Dakshina Kannada election: ದಕ್ಷಿಣ ಕನ್ನಡ ಲೋಕಸಭೆ ಚುನಾವಣೆ: ಸೌಜನ್ಯ ಪ್ರಕರಣವೇ ಗೆಲುವಿನಲ್ಲಿ ನಿರ್ಣಾಯಕ, ಬಿರುಕು ಬಿಟ್ಟ ಬಿಜೆಪಿಯಲ್ಲಿ ದೊಡ್ಡ ಧರ್ಮ ಸಂಕಟ !

Dakshina Kannada Lok Sabha Election Dharmasthala sowjanya murder case is decisive in victory

Dakshina Kannada election: ದೇಶದಾದ್ಯಂತ ನಿಧಾನವಾಗಿ ಲೋಕಸಭೆ ಚುನಾವಣೆಯ ಜ್ವರ, ಇನ್ನೂ ಚುನಾವಣೆಗೆ ಎಂಟು ತಿಂಗಳಿವೆ. ಸಣ್ಣಗೆ ಎದ್ದು ನಿಲ್ಲುತ್ತಿದೆ ಅಲ್ಲಲ್ಲಿ ಚುನಾವಣಾ ಸಮೀಕ್ಷೆಗಳು ‘ ಎನ್ಡಿಎ’ ನಾ ‘ ಇಂಡಿಯಾನಾ’ ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಇವುಗಳ ಮಧ್ಯೆ ಇದೀಗ ಬಂದ ಚುನಾವಣಾ ಸಮೀಕ್ಷೆ ಒಂದರಲ್ಲಿ ಕರ್ನಾಟಕದಲ್ಲಿ ಎನ್ ಡಿ ಎ ಮೈತ್ರಿಕೂಟ 16 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಮೂಡಿಸಿದೆ. ಇಂಡಿಯಾ ಮೈತ್ರಿಕೂಟ 11 ಸ್ಥಾನಗಳನ್ನು ಖಚಿತವಾಗಿ ಗೆಲ್ಲುವ ಭರವಸೆ ಬಂದಿದೆ. ಇನ್ನೊಂದು ಸ್ಥಾನವನ್ನು ಕರ್ನಾಟಕದಲ್ಲಿ ಜೆಡಿಎಸ್ ಪಡೆಯುವ ಹುನ್ನಾರದಲ್ಲಿದೆ.

ಇದು ಒಟ್ಟಾರೆ ಕರ್ನಾಟಕದ ಸುದ್ದಿಯಾದರೆ ಈ ಬಾರಿ ಹಿಂದುತ್ವದ ಪ್ರಯೋಗ ಶಾಲೆ ಕರಾವಳಿಯಲ್ಲಿ ವಿಭಿನ್ನ ಮಾದರಿಯಲ್ಲಿ ಚುನಾವಣೆ (Dakshina Kannada election) ನಡೆಯಲಿದೆ. ಸ್ಥಳೀಯ ಚುನಾವಣೆಗಳು ಅಥವಾ ವಿಧಾನಸಭೆ ವಿಧಾನ ಪರಿಷತ್ ಚುನಾವಣೆಗಳ ಸನ್ನಿವೇಶ ಏನೇ ಇರಲಿ, ಲೋಕಸಭೆಯ ಚುನಾವಣೆ ಸಂದರ್ಭ ಕರಾವಳಿ, ಬಿಜೆಪಿಯ ಭದ್ರಕೋಟೆ. ಅದನ್ನು ಭೇದಿಸುವುದು ಅಷ್ಟು ಸುಲಭದ ಮಾತಲ್ಲ. ಅಭ್ಯರ್ಥಿ ಯಾರೇ ಇರಲಿ, ಯಾರೇ ನಿಲ್ಲಲಿ, ಹಿಂದುತ್ವ ಮತ್ತು ಮೋದಿ ಫ್ಯಾಕ್ಟರ್ ಕೆಲಸ ಮಾಡಿಯೇ ಮಾಡುತ್ತದೆ. ಇದು ಇತ್ತೀಚಿನ 15 ವರ್ಷಗಳಲ್ಲಿ ನಾವು ಕಂಡು ಕೊಳ್ಳುತ್ತಿರುವ ಫಲಿತಾಂಶಗಳು.

