shree Elyanna Malekudia: ಪರಿಸರ ಪ್ರೇಮಿ ಶ್ರೀ ಎಲ್ಯಣ್ಣ ಮಲೆಕುಡಿಯ, ನೆರಿಯ ಅಸ್ತಂಗತ; ಪಶ್ಚಿಮ ಘಟ್ಟಗಳ ಕಾಡುಗಳ ಕಣ್ಣಲ್ಲಿ ಕಂಬನಿ !

ಆದಿವಾಸಿಗಳ ಪರ ಹೋರಾಟಗಾರ, ಪರಿಸರ ಪ್ರೇಮಿ ಶ್ರೀ ಎಲ್ಯಣ್ಣ ಮಲೆಕುಡಿಯ, ನೆರಿಯರವರು ಅಕಾಲಿಕ ಅಸ್ತಂಗತರಾಗಿದ್ದಾರೆ. ಪಶ್ಚಿಮ ಘಟ್ಟಗಳ ಕಾಡು ಕಣ್ಣೀರು ಕರೆದಿದೆ.

ಆದಿವಾಸಿಗಳ ಪರ ಹೋರಾಟಗಾರ, ಪರಿಸರ ಪ್ರೇಮಿ, ಶ್ರೀ ಎಲ್ಯಣ್ಣ ಮಲೆಕುಡಿಯ ಹೃದಯಾಘಾತದಿಂದ ಇಂದು ಬೆಳಿಗ್ಗೆ ಸುಮಾರು 7 ಗಂಟೆಗೆ ದೈವಾಧೀನರಾದರು. ಅವರಿಗೆ ಕೇವಲ 55 ವರ್ಷ ವಯಸ್ಸಾಗಿತ್ತು.

ತನ್ನ ಪರಿಸರ ಸಂಬಂಧಿ ಮತ್ತು ದಲಿತ ವರ್ಗಗಳ ಪರವಾಗಿ ಇದ್ದ ಕಾಳಜಿಯಿಂದಾಗಿ ಅವರು, ರಾಜ್ಯ ಸರ್ಕಾರದ ಪಶ್ಚಿಮ ಘಟ್ಟ ಕಾರ್ಯ ಪಡೆಯ ಸದಸ್ಯರಾಗಿ, ಮಲೆಕುಡಿಯ ಸಂಘದ ಅಧ್ಯಕ್ಷರಾಗಿ, ನಾಗರಿಕ ಸೇವಾ ಟ್ರಸ್ಟ್ ನ ಸಲಹಾ ಸಮಿತಿಯ ಸದಸ್ಯರಾಗಿ, ಸತ್ವಮೇವ ಜಯತೇ ಸಂಘಟನೆಗಳ ಒಕ್ಕೂಟದ ಸಂಚಾಲಕರಾಗಿ ಸಲ್ಲಿಸಿದ ಸೇವೆ ಸಲ್ಲಿಸಿದ್ದಾರೆ. ಅವರೊಬ್ಬ ಹುಟ್ಟು ಹೋರಾಟಗಾರ. ಮಲೆಕುಡಿಯ ಜನಾಂಗದಲ್ಲಿ ಹುಟ್ಟಿದ ಅವರು ಆ ಕಾಲದಲ್ಲಿಯೇ ಗ್ರಾಜುಯೇಟ್. ತಮ್ಮ ಪಂಗಡಕ್ಕೆ ಕನಿಷ್ಠ ವಿದ್ಯಾಭ್ಯಾಸಗಳು ದೊರೆಯದ ಕಾಲದಲ್ಲಿಯೇ ಪದವಿ ಪಡೆದವರು ಶ್ರೀ ಎಲ್ಯಣ್ಣ ಮಲೆಕುಡಿಯ.

ಜೀವನಪೂರ್ತಿ, ಬುದ್ಧಿ ತಿಳಿದಂದಿನಿಂದ ನಿರಂತರವಾಗಿ ಜಮೀನುದಾರಿಕೆಯ ವಿರುದ್ಧ ಹೋರಾಡುತ್ತಾ ಬಂದವರವರು. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಮತ್ತು ಸುತ್ತಮುತ್ತಲ 10,000 ಕ್ಕೂ ಹೆಚ್ಚು ಎಕರೆ ಜಾಗದ ಭೂ ಮಾಲೀಕರ ವಿರುದ್ಧ, ಬರಿಗೈಯಲ್ಲಿ ಕಾನೂನಿನ ಮತ್ತು ಜನ ನ್ಯಾಯಾಲಯದ ಮೂಲಕ ಹೋರಾಡಿದ ಶ್ರೀ ಎಲ್ಲಣ್ಣ ಮಲೆಕುಡಿಯರನ್ನು ಜನರು ನೆನಪಲ್ಲಿ ಇಟ್ಟುಕೊಳ್ಳುತ್ತಾರೆಯೋ ಇಲ್ಲವೋ ಗೊತ್ತಿಲ್ಲ; ಆದರೆ ಅವರ ಹೋರಾಟಗಳನ್ನು ಪಶ್ಚಿಮ ಘಟ್ಟಗಳ ಕಾಡು ಗುಡ್ಡ ಬೆಟ್ಟಗಳು ಮರೆಯದೆ ಮನದಲ್ಲಿ ಇಟ್ಟುಕೊಂಡು ನೆನೆಯಲಿವೆ.

ಈ ಸಂದರ್ಭ, ಅವರ ಸುದೀರ್ಘ ಒಡನಾಟ ಇಟ್ಟುಕೊಂಡ ಸಂಸ್ಥೆಯಾದ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸೋಮನಾಥ ನಾಯಕ್ ಮತ್ತು ಇತರ ಪದಾಧಿಕಾರಿಗಳು ಈ ಪರಿಸರ ಪ್ರೇಮಿ ಹೋರಾಟಗಾರನ ಸಾವಿಗೆ ಕಂಬನಿ ಮಿಡಿದಿದ್ದಾರೆ.

 

ಇದನ್ನು ಓದಿ: Gold Purchase Cashback: ಫೋನ್ ಪೇ ಬಳಕೆದಾರರಿಗೆ ಬಂಪರ್ ಆಫರ್- 1,000 ರೂ ಮೌಲ್ಯದ ಚಿನ್ನ ಖರೀದಿಸಿದ್ರೆ ನಿಮಗೆ ಸಿಗುತ್ತೆ 3,000 !!

Leave A Reply

Your email address will not be published.