ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ FIR ; ಬೆಳ್ತಂಗಡಿ ಠಾಣೆಯಲ್ಲಿ ದಾಖಲಾದ ಪ್ರಕರಣ
ಬೆಳ್ತಂಗಡಿ : ತಾಲೂಕಿನ ಉಜಿರೆ ಗ್ರಾಮದ ಬಡೆಕೊಟ್ಟು ನಿವಾಸಿ ಭಾಸ್ಕರ ನಾಯ್ಕ ಎಂಬವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಭಾಸ್ಕರ ನಾಯ್ಕ ಸೆ.2ರಂದು ಖಾಸಗಿ ಯೂ ಟ್ಯೂಬ್ ಚಾನೆಲ್ ವೊಂದಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸಂದರ್ಶನ ನೀಡಿ ವಾಪಾಸಾಗುತ್ತಿದ್ದಾಗ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಐಪಿಎಸ್ ಸೆಕ್ಷನ್ 1860 (143,147,148,341,342,354,324,504,506,149 38 Be ರಂತೆ ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲಿ ಏನಿದೆ? ವಿವರ:
ಭಾಸ್ಕರ ನಾಯ್ಕ ಸೆ.2ರಂದು ಮಂಗಳೂರಿನಲ್ಲಿ ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ ತನ್ನ ಮನೆಗೆ ಹಿಂದೆ ಬರುವಾಗ ಸಂಜೆ ಸುಮಾರು 5 ಗಂಟೆಗೆ ಉಜಿರೆ ಗ್ರಾಮದ ಪಾಣೆಯಾಲು ಎಂಬಲ್ಲಿ ತಲುಪಿದಾಗ ಮಹೇಶ್ ಶೆಟ್ಟಿ ತಿಮರೋಡಿ, ಮೋಹನ್ ಶೆಟ್ಟಿ ಪಾಣೆಯಾಲು, ಮುಖೇಶ್ ಶೆಟ್ಟಿ, ಪ್ರಜ್ವಲ್ ಗೌಡ ಕೆ.ವಿ, ನೀತು ಶೆಟ್ಟಿ, ಪ್ರಮೋದ್ ಶೆಟ್ಟಿ ಪಾಣಿಯಾಲು ಮತ್ತು ಇತರರು ಕಾರಿನಲ್ಲಿ ಬಂದು ಭಾಸ್ಕರ ನಾಯ್ಕರನ್ನು ತಡೆದು “ಬೇವರ್ಸಿ” ಮೊದಲಾದ ಅವಾಚ್ಯ ಶಬ್ದಗಳಿಂದ ಬೈದು, ಕೀಳು ಜಾತಿಗೆ ಹುಟ್ಟಿದ……ಎಂದು ಜಾತಿ ನಿಂದನೆ ಮಾಡಿದ್ದಾಗಿ ಹಾಗೂ ನಿನ್ನನ್ನು ಹೀಗೆ ಬಿಟ್ಟರೆ ತುಂಬಾ ಹಾರಾಡುತ್ತೀಯಾ ಎಂದು ಹೇಳಿ ಬಳಿಕ ಅವರು ಭಾಸ್ಕರ್ ನಾಯ್ಕರನ್ನು ಲೈಟ್‌ಕಂಬಕ್ಕೆ ಕಟ್ಟಿ ಹಾಕಿ ಮುಷ್ಟಿ ಗಾತ್ರದ ಕಲ್ಲುಗಳಿಂದ ಬೆನ್ನಿಗೆ, ಎದೆಗೆ, ಮುಖಕ್ಕೆ ಮತ್ತು ಕಾಲಿಗೆ ನೋವುಂಟು ಮಾಡಿದ್ದಾರೆ.
ಆಗ ಭಾಸ್ಕರ ನಾಯ್ಕರ ಜೋರಾದ ಬೊಬ್ಬೆ ಕೇಳಿ ಹತ್ತಿರದಲ್ಲೇ ಇದ್ದ ಮನೆಯಿಂದ ಅವರ ಹೆಂಡತಿ ಮಮತಾ ಓಡಿ ಬಂದು ಭಾಸ್ಕರ ನಾಯ್ಕರನ್ನು ಬಿಡಿಸಿ ಎಬ್ಬಿಸಿದಾಗ ಪ್ರಮೋದ್ ಶೆಟ್ಟಿ ಭಾಸ್ಕರ್ ನಾಯ್ಕರ ಹೆಂಡತಿಯ ಎಡಕಾಲಿನ ತೊಡೆಗೆ ಕಲ್ಲಿನಿಂದ ಹೊಡೆದಾಗ ಇಬ್ಬರೂ ಜೋರಾಗಿ ಬೊಬ್ಬೆ ಹಾಕಿದರು. ಆಗ ಅಲ್ಲಿಗೆ ಬಂದ ಪರಿಚಿತರಾದ ಜಯಪ್ರಕಾಶ್ ಶೆಟ್ಟಿ, ಶಂಕರ ಶೆಟ್ಟಿ, ತಿಮರೋಡಿ ಸುರೇಶ್ ನಾಯ್ಕ ಮತ್ತು ಇತರರನ್ನು ನೋಡಿ ಆರೋಪಿಗಳು ಹಲ್ಲೆಗೆ ಬಳಸಿದ್ದ ಕಲ್ಲನ್ನು ಅಲ್ಲೇ ಬಿಸಾಡಿ ನಿನ್ನನ್ನು ಜೀವಸಹಿತ ಇರಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.