Kargil Vijay Diwas: ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ; ಜುಲೈ ಹಾಗೂ ಡಿಸೆಂಬರ್‌ನಲ್ಲಿ ಆಚರಿಸಲಾಗುವ ವಿಜಯ್ ದಿವಸ್ ನಡುವಿನ ವ್ಯತ್ಯಾಸವೇನು ಗೊತ್ತಾ ?

Latest news indian army news July 26 is Kargil Vijay Divas

Kargil Vijay Diwas: ಭಾರತೀಯ ಸೇನೆಯು ಜುಲೈ 26, 1999 ರಂದು ಪಾಕಿಸ್ತಾನವನ್ನು ಸೋಲಿಸಿತ್ತು. ಅಂದಿನಿಂದ, ಭಾರತೀಯ ಸಶಸ್ತ್ರ ಪಡೆಗಳ ಹೆಮ್ಮೆ ಮತ್ತು ಧೈರ್ಯವನ್ನು ಸ್ಮರಿಸುವುದಕ್ಕಾಗಿ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ಎಂದು ಆಚರಿಸಲಾಗುತ್ತದೆ. 1999 ಜುಲೈ 26 ರಂದು ದೇಶದ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ದಿನ, ದೇಶದ ಸೈನಿಕ ಸಾಹಸಕ್ಕೆ ಮತ್ತು ಶ್ರಮಕ್ಕೆ ಸಿಕ್ಕ ಮಹತ್ವ ವಿಜಯ ದಿನ.

ಭಾರತವೂ ಪಾಕಿಸ್ತಾನದ ಕುತಂತ್ರ ತಂತ್ರವನ್ನು ಸದೆಬಡಿದು , ಮತ್ತೆ ಭಾರತದ ಭಾಗವನ್ನು ಪಡೆದ ದಿನ ಇದಾಗಿದ್ದು, ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್​​ ವಿಜಯ್​​ ದಿವಸ್​​ ಎಂದು ದೇಶದ್ಯಾಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅಂದಹಾಗೆ ಜುಲೈನಲ್ಲಿ ಆಚರಿಸಲಾಗುವ ಕಾರ್ಗಿಲ್ ವಿಜಯ್ ದಿವಸ್ ಹಾಗೂ ಡಿಸೆಂಬರ್‌ನಲ್ಲಿ ಆಚರಿಸಲಾಗುವ ವಿಜಯ್ ದಿವಸ್ ನಡುವಿನ ವ್ಯತ್ಯಾಸವೇನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಕಾರ್ಗಿಲ್ ವಿಜಯ್ ದಿವಸ್:

ಕಾರ್ಗಿಲ್‌ ಯುದ್ಧವು 1999ರ ಮೇ ಮತ್ತು ಜುಲೈ ತಿಂಗಳ ನಡುವೆ ಭಾರತದ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ ಜಿಲ್ಲೆಯಲ್ಲಿ ನಡೆಯಿತು. ಪಾಕಿಸ್ತಾನದ ಸೈನಿಕರು ಮತ್ತು ಉಗ್ರರು ಕಾರ್ಗಿಲ್‌ ಜಿಲ್ಲೆಯ ಎಲ್‌ಒಸಿ ಮೂಲಕ ಒಳ ಪ್ರವೇಶಿಸಿದ್ದರು. ಇದು ಭಾರತದ ಸೇನೆಗೆ ಗೊತ್ತಾಗಿ ತಕ್ಷಣ ಪ್ರತಿದಾಳಿ ಆರಂಭಿಸಿತು. ಪಾಕಿಸ್ತಾನದ ಈ ಯುದ್ಧ ಭಾರತಕ್ಕೆ ನಿರೀಕ್ಷಿತವಾಗಿರಲಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ಈ ಯುದ್ಧದಿಂದ ಎರಡೂ ಕಡೆಗಳಲ್ಲಿ ಅಪಾರ ಹಾನಿ ಉಂಟಾಗಿತ್ತು. ಸುಮಾರು 500 ಭಾರತೀಯ ಹಾಗೂ 700 ಪಾಕಿಸ್ತಾನಿ ಸೈನಿಕರು ಪ್ರಾಣ ಕಳೆದುಕೊಂಡಿದ್ದರು.

ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯು ಟೋಲೋಲಿಂಗ್, ಟೈಗರ್ ಹಿಲ್ ಮತ್ತು ಪಾಯಿಂಟ್ 4875 ರ ಆಯಕಟ್ಟಿನ ಶಿಖರಗಳನ್ನು ಪುನಃ ವಶಪಡಿಸಿಕೊಂಡಿತು. ಯುದ್ಧದಲ್ಲಿ ಹಲವು ಸೈನಿಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕೆಚ್ಚೆದೆಯಿಂದ ಹೋರಾಡಿದ್ದರು. ಕಾರ್ಗಿಲ್‌ ವಿಜಯ್‌ ದಿವಸದಂದು ಕೆಚ್ಚೆದೆಯ ಸೈನಿಕರು ಮತ್ತು ಅವರ ತ್ಯಾಗವನ್ನು ನೆನಪಿಸಿಕೊಳ್ಳಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ಈ ಹೋರಾಟ 60 ದಿನಗಳಿಗೂ ಹೆಚ್ಚು ಕಾಲ ನಡೆಯಿತು. ಪಾಕಿಸ್ತಾನಿ ದಾಳಿಕೋರರು ಜಮ್ಮು-ಕಾಶ್ಮಿರದಲ್ಲಿ ಗಡಿ ನಿಯಂತ್ರಣಾ ರೇಖೆಯನ್ನು ದಾಟಿ ನಮ್ಮ ಬೆಟ್ಟಗಳನ್ನು ವಶಪಡಿಸಿಕೊಂಡಿದ್ದರು. ಇವರ ವಿರುದ್ಧ ಭಾರತೀಯ ಸೈನಿಕರು ವೀರಾವೇಶದಿಂದ ಹೋರಾಡಿ ವಿಜಯಶಾಲಿಯಾದರು. ಈ ಮಿಲಿಟರಿ ಕಾರ್ಯಾಚರಣೆಗೆ “ಕಾರ್ಗಿಲ್ ಯುದ್ಧ” ಎಂದು ಕರೆಯುತ್ತಾರೆ. ಇಡೀ ಕಾರ್ಯಾಚರಣೆಗೆ ಆಪರೇಷನ್‌ ವಿಜಯ್‌ ಎಂದು ಹೆಸರಿಸಲಾಗಿದೆ.