ಆದ್ರೆ ಈ ಬಾರಿ ಕರಾವಳಿಯಲ್ಲಿ ಹೊಸ ಬದಲಾವಣೆ, ವಿಭಿನ್ನ ಟ್ರೆಂಡ್ ಕಂಡು ಬರುತ್ತಿದೆ. ಬಿಜೆಪಿಯ ರಾಜ್ಯ ಅಧ್ಯಕ್ಷರೂ, ಕರಾವಳಿಯ ಹಾಲಿ ಬಿಜೆಪಿಯ ಸಂಸದ ನಳಿನ್ ಕುಮಾರ್ ಕಟೀಲು ಅವರ ಹೆಸರು ಇದೀಗ ಕರಾವಳಿಯಲ್ಲಿ ಚಾಲ್ತಿಯಲ್ಲಿ ಉಳಿದಿಲ್ಲ. ವಿರೋಧ ಪಕ್ಷದವರು ಬಿಡಿ , ಕಟ್ಟರ್ ಹಿಂದುತ್ವವಾದಿಗಳಿಗೆ ಕೂಡ ನಳಿನ್ ಬೇಡವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎರಡು ಮೂರು ಹೆಸರುಗಳು ಚಾಲ್ತಿಯಲ್ಲಿದ್ದವು. ಇವರ ಮಧ್ಯೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಆರೆಸ್ಸೆಸ್ ಹಸ್ತಕ್ಷೇಪದಿಂದ ಪುತ್ತೂರಲ್ಲಿ ಬಿಜೆಪಿ ಸೋಲಲು ಕಾರಣ ಆಗಿತ್ತು. ಎಲ್ಲಿಂದಲೋ ಒಬ್ಬರು ಹಿರಿಯ ಅಕ್ಕನಂತಹಾ ಆಶಾ ತಿಮ್ಮಪ್ಪ ಗೌಡ ಎಂಬ ಮಹಿಳೆಯನ್ನು ಓಟಿಗೆ ನಿಲ್ಲಿಸಲಾಗಿತ್ತು.

ಅವರನ್ನು ಬಿಜೆಪಿ ಕಾರ್ಯಕರ್ತರೇ ‘ ದೊಡ್ಡ, ದೊಡ್ಡ ‘(ದೊಡ್ಡಮ್ಮ ) ಅಂತ ಕರೆದು ಕರೆದು ಸೋಲಿಸಿಬಿಟ್ಟರು. ಲೀಡರುಗಳು ಹೇಳಿದ್ದನ್ನು ಕಣ್ಣು ಬಾಯಿ ಮುಚ್ಚಿ ಪಾಲಿಸ್ತಾರೆ ಅನ್ನೋದು ಅಂದು ಪ್ರೂವ್ ಆಗಿತ್ತು. ಅವತ್ತು ಎಲ್ಲಿಂದಲೋ ಅಭ್ಯರ್ಥಿಯನ್ನು ತಂದು ನಿಲ್ಲಿಸಿದುದರ ವಿರುದ್ಧ ಸಿಡಿದು ನಿಂತವರು ಅರುಣ್ ಕುಮಾರ್ ಪುತ್ತಿಲವರು. ನಂತರ ಕರಾವಳಿಯಲ್ಲಿ ಪುತ್ತಿಲ ಸ್ಟಾರ್ ಆಗಿ ಮೆರೆದರು. ಪುತ್ತಿಲ ಪರಿವಾರ ಸ್ಥಾಪಿಸಿ ಭದ್ರವಾದ ಹೆಜ್ಜೆ ಗುರುತುಗಳನ್ನು ರಾಜಕೀಯದಲ್ಲಿ ತಳ ಊರಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ಲೋಕಸಭೆಗೆ ಬಿಜೆಪಿಯಲ್ಲಿ ಎಂಪಿ ಸ್ಥಾನ ಗೆಟ್ಟಿಸಿಕೊಂಡು ಗೆದ್ದು ಬರುವ ಉತ್ಸಾಹದಲ್ಲಿದ್ದಾರೆ. ಆದರೆ ಕಳೆದ ಒಂದು ತಿಂಗಳಿನಿಂದ ಕರಾವಳಿಯ ವಾಸ್ತವ ಸ್ಥಿತಿ ಬದಲಾಗಿ ಹೋಗಿದೆ ಅದು ಅರುಣ್ ಕುಮಾರ್ ಅವರ ಮತ್ತು ಇತರ ಬಿಜೆಪಿ ಅಭ್ಯರ್ಥಿಗಳ ಮಹತ್ವಾಕಾಂಕ್ಷೆಗೆ ಅಡ್ಡಿ ದೊಡ್ಡ ಅಡಚಣೆಯೊಂದು ಬಂದಂತೆ ಅನ್ನಿಸುತ್ತಿದೆ. ಅದುವೇ ಸೌಜನ್ಯ ಅತ್ಯಾಚಾರ ಮತ್ತು ಹತ್ಯಾ ಪ್ರಕರಣ. ಅದು ಪುತ್ತಿಲರನ್ನು ಆತಂಕಕ್ಕೆ ಈಡು ಮಾಡಿದೆ.

