Afzal Ansari: ರಾಹುಲ್ ಗಾಂಧಿ ಬೆನ್ನಲ್ಲೇ ಲೋಕಸಭೆಯಿಂದ ಮತ್ತೊಬ್ಬ ಸಂಸದ ಅನರ್ಹ! ಯಾರದು..? ಕಾರಣವೇನು..?
Afzal Ansari disqualified : ಪ್ರಧಾನಿ ಮೋದಿ(PM Modi) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರಿಗೆ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕಾರಣ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಲಾಗಿತ್ತು. ಈ ಬೆನ್ನಲೇ ಇದೀಗ ಮತ್ತೊಬ್ಬ ಸಂಸದರು ಲೋಕಸಭೆಯಿಂದ(Parliment) ಅನರ್ಹಗೊಂಡಿದ್ದು, ತಮ್ಮ ಸಂಸದ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಹೌದು, ಬಿಎಸ್‌ಪಿ(BSP) ನಾಯಕ ಅಫ್ಜಲ್ ಅನ್ಸಾರಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ (Afzal Ansari disqualified). ಬಿಜೆಪಿ ನಾಯಕ, ಹಿಂದೂ ಮುಖಂಡರ ಅಪಹರಣ ಹಾಗೂ ಹತ್ಯೆ ಪ್ರಕರಣದಲ್ಲಿ ಬಹುಜನ ಸಮಾಜವಾದಿ ಪಾರ್ಟಿ ಸಂಸದ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಅಫ್ಜಲ್ ಅನ್ಸಾರಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
ಉತ್ತರ ಪ್ರದೇಶದ(Uttar Pradesh) ಬಿಜೆಪಿ ಶಾಸಕ ಕೃಷ್ಣಾನಂದ ರಾಯ್(Krishnananda raay) ಹತ್ಯೆ ಮತ್ತು ವಿಎಚ್‌ಪಿ ನಾಯಕ ನಂದಕಿಶೋರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್, ಮಾಜಿ ಶಾಸಕ ಮುಖ್ತಾರ್ ಅನ್ಸಾರಿ(Mukthar Ansari) ಹಾಗೂ ಆತನ ಸೋದರ ಅಫ್ಜಲ್ ಅನ್ಸಾರಿಗೆ ಸ್ಥಳೀಯ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತ್ತು. ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಸಂಸದ ಅಫ್ಜಲ್ ಅನ್ಸಾರಿಗೆ 4 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಶನಿವಾರ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಜೊತೆಗೆ ಇಬ್ಬರಿಗೂ ಕ್ರಮವಾಗಿ 5 ಲಕ್ಷ ಮತ್ತು 1 ಲಕ್ಷ ರು. ದಂಡ ವಿಧಿಸಿದೆ.
ಮುಖ್ತಾರ್ ಅನ್ಸಾರಿ ಹಾಗೂ ಆತನ ಸೋದರ ಅಫ್ಜಲ್ ಅನ್ಸಾರಿ ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಅತೀ ಹಿಂದೂ ಮುಖಂಡರು, ರಾಜಕೀಯ ನಾಯಕರ ಅಪಹರಣ ಮಾಡಿ ಹತ್ಯೆ ಮಾಡಿದ ಹಲವು ಪ್ರಕರಣ ಇವರಿಬ್ಬರ ಮೇಲಿದೆ. 5 ಬಾರಿ ಶಾಸಕರಾಗಿದ್ದ ಮುಖ್ತಾರ್ 1995ರಲ್ಲಿ ನಂದಕಿಶೋರ್ ಅಪಹರಣ ಮಾಡಿದ್ದ, 2005ರಲ್ಲಿ ಕೃಷ್ಣಾನಂದ ರಾಯ್ ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಘಾಜೀಪುರ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಇದರಿಂದ ಘಾಜಿಪುರ ಕ್ಷೇತ್ರದ ಸಂಸದ ಅಫ್ಜಲ್ ಅನ್ಸಾರಿ ತಮ್ಮ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
2005 ರಲ್ಲಿ ಘಾಜಿಪುರದಲ್ಲಿ ಮುಖ್ತಾರ್ ಅನ್ಸಾರಿ ಮತ್ತು ಅವರ ಸಹೋದರ ಅಫ್ಜಲ್ ಅನ್ಸಾರಿಯಿಂದ ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆಗೀಡಾಗಿದ್ದರು. ಕೋರ್ಟಿನ ತೀರ್ಪು ಬಂದ ಬಳಿಕ, ದಿವಂಗತ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಪತ್ನಿ ಅಲ್ಕಾ ರೈ, ಉತ್ತರ ಪ್ರದೇಶದಲ್ಲಿ ಗೂಂಡಾಗಳು, ಮಾಫಿಯಾದ ಆಡಳಿತ ಕೊನೆಗೊಂಡಿದೆ ಮತ್ತು ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಅಂದಹಾಗೆ ಕ್ರಿಮಿನಲ್ ಪ್ರಕರಣಗಳಲ್ಲಿ ಯಾವುದೇ ಜನಪ್ರತಿನಿಧಿ 2 ವರ್ಷಕ್ಕಿಂತ ಶಿಕ್ಷೆಗೆ ಗುರಿಯಾದರೆ ತಕ್ಷಣವೇ ತಮ್ಮ ಸ್ಥಾನ ಕಳೆದುಕೊಳ್ಳುತ್ತಾರೆ. ಇದರಂತೆ ಅಫ್ಜಲ್ ಅನ್ಸಾರಿ ಎಪ್ರಿಲ್ 29 ರಿಂದ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ ಎಂದು ಲೋಕಸಭಾ ಕಾರ್ಯಾಲಯ ಪ್ರಕಟಣೆ ಹೊರಡಿಸಿದೆ. 1951ರ ಜನಪ್ರತಿನಿಧಿ ಕಾಯ್ದೆ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ರ ಮಾನನಷ್ಟ ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ಕೊಡಲಾಗಿತ್ತು. ಈ ತೀರ್ಪಿನಲ್ಲಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿ ಮಾಡಲಾಯಿತು. ನಂತರ ಸಂಸತ್ತಿನ ನಿಯಮಗಳ ಪ್ರಕಾರ ಇತ್ತೀಚೆಗೆ ತಮ್ಮ ಸಂಸದ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ.