Baking Soda and Baking Powder: ಮನೆಯಲ್ಲಿ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಎರಡನ್ನೂ ಬಳಸ್ತೀರಾ?! ಹಾಗಿದ್ರೆ ಇವೆರಡರ ನಡುವಿನ ವ್ಯತ್ಯಾಸ ಗೊತ್ತಾ?
Baking Soda and Baking Powder: ಅಡುಗೆ ಮನೆಯಲ್ಲಿ ಬಳಸುವ ಅಡುಗೆ ಸೋಡಾ ಮತ್ತು ಬೇಕಿಂಗ್ ಪೌಡರ್ (Baking Soda and Baking Powder) ಎರಡು ಒಂದೇ ಎಂದು ನಿಮ್ಮ ಊಹೆ ಆಗಿದ್ದರೆ ಅದು ತಪ್ಪು. ಯಾಕೆಂದರೆ ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಎರಡೂ ಬೇರೆ ಬೇರೆ. ಬೇಕಿಂಗ್ ಸೋಡಾ ಅಥವಾ ಬೇಕಿಂಗ್ ಪೌಡರ್ ಆಗಿರಲಿ, ಎರಡನ್ನೂ ಆಹಾರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಸಾಮಾನ್ಯವಾಗಿ, ವಾಣಿಜ್ಯಿಕವಾಗಿ ಮಾರಾಟವಾಗುವ ಬೇಕಿಂಗ್ ಪೌಡರ್‌ಗಳು ಅಡಿಗೆ ಸೋಡಾ ಅಥವಾ ಸೋಡಿಯಂ ಬೈಕಾರ್ಬನೇಟ್ ಮತ್ತು ದ್ರವಗಳಲ್ಲಿ ಕರಗಿದ ಆಮ್ಲೀಯ ಪ್ರತಿಕ್ರಿಯೆಗಳನ್ನು ಉಂಟುಮಾಡುವ ಒಂದು ಅಥವಾ ಹೆಚ್ಚಿನ ಲವಣಗಳನ್ನು ಒಳಗೊಂಡಿರುತ್ತದೆ.
ಅಡುಗೆ ಸೋಡಾ ಮತ್ತು ಬೇಕಿಂಗ್ ಪೌಡರ್ ಈ ಎರಡೂ ರಾಸಾಯನಿಕಗಳು ಬಿಳಿ ಬಣ್ಣದಲ್ಲಿರುತ್ತವೆ ಮತ್ತು ಇತರ ಪದಾರ್ಥಗಳೊಂದಿಗೆ ಅವುಗಳನ್ನು ಮಿಕ್ಸ್ ಮಾಡಲಾಗುತ್ತೆ. ಬೇಕಿಂಗ್ ಸಮಯದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು (carbon dioxide) ಉತ್ಪಾದಿಸುತ್ತವೆ. ಈ ಕಾರಣಕ್ಕಾಗಿ, ಕೇಕ್ ಗಳು, ಕುಕೀಗಳು ಹೆಚ್ಚು ಉಬ್ಬುತ್ತವೆ. ಈ ಎರಡು ರಾಸಾಯನಿಕಗಳ ಬಳಕೆ ಮತ್ತು ಸ್ವರ ಒಂದೇ ಆಗಿರುತ್ತದೆ, ಆದರೆ ಅವುಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯ.
ಬೇಕಿಂಗ್ ಸೋಡಾ ಅಂದರೆ: ಬೇಕಿಂಗ್ ಸೋಡಾ ಸೋಡಿಯಂ ಬೈಕಾರ್ಬೊನೇಟ್ ಎಂದು ಕರೆಯಲ್ಪಡುವ ಶುದ್ಧ ರಾಸಾಯನಿಕ ಸಂಯುಕ್ತ. ಇದನ್ನು ರಾಸಾಯನಿಕ ಸೂತ್ರ NaHCO 3 ನಿಂದ ಸೂಚಿಸಬಹುದು. ಇದು ಒಂದು ಪ್ರತ್ಯಾಮ್ಲವಾಗಿದ್ದು, ಅದರ ಹುಳಿಗೊಳಿಸುವ ಗುಣಲಕ್ಷಣಗಳನ್ನು ಸಕ್ರಿಯಗೊಳಿಸಲು ಆಮ್ಲದ ಅಗತ್ಯವಿದೆ. ಇದು ಅಡುಗೆ ಸೋಡಾ ಪಾಕ ವಿಧಾನದಲ್ಲಿ ಆಮ್ಲದ ಜೊತೆಗೆ ಸೇರಿದಾಗ (ಮೊಸರು, ನಿಂಬೆ ರಸ ಅಥವಾ ವಿನೆಗರ್), ರಾಸಾಯನಿಕ ಪ್ರತಿಕ್ರಿಯೆ ಉಂಟಾಗುತ್ತದೆ. ಇಂಗಾಲದ ಡೈಆಕ್ಸೈಡ್ ಅನಿಲವು ಬಿಡುಗಡೆಯಾಗುತ್ತದೆ, ಇದರಿಂದಾಗಿ ಹಿಟ್ಟು ಹೆಚ್ಚಾಗುತ್ತದೆ. ಈ ಪ್ರತಿಕ್ರಿಯೆಯು ತ್ವರಿತವಾಗಿ ಸಂಭವಿಸುತ್ತದೆ, ಹಾಗಾಗಿ ಬೇಕಿಂಗ್ ಸೋಡಾ ಮಿಕ್ಸ್ ಮಾಡಿದ ಕೂಡಲೇ ನೀವು ಅದನ್ನು ಬೇಕ್ ಮಾಡಲೇಬೇಕು.
