Udupi: ವಿದ್ಯೆಯಲ್ಲಿ ಗೆದ್ದು, ಜೀವನದಲ್ಲಿ ಸೋತ ಯುವತಿ; ತಕ್ಷಣ ಉದ್ಯೋಗ ಸಿಗಲಿಲ್ಲ ಎಂದು ವರ್ಷದೊಳಗೆ ಯುವತಿ ಆತ್ಮಹತ್ಯೆ
young woman committed suicide because she could not get a job Udupi
Udupi: ಸಮಾಜದಲ್ಲಿ ಬೇಕಾದಷ್ಟು ಕೆಲಸಗಳಿವೆ. ಸಣ್ಣ ಹುದ್ದೆ ಕೂಡ ಕೆಲಸವೇ. ಅದರಿಂದಲೂ ವೇತನ ಬರುತ್ತದೆ. ನೀವು ಸೋಷಿಯಲ್ ಮೀಡಿಯಾದಲ್ಲಿ ವಿವಿಧ ಇಲಾಖೆಗಳ ಹುದ್ದೆಗೆ ಅರ್ಜಿ (job application) ಆಹ್ವಾನಿಸುವುದನ್ನು ನೋಡಿರಬಹುದು. ಇದಿಷ್ಟೆ ಅಲ್ಲ, ಹುದ್ದೆಗೆ ಅರ್ಜಿ ಸಲ್ಲಿಸಲೆಂದೇ ಹಲವು ಆಪ್’ಗಳಿವೆ. ಹೀಗೇ ಉದ್ಯೋಗಕ್ಕೆ ಕೊರತೆಯಿಲ್ಲ. ಆದರೆ, ಇಲ್ಲೊಬ್ಬಳು ಯುವತಿ ಉದ್ಯೋಗ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೌದು, ಉಡುಪಿಯಲ್ಲಿ (Udupi) ಇಂತಹ ಆಘಾತಕಾರಿ ಘಟನೆ ನಡೆದಿದೆ. ಗೌತಮಿ (gowthami) ಎಂಬ ಯುವತಿ ಉದ್ಯೋಗ ಸಿಗಲಿಲ್ಲವೆಂದು ತನ್ನ ಪ್ರಾಣ ತ್ಯಜಿಸಿದ್ದಾಳೆ. ಸುಮಾರು 20 ವರ್ಷಗಳ ಕಾಲ ಕಷ್ಟ-ಇಷ್ಟ ಪಟ್ಟು ಓದಿ ಕೇವಲ ಕೆಲದಿನ ಉದೋಗದ ಹುಡುಕಾಟದಲ್ಲಿ ಉದ್ಯೋಗ ಸಿಗಲಿಲ್ಲ ಎಂದು ದುರಂತ ಅಂತ್ಯಕಂಡಿದ್ದಾಳೆ.
ಗೌತಮಿ ಇಲ್ಲಿನ ಬೈಂದೂರಿನ ಕಾಲ್ತೋಡು ಗ್ರಾಮದ ನಿವಾಸಿ ಎನ್ನಲಾಗಿದೆ. ಈಕೆ ಎಂಜಿಎಂ ಕಾಲೇಜಿನಲ್ಲಿ ಎಂಕಾಂ (M.com) ಸ್ನಾತಕೋತ್ತರ ಪದವಿ ಮುಗಿಸಿದ್ದು, ಬಳಿಕ ಕೆಲಸದ ಹುಡುಕಾಟದಲ್ಲಿದ್ದಳು. ಸಾಕಷ್ಟು ಹುದ್ದೆಗೆ ಅರ್ಜಿ ಸಲ್ಲಿಸಿದ್ದಳು. ಬ್ಯಾಕಿಂಗ್ (bank job) ಪರೀಕ್ಷೆಯನ್ನೂ ಬರೆದಿದ್ದಳು.
ಆದರೆ, ಉದ್ಯೋಗ ಸಿಗಲಿಲ್ಲವೆಂದು ಖಿನ್ನತೆಗೆ ಒಳಗಾದ ಯುವತಿ ಡೆತ್ ನೋಟ್ ಬರೆದಿಟ್ಟು ಬದುಕು ಅಂತ್ಯಗೊಳಿಸಿದ್ದಾಳೆ.
