Code of Election Conduct: ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿ -ನೀತಿ ಸಂಹಿತೆ ಅಂದ್ರೆ ಏನು? ನಿರ್ಭಂಧಗಳೇನು? ಪಾಲಿಸದಿದ್ದರೆ ಏನಾಗುತ್ತದೆ?

Code of Election Conduct: ಕೇಂದ್ರ ಚುನಾವಣಾ ಆಯೋಗವು 2024ರ ಲೋಕಸಭೆ ಚುನಾವಣೆ ದಿನಾಂಕವನ್ನು ಪ್ರಕಟಮಾಡಿದೆ. ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಲಿದೆ. ಈ ಮೂಲಕ ಕೆಲವು ತಿಂಗಳಿಂದ ದೇಶದ ಜನ ಕಾದು ಕುಳಿತಿದ್ದ ದಿನ ಸನ್ಹಿತವಾಗಿದೆ. ಈ ಬೆನ್ನಲ್ಲೇ ರಾಷ್ಟ್ರಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ(Code of Election Conduct) ಕೂಡ ಜಾರಿಗೆ ಬರಲಿದ್ದು ಆಯೋಗವು ಆದೇಶ ಹೊರಡಿಸಲಿದೆ. ಹಾಗಿದ್ರೆ ನೀತಿ ಸಂಹಿತೆ ಅಂದರೆ ಏನು? ಏನೆಲ್ಲಾ ಚಟುವಟಿಕೆಗಳು ನಿರ್ಭಂಧಿಸಲಾಗುತ್ತದೆ. ಜನಸಾಮಾನ್ಯರ ಮೇಲೆ ಕೂಡ ಈ ನಿಯಮಗಳು ಹೇಗೆ ಪ್ರಭಾವ ಬೀರುತ್ತವೆ ? ಇಲ್ಲಿದೆ ನೋಡಿ ಈ ಎಲ್ಲಾದರ ಕಂಪ್ಲೀಟ್ ಡೀಟೇಲ್ಸ್.

● ನೀತಿ ಸಂಹಿತೆ ಎಂದರೇನು?
ಚುನಾವಣೆ(Election)ಬಂದಾಗಲೆಲ್ಲಾ ಚುನಾವಣಾ ನೀತಿ ಸಂಹಿತೆಯದ್ದೇ ಸದ್ದು. ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಕೆಲವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನೀತಿ ಸಂಹಿತೆ ಎಂದು ಕರೆಯಲಾಗುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಚುನಾವಣಾ ಅಕ್ರಮಗಳಿಗೆ ತಡೆ ಹಾಕಿ, ಸುಸೂತ್ರವಾಗಿ, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅನುಸರಿಸಲಾಗುವ ಕಾನೂನು ಕ್ರಮಗಳನ್ನು ನೀತಿ ಸಂಹಿತೆಎಂದು ಹೇಳಲಾಗುತ್ತದೆ. ಚುನಾವಣೆಗೆ ದಿನಾಂಕ ಘೋಷಣೆ ಆದಾಗಿನಿಂದ ಮತದಾನ ಮುಗಿಯುವವರೆಗೆ ಇದು ಜಾರಿಯಲ್ಲಿರುತ್ತದೆ. ಸರ್ಕಾರ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಈ ನಿಯಮಗಳನ್ನು ಪಾಲಿಸುವುದು ಅಗತ್ಯ.

ಭಾರತದ ಸಂವಿಧಾನದ(Indian constitution)324 ನೇ ವಿಧಿಯ ಅಡಿಯಲ್ಲಿ, ಚುನಾವಣಾ ಆಯೋಗವು ಶಾಂತಿಯುತ ಚುನಾವಣೆಗಳಿಗಾಗಿ ನೀತಿ ಸಂಹಿತೆಯನ್ನು ಅನುಸರಿಸಲು ರಾಜಕೀಯ ಪಕ್ಷಗಳಿಗೆ ಸೂಚನೆ ನೀಡುತ್ತದೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನೀತಿ ಸಂಹಿತೆಯ ಅಡಿಯಲ್ಲಿ ತಿಳಿಸಲಾಗಿದೆ.