ವಿಜಯ್ ದಿವಸ್:

1971 ರ ಯುದ್ಧದಲ್ಲಿ ಭಾರತ ಪಾಕಿಸ್ತಾನದ ಎದುರು ಗೆಲುವು ಸಾಧಿಸಿ, 50 ವರ್ಷಗಳು ಪೂರ್ಣಗೊಂಡವು. ಆ ಯುದ್ಧದಿಂದಾಗಿ ನೂತನ ದೇಶವಾಗಿ ಬಾಂಗ್ಲಾದೇಶ ಉದಯವಾಯಿತು. ಅಂದಿನಿಂದ ಈ ದಿನವನ್ನು ‘ವಿಜಯ ದಿವಸ್’ ಎಂದು ದೇಶಾದ್ಯಂತ ಆಚರಿಸಲಾಗುತ್ತದೆ. ವಿಜಯ ದಿವಸದಂದು ರಕ್ಷಣಾ ಪಡೆಗಳ ತ್ಯಾಗವನ್ನು ನೆನೆಯಲಾಗುತ್ತದೆ. 1971ರ ಯುದ್ಧ ಕೇವಲ ಬಾಂಗ್ಲಾದೇಶದ ಉದಯಕ್ಕೆ ಮಾತ್ರ ಕಾರಣವಾಗಿದ್ದಲ್ಲ. ಅದರೊಡನೆ ಪಾಕಿಸ್ತಾನಕ್ಕೆ ಸಹಿಸಲಾರದ ಹೊಡೆತವನ್ನೂ ನೀಡಿತ್ತು ಎನ್ನಲಾಗಿದೆ.

ಪಾಕಿಸ್ತಾನ ಅನಿರೀಕ್ಷಿತವಾಗಿ ಭಾರತದ ವಾಯುನೆಲೆಗಳ ಮೇಲೆ ಡಿಸೆಂಬರ್ 3, 1971ರಂದು ದಾಳಿ ನಡೆಸಿತು. ಅದಾದ ಒಂದು ದಿನದ ಬಳಿಕ ಭಾರತ ಬಾಂಗ್ಲಾದೇಶೀ ರಾಷ್ಟ್ರೀಯವಾದಿಗಳಿಗೆ ಬೆಂಬಲ ನೀಡಲು ನಿರ್ಧರಿಸಿತು. ಅದರಂತೆ ಆಪರೇಶನ್ ಟ್ರೈಡೆಂಟ್‌ಗೆ ಚಾಲನೆ ನೀಡಿ, ಆಗಿನ ಪಶ್ಚಿಮ ಪಾಕಿಸ್ತಾನದಲ್ಲಿದ್ದ ಕರಾಚಿ ಬಂದರಿನ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿತು. ಪೂರ್ವ ಪಾಕಿಸ್ತಾನದಲ್ಲಿ ಮುಕ್ತಿ ಬಾಹಿನಿಯ ಗೆರಿಲ್ಲಾ ಯೋಧರು ಭಾರತೀಯ ಸೇನೆಯೊಡನೆ ಕೈ ಜೋಡಿಸಿ, ಪಾಕಿಸ್ತಾನಿ ಸೇನೆಯನ್ನು ಸೋಲಿಸಿದರು.

1971 ರಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದವು. ಭಾರತೀಯ ವಾಯುಪಡೆಯು ವಿಶೇಷವಾಗಿ ಯುದ್ಧದಲ್ಲಿ ಯಶಸ್ವಿಯಾಗಿತ್ತು ಮತ್ತು ಬಾಂಗ್ಲಾದೇಶದ ವಿಮೋಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಕಾರ್ಗಿಲ್ ವಿಜಯ್ ದಿವಸ್ ಮತ್ತು ವಿಜಯ್ ದಿವಸ್ ಎರಡೂ ಭಾರತೀಯ ಕ್ಯಾಲೆಂಡರ್‌ನಲ್ಲಿ ಪ್ರಮುಖ ದಿನಾಂಕಗಳಾಗಿವೆ. ಭಾರತೀಯ ಸಶಸ್ತ್ರ ಪಡೆಗಳ ವಿಜಯಗಳನ್ನು ಆಚರಿಸಲು ಮತ್ತು ಯುದ್ಧದಲ್ಲಿ ಹೋರಾಡಿ ಮಡಿದ ಸೈನಿಕರನ್ನು ಗೌರವಿಸುವ ದಿನವಾಗಿದೆ.

 

ಇದನ್ನು ಓದಿ: Lucky plant in Shravana Masa: ಶ್ರಾವಣ ಮಾಸದಲ್ಲಿ ಈ ಐದು ಗಿಡಗಳನ್ನು ನೆಟ್ಟರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ

Leave A Reply

Your email address will not be published.