ಹೌದು ಇವತ್ತು ಕರಾವಳಿಯಲ್ಲಿ ಭುಗಿಲೆದ್ದು ಇದೀಗ ರಾಜ್ಯ ಬಿಡಿ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಸೌಜನ್ಯ ಅತ್ಯಾಚಾರ ಪ್ರಕರಣ ಮತ್ತೆ ಬಿಜೆಪಿಯನ್ನು ಚಿಂತೆಗೀಡು ಮಾಡುವಂತೆ ಮಾಡಿದೆ. ಸೌಜನ್ಯ ಹತ್ಯೆಯಲ್ಲಿ ಒಂದು ರೀತಿಯಲ್ಲಿ ಬಿಜೆಪಿಯೇ ಪ್ರಮುಖ ಆರೋಪಿ ಎಂದರೂ ತಪ್ಪಾಗಲಿಕ್ಕಿಲ್ಲ. ಕರ್ನಾಟಕದ ಸರಕಾರದ ಅವಧಿಯಲ್ಲಿ ಸೌಜನ್ಯ ಹತ್ಯೆ ನಡೆದಿತ್ತು. ಅವಾಗ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಡಿವಿ ಸದಾನಂದ ಗೌಡರು. ಕರಾವಳಿಯ ಸ್ವಜಾತಿಯ ಗೌಡರ ಹುಡುಗಿಯನ್ನು ಭೀಕರವಾಗಿ ಅತ್ಯಾಚಾರ ಮತ್ತು ಹತ್ಯೆ ನಡೆಸಿದರೂ ಕಟುಕನ ಮನಸ್ಸು ಕರಗಿರಲಿಲ್ಲ. ಡಿವಿ ಸದಾನಂದ ಗೌಡ ಮತ್ತು ಆಗಿನ ಗೃಹ ಸಚಿವ ಆರ್ ಅಶೋಕ್ ಕೂಡಾ ಧರ್ಮಸ್ಥಳಕ್ಕೆ ಬಂದರೂ ಸೌಜನ್ಯಕ್ಕೆ ಆದರೂ ಸೌಜನ್ಯ ಮನೆಗೆ ಬಂದಿರಲಿಲ್ಲ. ಬರೋದು ಬೇಡ, ಸರಿಯಾಗಿ ತನಿಖೆ ಆಗುವಂತೆ ಕೂಡಾ ನೋಡಿಕೊಳ್ಳಲಿಲ್ಲ.