ರಾಜಕೀಯ ಪಕ್ಷಗಳು ಎಲೆಕ್ಷನ್ ಟೈಮಲ್ಲಿ ಹೆಂಗೆಲ್ಲಾ ಆಡ್ತವೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ.. ಹಂಗಾಗಿ ಚುನಾವಣಾ ಆಯೋಗ ನೀತಿ ಸಂಹಿತೆ ಹೆಸರಲ್ಲಿ ರಾಜಕೀಯ ಪಕ್ಷಗಳಿಗೆ ಸಾಕಷ್ಟು ಲಗಾಮು ಹಾಕಿರುತ್ತೆ.. ಅದರಲ್ಲೂ ಬೇಕಾಬಿಟ್ಟಿ ಮಾತನಾಡುವ, ನಾಲಗೆ ಹರಿಬಿಡುವ ರಾಜಕಾರಣಿಗಳ ಬಾಲ ಕಟ್ ಮಾಡುತ್ತೆ. ಒಟ್ಟಿನಲ್ಲಿ ಹೇಳುವುದಾದರೆ ಈ ಅವಧಿಯಲ್ಲಿ ರಾಜಕಾರಣಿಗಳು, ಪಕ್ಷಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಡುತ್ತದೆ.

ಒಂದ್ಸಲ ಚುನಾವಣ ನೀತಿ ಸಂಹಿತೆ ಜಾರಿಯಾಗಿ ಬಿಟ್ರೆ ಸರ್ಕಾರವನ್ನ ನಡೆಸೋದೇ ಕಷ್ಟ. ಸರ್ಕಾರದ ಹತ್ರ ಇರೋ ಹಲವಾರು ಅಧಿಕಾರಗಳು ಕಟ್ ಆಗಿ ಬಿಡ್ತವೆ. ಹಾಗಂತಾ ಸಂಪೂರ್ಣ ನಿರ್ಬಂಧ ಏನೂ ಇರೋದಿಲ್ಲ. ಒಂದಷ್ಟು ವಿನಾಯ್ತಿಗಳೂ ಇರ್ತವೆ.. ನೀರಾವರಿ, ಲೋಕೋಪಯೋಗಿ ಸೇರಿದಂತೆ ಈಗಾಗಲೇ ಕೆಲವೊಂದು ಯೋಜನೆಗಳ ಕಾರ್ಯ ಪ್ರಗತಿಯಲ್ಲಿದ್ದರೆ ಅವನ್ನ ಮುಂದುವರೆಸಬಹುದು.

● ಯಾರಿಗೆಲ್ಲಾ ನೀತಿ ಸಂಹಿತೆ ಅನ್ವಯ?
ಆಡಳಿತಾರೂಢ ಪಕ್ಷ, ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ-ಮಂಡಳಿಗಳು, ಸ್ಥಳೀಯ ಪೌರ ಸಂಸ್ಥೆಗಳು ಸೇರಿದಂತೆ ಸರ್ಕಾರದಿಂದ ಹಣಕಾಸಿನ ನೆರವು ಪಡೆಯವ ಪ್ರತಿಯೊಂದು ಸಂಸ್ಥೆ ಅಥವಾ ಕಚೇರಿಗಳು ಸೇರಿದಂತೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ನೀತಿ ಸಂಹಿತೆ ಅನ್ವಯವಾಗುತ್ತದೆ.