ವಿದ್ಯಾಭ್ಯಾಸದಲ್ಲಿ ಮುಂದಿದ್ದ ಗೌತಮಿ ಎಂಕಾಂನಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾಳೆ. ಆದರೆ ಜೀವನದಲ್ಲಿ ಸೋತಿದ್ದಾಳೆ.
ಎದುರಾದ ಸವಾಲುಗಳನ್ನು ಎದುರಿಸುವಲ್ಲಿ ವಿಫಲವಾಗಿದ್ದಾಳೆ.
ಬಾಳಿ ಬದುಕಬೇಕಾದವಳು ಅತಿಸಣ್ಣ ವಯಸ್ಸಿಗೆ, ಕುಟುಂಬಸ್ಥರು, ಗೆಳೆಯ-ಗೆಳತಿಯರನ್ನು ತೊರೆದು ಇಹಲೋಕ ತ್ಯಜಿಸಿದ್ದಾಳೆ.
ಇದೆಲ್ಲಾ ಗಮನಿಸಿದಾಗ ಮೂಡುವ ಪ್ರಶ್ನೆ ಏನೆಂದರೆ, ಬಹುಶಃ ಆಕೆಗೆ ಹೆತ್ತವರ ನೆನಪು ಬರಲಿಲ್ಲವೇನೋ!!. ಹೆತ್ತಿರುವ ತಾಯಿ, ಸಣ್ಣ ಗಾಯವಾಗದಂತೆ ಜೋಪಾನ ಮಾಡಿದ ತಂದೆ ಇವರಾರೂ ಇಂತಹ ನಿರ್ಧಾರ ಕೈಗೊಳ್ಳುವಾಗ ನೆನಪಿಗೆ ಬರಲಿಲ್ಲವೇನೋ ಎಂದೆನಿಸುತ್ತದೆ. ಅಲ್ಲದೆ, ಒಂದನೇ ತರಗತಿಯಿಂದ ಎಂಕಾಂ ವರೆಗೂ ಕಷ್ಟನೋ ಇಷ್ಟನೋ ಪಟ್ಟು ಓದಿರುವ ವಿದ್ಯೆಯೂ ವ್ಯರ್ಥವಾಯಿತು. ಅಷ್ಟು ವರ್ಷ ಹಲವು ಸವಾಲುಗಳನ್ನು ಎದುರಿಸಿ ಓದಿ, ಜೀವನದಲ್ಲಿ ನೆಲೆ ಸಿಗುವ ಹೊತ್ತಿಗೆ ದುರಂತವಾಯಿತು. ಕೇವಲ ಕೆಲವು ತಿಂಗಳು ಅಥವಾ ವರ್ಷದ ಉದ್ಯೋಗದ ಹುಡುಕಾಟದಲ್ಲಿ ಕೆಲಸ ಸಿಗಲಿಲ್ಲ ಎಂದು ಸಾವಿನ ಕದ ತಟ್ಟಿರುವುದು ವಿಪರ್ಯಾಸವೇ ಸರಿ. ಪ್ರಶ್ನೆ ಏನೆಂದರೆ, ಬೇರೆ ಪರ್ಯಾಯ ಮಾರ್ಗ ಇರಲಿಲ್ಲವೇ? ಉದ್ಯೋಗವಿಲ್ಲದಿದ್ದರೆ ಜೀವನ ಕೊನೆ ಎಂದೇ ಸರಿಯಾ? ಹಾಗಾದರೆ ಉದ್ಯೋಗ ಇಲ್ಲದವರು ಬದುಕುತ್ತಿಲ್ಲವೇ? ಎಲ್ಲವನ್ನೂ ಮೆಟ್ಟಿನಿಂತು ಧೈರ್ಯದಿ ಜೀವನ ನಡೆಸುವ ಅಂಗವಿಕಲರು ಎಷ್ಟು ಜನರಿಲ್ಲ?
ಒಟ್ಟಾರೆ ಯುವತಿಯ ಈ ನಿರ್ಧಾರಕ್ಕೆ ಹಾಕಿ ಸಲಹಿದ ಹೆತ್ತವರು
ದುಃಖದ ಸಾಗರದಲ್ಲಿ ಮುಳುಗಿದ್ದಾರೆ. ಸದ್ಯ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಬರೆದಿರುವ ಡೆತ್‌ನೋಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.