Dakshina Kannada: ಕಡಬ ಆಸಿಡ್ ದಾಳಿ ಪ್ರಕರಣ; ಆರೋಪಿ ಕಸ್ಟಡಿಗೆ
ಕಡಬ (ದ.ಕ.): ಕಡಬ ಸರಕಾರಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ನಡೆಸಿದ ಅಬಿನ್ ಸಿಬಿ (23) ಬಗ್ಗೆ ಒಂದೊಂದೇ ವಿಚಾರಗಳು ತನಿಖೆಯಿಂದ ಬೆಳಕಿಗೆ ಬರುತ್ತಿವೆ. ಈ ಮಧ್ಯೆ, ಆರೋಪಿಯನ್ನು ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ
ಕೇರಳದಿಂದ ರೈಲಿನ ಮೂಲಕ ಮಾರ್ಚ್ 3ರಂದು ರಾತ್ರಿ ಮಂಗಳೂರಿಗೆ ಬಂದಿಳಿ ದಿದ್ದ ಅಬಿನ್, ನಿಲ್ದಾಣ ದಲ್ಲಿಯೇ ರಾತ್ರಿ ಕಳೆದು ಮರುದಿನ ಮುಂಜಾನೆ ಬಸ್ ಹತ್ತಿ ಕಡಬಕ್ಕೆ ತಲುಪಿದ್ದ. ಬಸ್‌ನಿಂದ ಇಳಿದ ಆತ ಪರೀಕ್ಷೆ ಬರೆಯಲು ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಕಡಬ ಪೇಟೆಯಲ್ಲಿ ಭೇಟಿಯಾಗಿ ಮಾತನಾಡಿರುವುದು ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾ ದಲ್ಲಿ ದಾಖಲಾಗಿದೆ. ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕೇಳಿಕೊಂಡಿದ್ದಾನೆ.
ಬಳಿಕ ಕಡಬದ ಬೇಕರಿಯೊಂದಕ್ಕೆ ತೆರಳಿ ಅಲ್ಲಿ ತನ್ನ ಮೊಬೈಲ್ ಫೋನ್ ಚಾರ್ಜ್‌ಗಿಟ್ಟು ಸ್ವಲ್ಪ ಸಮಯದಲ್ಲಿ ಬರುವುದಾಗಿ ಬೇಕರಿ ಮಾಲೀಕರಲ್ಲಿ ಹೇಳಿ ತೆರಳಿದ್ದ. ಆ ವೇಳೆ ಕಪ್ಪು ಪ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿದ್ದು ಸಿಸಿಟಿವಿ ಕ್ಯಾಮೆರಾ ದಲ್ಲಿದಾಖಲಾಗಿದೆ.
ಬೇಕರಿಯಿಂದ ತನ್ನ ಬ್ಯಾಗ್ ಸಮೇತ ಹೊರಟ ಅಬಿನ್ ಮನೆಯೊಂದರ ಹಿಂಬದಿ ಬಟ್ಟೆ ಬದಲಾಯಿಸಿ ಕಡಬ ಪದವಿ ಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್ ಧರಿಸಿ ನೇರ ಕಾಲೇಜಿಗೆ ತೆರಳಿದ್ದ. ಆರೋಪಿ ಅಬಿನ್‌ನನ್ನು ತನಿಖೆಗೊಳಪಡಿಸಿ ಸ್ಥಳ ಮಹಜರು ನಡೆಸಿರುವ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.