● ನೀತಿ ಸಂಹಿತೆಯ ನಿರ್ಭಂಧಗಳು:
□ ರಾಜಕೀಯವಾಗಿ ನಿರ್ಭಂಧಗಳೇನು?
• ಸರ್ಕಾರದಿಂದ ಯಾವುದೇ ಅನುದಾನ ಕೊಡುವುದು ಮತ್ತು ಅನುದಾನ ಕೊಡುವ ಕುರಿತು ಆಶ್ವಾಸನೆ ನೀಡುವುದು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವುದು ಅಭಿವೃದ್ಧಿ ಕಾಮಗಾರಿಗಳ ಕುರಿತು ಜನರಿಗೆ ಆಶ್ವಾಸನೆ ನೀಡುವುದು ಮಾಡುವಂತಿಲ್ಲ.

• ಚಾಲ್ತಿ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಆದರೆ, ಅಂತಹ ಕಾರ್ಯಕ್ರಮಗಳಿಗೆ ಹೊಸ ಫ‌ಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ.

• ನೀತಿ ಸಂಹಿತೆಯ ಅಡಿಯಲ್ಲಿ, ಸರ್ಕಾರವು ಯಾವುದೇ ಸರ್ಕಾರಿ ಅಧಿಕಾರಿ ಅಥವಾ ಉದ್ಯೋಗಿಯನ್ನು ವರ್ಗಾಯಿಸಲು ಅಥವಾ ಪೋಸ್ಟ್ ಮಾಡಲು ಸಾಧ್ಯವಿಲ್ಲ. ವರ್ಗಾವಣೆ ಬಹಳ ಮುಖ್ಯವಾಗಿದ್ದರೆ ಚುನಾವಣಾ ಆಯೋಗದಿಂದ ಅನುಮತಿ ಪಡೆಯುವುದು ಅಗತ್ಯ.

• ಸಚಿವರು ಮತ್ತು ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ. ಅಧಿಕಾರಗಳು ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸುವಂತಿಲ್ಲ. ಸರ್ಕಾರಿ ವಸತಿ ಗೃಹಗಳನ್ನು ಬಳಸುವಂತಿಲ್ಲ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳ ಸಭೆ ಕರೆಯುವಂತಿಲ್ಲ. ಅಂತಹ ಅಧಿಕಾರಿಗಳು ಸಹ ಸಚಿವರು, ಶಾಸಕರನ್ನು ಭೇಟಿ ಮಾಡುವಂತಿಲ್ಲ. ಅಲ್ಲದೆ ಸಚಿವರು ತಮಗೆ ಹಂಚಿಕೆಯಾಗಿರುವ ಅಧಿಕೃತ ಸರ್ಕಾರಿ ನಿವಾಸದಿಂದ ಕಚೇರಿಗೆ ಬರಲು ಮಾತ್ರ ಸರ್ಕಾರಿ ವಾಹನ ಬಳಸಬಹುದು. ಸಚಿವರು ಬೆಂಗಳೂರು ಬಿಟ್ಟು ಹೊರಗಡೆ ಅಧಿಕೃತ ಭೇಟಿಗೆ ತೆರಳಬೇಕಾದರೆ ಮುಖ್ಯಕಾರ್ಯದರ್ಶಿಯವರಿಗೆ ಲಿಖೀತವಾಗಿ ತಿಳಿಸಿ, ಚುನಾವಣಾ ಆಯೋಗದ ಗಮನಕ್ಕೆ ತರಬೇಕು.

• ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಅಥವಾ ಯಾವುದೇ ಧಾರ್ಮಿಕ ಸ್ಥಳವನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ.

• ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಸಭೆ ಆಯೋಜಿಸುವ, ಮೆರವಣಿಗೆ ನಡೆಸುವ ಮತ್ತು ಧ್ವನಿವರ್ಧಕಗಳನ್ನು ಬಳಸುವ ಮೊದಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಲಿಖಿತ ಅನುಮತಿಯನ್ನು ಪಡೆಯುವುದು ಅವಶ್ಯಕ. ರಾತ್ರಿ 10.00 ರಿಂದ ಬೆಳಗ್ಗೆ 6.00 ರವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.

