Puttur Assembly Election: ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಸೋಲು : ಬಿಜೆಪಿಯಿಂದ ಆತ್ಮವಲೋಕನ ಗುಪ್ತ ಸಭೆ, ಕಾರ್ಯಕರ್ತರಿಂದ ಆಕ್ರೋಶ

Defeat in Puttur assembly election

Puttur assembly election: ಪುತ್ತೂರು:ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Puttur assembly election) ಬಿಜೆಪಿ ಸೋಲನ್ನು ಕಂಡಿರುವ ಹಿನ್ನೆಲೆಯಲ್ಲಿ ಪುತ್ತೂರು ಬಿಜೆಪಿ ಮಂಡಲದ ನೇತೃತ್ವದಲ್ಲಿ ಪಕ್ಷದ ಶಕ್ತಿಕೇಂದ್ರ ಮತ್ತು ಬೂತ್ ಅಧ್ಯಕ್ಷರುಗಳು, ಪ್ರಮುಖರು, ಕಾರ್ಯಕರ್ತರೊಂದಿಗೆ ಆತ್ಮಾವಲೋಕನಾ ಗುಪ್ತ ಸಭೆಯು ಮೇ 16ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್‌ ಸಭಾಂಗಣದಲ್ಲಿ ನಡೆಯಿತು.

ಅಭ್ಯರ್ಥಿ ಆಯ್ಕೆ ವಿಚಾರ ಸೇರಿದಂತೆ ಕೆಲವೊಂದು ವಿಚಾರಗಳನ್ನು ಸಭೆಯಲ್ಲಿದ್ದವರು ಪ್ರಸ್ತಾಪಿಸಿ ಪಕ್ಷದ ನಾಯಕರ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ವಿಧಾನ ಪರಿಷತ್‌ ಶಾಸಕ ಪ್ರತಾಪ್‌ ಸಿಂಹ ನಾಯಕ್‌ ಅವರು ಅಹ್ವಾವಲೋಕನಾ ಸಭೆಯ ನೇತೃತ್ವ ವಹಿಸಿದ್ದರು.ಪಕ್ಷದಿಂದ ಎಲ್ಲಿ ತಪ್ಪಾಗಿದೆ ಮತ್ತು ಅದರ ತಂತ್ರ ಹೇಗೆ ವಿಫಲವಾಗಿದೆ ಎಂಬುದನ್ನು ವಿಶ್ಲೇಷಿಸಲು ಸಭೆಯಲ್ಲಿದ್ದ ಪ್ರಮುಖರಿಂದ ಅಭಿಪ್ರಾಯ ಪಡೆದುಕೊಂಡ ಅವರು ಮುಂದಿನ ಚುನಾವಣೆಗೆ ತಯಾರಿ ನಡೆಸುವ ಕುರಿತು ಮಾರ್ಗದರ್ಶನ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ, ವಿವಿಧ ಜವಾಬ್ದಾರಿ ಹೊಂದಿರುವ ಪ್ರಸಾದ್ ಕುಮಾರ್ ಬೆಳ್ತಂಗಡಿ, ರಾಮದಾಸ್ ಬಂಟ್ವಾಳ್‌, ಕಸ್ತೂರಿ ಪಂಜ ಮತ್ತಿತರರು ಮಾತನಾಡಿ ಕಾರ್ಯಕರ್ತರಿಗೆ ಕೆಲವೊಂದು ಮಾರ್ಗದರ್ಶನ ಮಾಡಿ ಇನ್ನೇನು ಅತ್ಯಾವಲೋಕನ ಸಭೆ ಮುಗಿಯುವಷ್ಟರಲ್ಲಿ ಸಭೆಯಲ್ಲಿದ್ದವರು ಮಧ್ಯಪ್ರವೇಶಿಸಿ ಮಾತನಾಡಿದರು.

ಕೇವಲ ನೀವಷ್ಟೆ ಮಾತನಾಡಿ ಹೋಗೋದಾದ್ರೆ ನಮ್ಮನ್ನು ಕರೆದಿರುವುದಾದರೂ ಯಾಕೆ? ಎಂದು ಪ್ರಶ್ನಿಸಿದ ಕೆಲವರು, ಈ ಬಾರಿ ಪುತ್ತೂರು ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆಯಿಂದ ಹಿಡಿದು ನಂತರದ ವಿವಿಧ ಹಂತಗಳಲ್ಲಿ ನಾವು ಇಲ್ಲಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ.ಇಲ್ಲಿ ಪಕ್ಷ ಸಂಘಟಿಸಲು ನಾವು, ನಿಷ್ಟುರ ಆಗುವುದು ನಾವು, ಮುಜುಗರ ಅನುಭವಿಸಬೇಕಾದವರೂ ನಾವೇ ಆಗಿದ್ದೇವೆ.ಇದನ್ನೆಲ್ಲ ಸರಿಪಡಿಸೋದು ಬಿಟ್ಟು ಕಾಟಾಚಾರದ ಸಭೆ ಏಕೆ ಎಂದು ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿದ ಪ್ರಮುಖರು ಇದನ್ನೆಲ್ಲಾ ಮುಂದಿನ ದಿನಗಳಲ್ಲಿ ಸರಿಪಡಿಸೋಣ, ಶೀಘ್ರವೇ ಪುತ್ತೂರಲ್ಲಿ ದೊಡ್ಡ ಮಟ್ಟದ ಕೃತಜ್ಞತಾ ಸಭೆ,ಕಾರ್ಯಕರ್ತರ ಸಮಾವೇಶ ನಡೆಸಿ ಎಲ್ಲ ಗೊಂದಲಗಳನ್ನೂ ಸರಿಪಡಿಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿ ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಕೈಗೊಳ್ಳುವುದಾಗಿ ಮುಖಂಡರು ಭರವಸೆ ನೀಡಿ ಸಭೆ ಮುಕ್ತಾಯಗೊಂಡಿತು ಎಂದು ಹೇಳಲಾಗಿದೆ.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗವಾಸ್ ರಾವ್, ಜಿಲ್ಲಾ ಉಪಾಧ್ಯಕ್ಷ ಬೂಡಿಯಾ‌ ರಾಧಾಕೃಷ್ಣರೈ, ಪುತ್ತೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದ ಆಶಾ
ತಿಮ್ಮಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಿಂಗಳೊಳಗೆ ಕಾರ್ಯಕರ್ತರ ಸಮಾವೇಶ ಪಕ್ಷ ಸಂಘಟನೆಗಾಗಿ ತಿಂಗಳೊಳಗೆ ಕಾರ್ಯಕರ್ತರ ಸಮಾವೇಶ, ಕೃತಜ್ಞತಾ ಸಭೆ ನಡೆಸುವ ಕುರಿತು ಸಭೆಯಲ್ಲಿ ಪ್ರಸ್ತಾಪವಾಗಿದ್ದು ಮುಂದಿನ ಎರಡು ಮೂರು ದಿನಗಳಲ್ಲಿ ಸಮಾವೇಶದ ದಿನಾಂಕ ನಿಗದಿ ಪಡಿಸುವ ಕುರಿತು ಪ್ರಮುಖರು ಸಭೆಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.