ಕೇಸನ್ನು ಬುಡದಿಂದಲೇ ಅಡಿಮೇಲು ಮಾಡುವ ಎಲ್ಲಾ ಕೆಲಸಗಳು ಸರಕಾರದ ಅವಧಿಯಲ್ಲಿ ನಡೆದಿದೆ. ಹಾಗೆಂದು ಇವತ್ತು ಇಡೀ ಅವಿಭಜಿತ ದಕ್ಷಿಣ ಕನ್ನಡ ಮಾತ್ರವಲ್ಲದೆ ಪ್ರತಿಯೊಬ್ಬರೂ ಮಾತಾಡಿಕೊಳ್ಳುತ್ತಿದ್ದಾರೆ. ಈಗ ಸೌಜನ್ಯ ಪ್ರಕರಣವು ಮೇಲೆದ್ದು ನಿಂತ ಕಾರಣ ಬಿಜೆಪಿಯ ನಡೆಗೆ ಅಸಮಾಧಾನದ ಹೊಗೆ ಜಾಸ್ತಿಯಾಗಿದೆ. ಅಷ್ಟೇ ಅಲ್ಲ, ಸೌಜನ್ಯ ಪರ ಯಾವುದೇ ಹಿಂದೂಪರ ಸಂಘಟನೆಗಳ ನಾಯಕರು ದೊಡ್ಡ ದನಿಯೆತ್ತಿಲ್ಲ. ಇದು ಅದೇ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ನೋಯಿಸಿದೆ. ಆದುದರಿಂದ ಬಿಜೆಪಿಯಿಂದ ಮತ್ತು ಸಂಘಟನೆಗಳ ಕಾರ್ಯಕ್ರಮಗಳಿಂದ ಮಾನಸಿಕವಾಗಿ ಹಿಂದೂ ಕಾರ್ಯಕರ್ತರು ವಿಮುಖರಾಗುತ್ತಿದ್ದಾರೆ. ಇವತ್ತು ಸೌಜನ್ಯ ಪ್ರಕರಣದ ವಿಷಯದಲ್ಲಿ ಯಾವುದೇ ನಾಯಕರ ಮಾತುಗಳನ್ನು ಕಾರ್ಯಕರ್ತರುಗಳು ಕೇಳುವ ತಾಳ್ಮೆಯಲ್ಲಿ ಇಲ್ಲ. ಮುಖ್ಯವಾಗಿ ಮಹಿಳೆಯರಲ್ಲಿ ಜನಾಭಿಪ್ರಾಯ ರೂಪುಗೊಂಡಿದ್ದು ಅದು ಬಿಜೆಪಿಯ ಪಾಲಿಗೆ ಬಹುದೊಡ್ಡ ಧರ್ಮ ಸಂಕಟವಾಗಿ ಮಾರ್ಪಟ್ಟಿದೆ.

ಅದೇ ಸಮಯದಲ್ಲಿ, ಕಳೆದ ಸಲ ಸೌಜನ್ಯ ಹತ್ಯಾ ಪ್ರಕರಣವನ್ನು ಸಿಬಿಐಗೆ ವಹಿಸಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರ ಮೆಚ್ಚುಗೆಗೆ ಕೂಡ ಪಾತ್ರವಾಗಿತ್ತು. ಅದೇ ರೀತಿ ಈ ಸಲ ಕೂಡ ಸಿದ್ದರಾಮಯ್ಯನವರ ಮೇಲೆ ಹೋರಾಟಗಾರರಿಗೆ ದೊಡ್ಡ ಭರವಸೆಯೇ ಇದೆ. ಹಾಗಾಗಿ ಮಹಿಳೆಯರು ಮತ್ತು ಈ ತನಕ ಬಿಜೆಪಿಯ ಜತೆಗಿದ್ದು ಭ್ರಮನಿರಸನ ಆದ ಹಿಂದೂ ಪರ ಸಂಘಟನೆಯ ಹುಡುಗರು ಕಾಂಗ್ರೆಸ್ ಕಡೆಗೆ ವಾಲುತ್ತಿದ್ದಾರೆ.

