Varanasi: ವಾರಾಣಸಿಯಲ್ಲಿ ಮೋದಿ ವಿರುದ್ಧ ಎರಡು ಬಾರಿ ಸೋತ ಅಜಯ್ ರಾಯ್ ನೇ ಈ ಬಾರಿ ಕೂಡಾ ಕಾಂಗ್ರೆಸ್ ಅಭ್ಯರ್ಥಿ !
Varanasi: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿ ಯಾರು ಅನ್ನೋ ಕುತೂಹಲ ಇದ್ದೇ ಇರುತ್ತದೆ. ಎಷ್ಟೋ ಸಲ ಪ್ರಚಾರ ಗಿಟ್ಟಿಸಿಕೊಳ್ಳಲೆಂದೇ ವಿಶ್ವದ ಅತ್ಯಂತ ನಾಯಕ ಪ್ರಧಾನ ಮಂತ್ರಿ ಎದುರು ಹಲವು ಮಂದಿ ಸ್ಪರ್ಧಿಸುವುದಿದೆ. ಈ ಬಾರಿ ಹಾಗೆ ಯಾರೆಲ್ಲ ಸ್ಪರ್ಧಿಸುತ್ತಾರೆ ಗೊತ್ತಿಲ್ಲ, ಆದ್ರೆ ಕಾಂಗ್ರೆಸ್ ಪಕ್ಷವು ಮೋದಿ ವಿರುದ್ಧ ಕಳೆದ ಎರಡು ಸಲ ಸೋತಿದ್ದ ಅಭ್ಯರ್ಥಿಯನ್ನೇ ಮೂರನೇ ಬಾರಿಗೂ ಕಣಕ್ಕಿಳಿಸಿದೆ. ಈ ಹಿಂದೆ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ನರೇಂದ್ರ ಮೋದಿ ಅವರ ವಿರುದ್ಧ ಸೋತಿದ್ದ ಅಭ್ಯರ್ಥಿಗೆ ಮೂರನೇ ಬಾರಿಗೂ ಟಿಕೆಟ್ ನೀಡಲಾಗಿದೆ.
ನಿನ್ನೆ ರಾತ್ರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್, ವಾರಣಾಸಿ ಕ್ಷೇತ್ರಕ್ಕೆ ಅಜಯ್ ರಾಯ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಜೆಪಿ ಪಕ್ಷವು ತನ್ನ ಮೊದಲ ಪಟ್ಟಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಕಣಕ್ಕಿಳಿಯಲಿದ್ದಾರೆ ಎಂದು ಘೋಶಿಸಿತ್ತು. ಅವರ ವಿರುದ್ಧ ಈ ಬಾರಿ ಕಾಂಗ್ರೆಸ್ ಬೇರೆ ಅಭ್ಯರ್ಥಿಯನ್ನೇ ತಂದು ನಿಲ್ಲಿಸುವ ಮಾತುಕತೆ ನಡೆದಿತ್ತು. ಆದರೆ ಈಗ ಅದೇ ಅಭ್ಯರ್ಥಿ ಅಜಯ್ ರಾಯ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಯಾರೀ ಅಜಯ್ ರಾಯ್?
ಉತ್ತರ ಪ್ರದೇಶ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಿಂದೆ ಬಿಜೆಪಿಯ ವಿದ್ಯಾರ್ಥಿ ಘಟಕದ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ ಅವರು ಒಮ್ಮೆ ಸಮಾಜವಾದಿ ಪಕ್ಷವನ್ನು ಕೂಡಾ ಸೇರಿದ್ದರು. ಅವರು 1996 ರಿಂದ 2007ರ ನಡುವೆ 3 ಬಾರಿ ಬಿಜೆಪಿಯಿಂದ ಕೋಲಸ್ಲಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದವರು ಅಜಯ್ ರಾಯ್. 2009ರಲ್ಲಿ ಲೋಕಸಭೆಯಲ್ಲಿ ಅವರಿಗೆ ಟಿಕೆಟ್ ಬಿಜೆಪಿ ನೀಡದ ಕಾರಣ ಅವರು ಸಮಾಜವಾದಿ ಪಕ್ಷವನ್ನು ಸೇರಿದ್ದರು. ಅಲ್ಲಿ ಚುನಾವಣೆಯಲ್ಲಿ ಸೋತರು, ನಂತರ ಕೋಲಸ್ಲಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿದ್ದರು. ತದನಂತರ 2012 ರಲ್ಲಿ ಕಾಂಗ್ರೆಸ್ ಸೇರಿದ ಅಜಯ್ ರಾಯ್ ಪಿಂಡ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಶಾಸಕರಾಗಿ ಆಯ್ಕೆಯಾದರು. ಆದರೆ ಮತ್ತೆ 2017ರ ವಿಧಾನಸಭೆ ಚುನಾವಣೆಯಲ್ಲಿ ಸೋತರು. ಈ ಮಧ್ಯೆ ಅವರು 2 ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದು, ಎರಡು ಬಾರಿ ಪರಾಭವಗೊಂಡಿದ್ದು ಇದೀಗ ಮೂರನೇ ಬಾರಿ ಹೋರಾಟಕ್ಕೆ ಇಳಿದಿದ್ದಾರೆ.