ಬೇಕಿಂಗ್ ಸೋಡಾ ವನ್ನು ಮಜ್ಜಿಗೆ, ಹುಳಿ ಕ್ರೀಮ್ ಮೊಸರು, ಮೊದಲಾದ ಆಮ್ಲೀಯ ಪದಾರ್ಥಗಳನ್ನು ಹೊಂದಿರುವ ಪಾಕವಿಧಾನಗಳಿಗೆ ಬೇಕಿಂಗ್ ಸೋಡಾ ಸೂಕ್ತ. ಇದನ್ನು ಸಾಮಾನ್ಯವಾಗಿ ಪ್ಯಾನ್ ಕೇಕ್ ಗಳು, ಬ್ರೆಡ್ ಮತ್ತು ಕೆಲವು ಕುಕೀಗಳನ್ನು ಮಾಡುವಾಗ ಬಳಸಲಾಗುತ್ತೆ.
ಬೇಕಿಂಗ್ ಪೌಡರ್ ಅಂದರೆ :
ಬೇಕಿಂಗ್ ಪೌಡರ್ ಎಂಬುದು ಬೇಕಿಂಗ್ ಸೋಡಾ, ಆಮ್ಲ ( ಟಾರ್ಟಾರ್ ನ ಕ್ರೀಮ್) ಮತ್ತು ಪಿಷ್ಟ (corn starch) ಮಿಶ್ರಣ. ಇದರಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ: ಸಿಂಗಲ್-ಆಕ್ಟಿಂಗ್ ಮತ್ತು ಡಬಲ್-ಆಕ್ಟಿಂಗ್.
ಇದರಲ್ಲಿ ಸಿಂಗಲ್-ಆಕ್ಟಿಂಗ್ ಬೇಕಿಂಗ್ ಪೌಡರ್ ಪಾಕವಿಧಾನದಲ್ಲಿ ದ್ರವ ಮತ್ತು ಆಮ್ಲದೊಂದಿಗೆ ಬೆರೆಸಿದ ತಕ್ಷಣ ಇಂಗಾಲದ ಡೈಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತದೆ.
ಮತ್ತೊಂದೆಡೆ, ಡಬಲ್-ಆಕ್ಟಿಂಗ್ ಬೇಕಿಂಗ್ ಪೌಡರ್, ಬೆರೆಸಿದಾಗ ಮತ್ತು ಬೇಕಿಂಗ್ ಸಮಯದಲ್ಲಿ ಶಾಖಕ್ಕೆ ಒಡ್ಡಿಕೊಂಡಾಗ ಅನಿಲವನ್ನು ಬಿಡುಗಡೆ ಮಾಡುತ್ತದೆ.
ಇನ್ನು ಬೇಕಿಂಗ್ ಪೌಡರ್ ನ್ನು ವಿವಿಧ ಪಾಕವಿಧಾನದಲ್ಲಿ ಬಳಕೆ ಮಾಡಬಹುದು ಮತ್ತು ಆಮ್ಲೀಯ ಅಂಶಗಳಿಲ್ಲದ ಪಾಕವಿಧಾನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಹೆಚ್ಚಾಗಿ ಕೇಕ್ , ಮಫಿನ್ಗಳು(muffins) ಮತ್ತು ಬಿಸ್ಕತ್ತುಗಳಲ್ಲಿ ಬಳಸಲಾಗುತ್ತದೆ.
ಒಟ್ಟಿನಲ್ಲಿ ಇವೆರಡನ್ನು ಸಿಂಪಲ್ ಆಗಿ ಹೇಳೋದಾದರೆ ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಎರಡು ವಿಭಿನ್ನ ರಾಸಾಯನಿಕಗಳು. ಅಡಿಗೆ ಸೋಡಾ 100 ಪ್ರತಿಶತ ಸೋಡಿಯಂ ಬೈಕಾರ್ಬೊನೇಟ್ ಆಗಿದೆ, ಇದು ಕ್ಷಾರೀಯ ಸಾಲ್ಟ್ ಕಂಪೌಂಡ್ ಹೊಂದಿದೆ ಮತ್ತು ಇದು ಆಮ್ಲದೊಂದಿಗೆ ಬೆರೆತಾಗ, ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ, ಬೇಕಿಂಗ್ ಪೌಡರ್ ಸೋಡಿಯಂ ಬೈಕಾರ್ಬೊನೇಟ್ ಮತ್ತು ಆಮ್ಲದ (ಟಾರ್ಟಾರ್ ನಂತಹ) ಮಿಶ್ರಣವಾಗಿದ್ದು, ಸಕ್ರಿಯಗೊಳಿಸಲು ತೇವಾಂಶ ಅಥವಾ ಶಾಖದ ಅಗತ್ಯವಿದೆ.
ಇನ್ನು ಇದರ ಸಂಗ್ರಹದ ಬಗ್ಗೆ ಹೇಳುವುದಾದರೆ, ಬೇಕಿಂಗ್ ಸೋಡಾ ಮತ್ತು ಬೇಕಿಂಗ್ ಪೌಡರ್ ಎರಡನ್ನೂ ಗಾಳಿಯಾಡದ ಪಾತ್ರೆಗಳಲ್ಲಿ ತಂಪಾದ, ಅಥವಾ ಶುಷ್ಕ ಸ್ಥಳದಲ್ಲಿ ಇರಿಸುವುದು ಸೂಕ್ತ.