ಏನಾದರೂ ಒಳ್ಳೆಯದು ಆದ್ರೆ ಅದು ಸಿದ್ದರಾಮಯ್ಯನವರ ಸಹಾಯ ಮತ್ತು ಕೋರ್ಟಿನ ಮೂಲಕ ಅಂತ ಸೌಜನ್ಯ ಪರ ಹೋರಾಟಗಾರರು ಬಲವಾಗಿ ನಂಬಿದ್ದಾರೆ. ಜತೆಗೆ ಸ್ಥಳೀಯ ಕಾಂಗ್ರೆಸ್ ನಾಯಕ ಮಾಜಿ ಶಾಸಕ ವಸಂತ ಬಂಗೇರರು ಸೌಜನ್ಯ ಪರ ಹೋರಾಟಗಾರರ ಬೆನ್ನಿಗೆ ನಿಂತಿದ್ದಾರೆ. ಆ ಮೂಲಕ ನಿಜವಾಗಿಯೂ ಶೋಷಿತರ ಬೆನ್ನಿಗೆ ಕಾಂಗ್ರೆಸ್ ನಿಂತಿದೆ. ಕೇವಲ ಹಿಂದುತ್ವ ಮೋದಿ ಯೋಗಿ ಮುಂತಾದ ಫ್ಯಾಕ್ಟರ್ ಗಳನ್ನು ಎದುರಿಗೆ ಇಟ್ಟುಕೊಂಡು ಚುನಾವಣೆಗೆ ಹೋಗುವ ಬಿಜೆಪಿ ಆಗಲಿ, ಅದರ ಬೆನ್ನಿಗೆ ನಿಂತ ಸಂಘ ಪರಿವಾರದ ಯಾವುದೇ ಶಕ್ತಿಗಳೇ ಆಗಲಿ, ಮಠಮಾನ್ಯಗಳೇ ಆಗಲಿ, ಸೌಜನ್ಯ ಪರ ಮನಃಪೂರ್ವಕವಾಗಿ ಪ್ರತಿಭಟನೆ ಮಾಡಿಲ್ಲ. ದುಷ್ಟ ಶಕ್ತಿಗಳನ್ನು ಯಾವತ್ತೂ ಬಲವಾಗಿ ಖಂಡಿಸಿಲ್ಲ, ಈಗ ಅದೆಲ್ಲವೂ ಕರಾವಳಿಯ ಜನರ ಮನ ತೆರೆಸುವಂತೆ ಮಾಡಿದೆ. ಈ ಮೂಲಕ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಕಾಂಗ್ರೆಸ್ ತನ್ನ ಬಲ ವೃದ್ಧಿಸಿಕೊಳ್ಳುತ್ತಿದೆ. ಕರಾವಳಿಯಲ್ಲಿ ಮತ ಕೇಳುವ ಹಕ್ಕು ಕಾಂಗ್ರೆಸ್ಸಿಗೆ ಇದೆ.
ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯಾ ಪ್ರಕರಣವೇ ಬಹುದೊಡ್ಡ ನಿರ್ಣಾಯಕ ಪಾತ್ರ ವಹಿಸುವುದಂತೂ ಗ್ಯಾರಂಟಿ. ಲೋಕಸಭೆಯ ದಂಡೆಯಾತ್ರೆಯ ಪ್ಲಾನ್ ಹಾಕಿಕೊಂಡಿರುವ ಜನಪ್ರಿಯ ನಾಯಕ ಪುತ್ತಿಲರಿಗೂ ಲೋಕಸಭಾ ಚುನಾವಣೆ ಕಬ್ಬಿಣದ ಕಡಲೆ ಆಗುವುದು ಖಚಿತ.

ಈಗ ದಿನೇ ದಿನೇ ಜ್ವರದಂತೆ ಏರುತ್ತಿರುವ ಸೌಜನ್ಯ ಪ್ರತಿಭಟನೆಯ ಕಾವಿನ ಕಾರಣದಿಂದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರ ಜನಪ್ರಿಯತೆ ಹೆಚ್ಚಾಗುತ್ತಿದೆ. ಉಳಿದ ಎಲ್ಲಾ ಫ್ಯಾಕ್ಟರ್ ಗಳು ಬರುವ ಸಲ ಚುನಾವಣೆಯಲ್ಲಿ ಪ್ರಾಮುಖ್ಯತೆಯನ್ನು ಕಳೆದುಕೊಂಡು ಯಾರು ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೊಡಿಸಲು ಮುಂದೆ ಬರುತ್ತಾರೆಯೋ, ಅವರ ಕೈಗೆ ದಕ್ಷಿಣ ಕನ್ನಡದ ಲೋಕಸಭಾ ಗದ್ದುಗೆ ಸಿಗಲಿದೆ. ಮಹೇಶ್ ಶೆಟ್ಟಿ ತಿಮರೋಡಿಯವರ ಕಣ್ಣ ಕೊನೆಯ ಸನ್ನೆಗೆ ಕರಾವಳಿ ಸಂಸದ ಸ್ಥಾನ ಒಲಿದು ಬರಲಿದೆ. ಯಾರಿಗೆ ಗೊತ್ತು: ಅವರೇ ಕರಾವಳಿಯ ಹೆಮ್ಮೆಯ ಸಂಸದ ಆಗಿ ಬಿಟ್ಟರೂ ಅಚ್ಚರಿ ಇಲ್ಲ !!!

ಇದನ್ನೂ ಓದಿ: Crime News:ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮಾಲಿವುಡ್‌ ನಿರ್ದೇಶಕ ಅರೆಸ್ಟ್‌! ನಟಿಸಲು ಚಾನ್ಸ್‌ ಕೊಡುತ್ತೇನೆಂದು ದುರ್ಬಳಕೆ!

Comments are closed.