ, ಬಿಜೆಪಿ ಮುಖಂಡರಾದ ಜಯಕರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.