• ಚುನಾವಣಾ ಪ್ರಚಾರ ಸಭೆ-ಸಮಾರಂಭ, ರ್ಯಾಲಿಗಳಿಗೆ ಚುನಾವಣಾ ಆಯೋಗ ಮತ್ತು ಸಂಬಂಧಪಟ್ಟ ಪೊಲೀಸ್‌ ಠಾಣೆಯ ಅನುಮತಿ ಕಡ್ಡಾಯ.

• ನಾಗರಿಕ ಸೌಲಭ್ಯಗಳಾದ ರಸ್ತೆ, ಸಮುದಾಯ ಭವನ, ಆಟದ ಮೈದಾನ ಮುಂತಾದವುಗಳು ಈಗಾಗಲೇ ಪೂರ್ಣಗೊಂಡಿದ್ದರೆ, ಅಧಿಕೃತ ಕಾರ್ಯಕ್ರಮಗಳಲ್ಲಿದೆ ಅಧಿಕಾರಿಗಳ ಮೂಲಕ ಅವುಗಳನ್ನು ಸಾರ್ವಜನಿಕ ಸೇವೆಗೆ ಅರ್ಪಿಸಬಹುದು.

□ ಜನ ಸಾಮಾನ್ಯರಿಗೆ ನೀತಿ ಸಂಹಿತೆ ಹೇಗೆ ಅನ್ವಯ?
ನೀತಿ ಸಂಹಿತೆ ಕೇವಲ ರಾಜಕೀಯ ಪಕ್ಷಗಳಿಗೆ ಅಥವಾ ಅಭ್ಯರ್ಥಿಗಳಿಗೆ ಸೀಮಿತವಾಗಿಲ್ಲ. ಇದು ಸಾಮಾನ್ಯರಿಗೂ ಅನ್ವಯಿಸುತ್ತದೆ. ಅಂದರೆ, ಯಾರಾದರೂ ತಮ್ಮ ನಾಯಕರ ಪ್ರಚಾರದಲ್ಲಿ ತೊಡಗಿದ್ದರೆ, ಅವರು ಈ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಮೇಲೆ ತಿಳಿಸಿದ ನಿಯಮಗಳನ್ನು ನಿರ್ಲಕ್ಷಿಸಿ ಕೆಲವು ಕೆಲಸಗಳನ್ನು ಮಾಡಲು ಯಾವುದೇ ರಾಜಕಾರಣಿ ನಿಮ್ಮನ್ನು ಕೇಳಿದರೆ, ನೀತಿ ಸಂಹಿತೆಯ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಹೇಳುವ ಮೂಲಕ ನೀವು ನಿರಾಕರಿಸಬಹುದು. ಯಾರಾದರೂ ಪ್ರಚಾರ ಮಾಡಿ ಸಿಕ್ಕಿಬಿದ್ದರೆ ಕ್ರಮ ಕೈಗೊಳ್ಳಬಹುದು.

ಸಂಹಿತೆ ಉಲ್ಲಂಘಿಸಿದರೆ ಏನಾಗುತ್ತೆ?
ಒಂದು ವೇಳೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಕಂಡು ಬಂದಲ್ಲಿ ಅಂಥವರ ಜನಪ್ರತಿನಿಧಿಗಳ ಕಾಯ್ದೆ 1951ರ ಅನುಸಾರ ಸೂಕ್ತ ಶಿಕ್ಷೆ ವಿಧಿಸಲು ಅವಕಾಶವಿದ್ದು, ಉಲ್ಲಂಘನೆಯ ಪ್ರಮಾಣ ಗರಿಷ್ಠ ಪ್ರಮಾಣವಾಗಿದ್ದಲ್ಲಿ ಪಕ್ಷದ ಮಾನ್ಯತೆಯನ್ನೇ ಅಸಿಂಧುಗೊಳಿಸಲು ಚುನಾವಣಾ ಆಯೋಗಕ್ಕೆ ಅವಕಾಶವಿರುತ್ತದೆ.

Leave A Reply

Your email address will not be published.