Basavaraj Rayareddy: ಬಿಜೆಪಿಗೆ ಹೋಗಲು ನನಗೇನೂ ತೊಂದರೆ ಇಲ್ಲ ಆದರೆ…. -ಮಾಜಿ ಸಚಿವ ,ಕಾಂಗ್ರೆಸ್ ಶಾಸಕ ರಾಯರಡ್ಡಿ
Political news I have no problem to join BJP says Former Minister Congress MLA basavaraj Rayareddy

Basavaraj Rayareddy: ಧಾರವಾಡ, ಸೆ. 4: ಬಿಜೆಪಿಗೆ ಹೋಗಲು ನನಗೇನೂ ತೊಂದರೆ ಇಲ್ಲ, ಆದರೆ ಆ ಪಕ್ಷದ ತತ್ವ-ಸಿದ್ಧಾಂತಗಳು ನನಗೆ ಸರಿ ಹೊಂದುವುದಿಲ್ಲ. ಹೀಗಾಗಿ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಬಸವರಾಜ ರಾಯರಡ್ಡಿ( Basavaraj Rayareddy) ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕಾಂಗ್ರೆಸ್ ಮೇಲೆಯೂ ಸಿಟ್ಟಿಲ್ಲ. ಸಚಿವಸ್ಥಾನಸಿಗದಿರುವುದಕ್ಕೆ ಅಸಮಾಧಾನವೂ ಇಲ್ಲ. ಆದರೆ ನಮ್ಮನ್ನು ಉಪಯೋಗಿಸಿಕೊಳ್ಳುತ್ತಿಲ್ಲವಲ್ಲ ಎಂಬ ಬೇಸರ ಇದೆ. ನಾನು ಸಿದ್ಧಾಂತ ಇಟ್ಟುಕೊಂಡು ರಾಜಕೀಯ ಮಾಡಿದವನು. ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ ವೈಯಕ್ತಿಕವಾಗಿ ಸಿದ್ದರಾಮಯ್ಯ ನನಗೆ ಬಹಳ ಬೇಕಾದವರು.
ಅವರೊಬ್ಬ ಒಳ್ಳೆಯ ಜನನಾಯಕ. ಅವರಂಥ ರಾಜಕಾರಣಿಗಳು ಸಿಗುವುದಿಲ್ಲ. ನಾವೆಲ್ಲರೂ ಒಮ್ಮೆಯೇ ರಾಜಕೀಯಕ್ಕೆ ಬಂದವರು. ಇಂದು ಇಬ್ಬರು ಸಚಿವರನ್ನು ನಾನೇ ನನ್ನ ಫಾರ್ಮ್‌ಹೌಸ್‌ಗೆ ಕರೆದಿದ್ದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.
ಈ ಹಿಂದೆ ಸಚಿವರು ಶಾಸಕರ ಮಾತು ಕೇಳುತ್ತಿಲ್ಲ ಎಂದು ಆರೋಪಿಸಿ ಸಂಚಲನ ಸೃಷ್ಟಿಸಿದ್ದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಮತ್ತೊಮ್ಮೆ ಸಿಟ್ಟಿಗೆದ್ದಿದ್ದಾರೆ. ಈ ಬಾರಿ ಸಚಿವರು ಮಾತ್ರವಲ್ಲ, ಹಿರಿಯ, ಕಿರಿಯ ಅಧಿಕಾರಿಗಳು ಕೂಡಾ ಮಾತು ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಕಳೆದ ಬಾರಿ ಶಾಸಕ ಬಿ.ಆರ್. ಪಾಟೀಲ್ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಪರೋಕ್ಷವಾಗಿ ಆರೋಪ ಹೊರಿಸಿ ನೇರವಾಗಿ ಸಿಎಂ ಅವರಿಗೆ ಬರೆದಿದ್ದ ಪತ್ರಕ್ಕೆ ರಾಯರೆಡ್ಡಿ ಸಹಿ ಹಾಕಿದ್ದರು. ಒಂದು ಹಂತದಲ್ಲಿ ಬಿ.ಆರ್. ಪಾಟೀಲ್ ಅವರೇ “ಅದು ನನ್ನ ಪತ್ರವಲ್ಲ ಎಂದು ಹೇಳಿ ಜಾರಿಕೊಂಡರೂ ರಾಯರೆಡ್ಡಿ ಅವರು ಮಾತ್ರ ಸಮಸ್ಯೆ ಇರುವುದು ನಿಜ, ಸಹಿ ಹಾಕಿದ್ದೂ ನಿಜ” ಎಂದು ಗಟ್ಟಿಯಾಗಿ ಧ್ವನಿ ಎತ್ತಿದ್ದರು.
ಶಾಸಕರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದ ಅವರು ಮುಂದೆ ನಡೆದ ಸಭೆಯಲ್ಲೂ ಅದರ ಬಗ್ಗೆ ಉಲ್ಲೇಖ ಮಾಡಿದ್ದರು. ಆಗ ಸಿದ್ದರಾಮಯ್ಯ ಅವರು ರಾಯರೆಡ್ಡಿ ಅವರನ್ನು ಸಮಾಧಾನ ಮಾಡಿ ಕಳುಹಿಸಿದ್ದರು. ಈ ನಡುವೆ, ಬೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳೇ ನಮ್ಮ ಮಾತು ಕೇಳುತ್ತಿಲ್ಲ. ಹೀಗಾಗಿ ಇಂಧನ ಖಾತೆ ಸಚಿವರು ಹಿರಿಯ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಸಿಎಂ ಅವರಿಗೆ ಬರೆದ ಪತ್ರದಲ್ಲಿ ರಾಯರೆಡ್ಡಿ ಒತ್ತಾಯಿಸಿದ್ದರು.
ಹಿರಿಯ ಅಧಿಕಾರಿಗಳು ನಮ್ಮ ಮಾತು ಕೇಳ್ತಿಲ್ಲ. ತಮ್ಮ ಅಧೀನ ಕಿರಿಯ ಅಧಿಕಾರಿಗಳ ಮಾತನ್ನೂ ಕೇಳುತ್ತಿಲ್ಲ. ನನ್ನ ಸೂಚನೆಗೂ ಹಿರಿಯ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ ಎನ್ನುವುದು ರಾಯರೆಡ್ಡಿ ಪತ್ರದ ಸಾರಾಂಶ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಹಿಂದೆ ಸಚಿವರು ಮಾತು ಕೇಳುತ್ತಿಲ್ಲ ಎಂದಿದ್ದ ರಾಯರೆಡ್ಡಿ ಅವರು ಈಗ ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎಂದು ಸರ್ಕಾರದ ಮೇಲೆ ಮುಗಿಬಿದ್ದಿರುವುದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅರಿವು ಯೋಜನೆಯಡಿ ಶೈಕ್ಷಣಿಕ ಸಾಲ : ಅರ್ಜಿ ಆಹ್ವಾನ