Congress 5th list released : ಕಾಂಗ್ರೆಸ್‌ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ! ಅಖಂಡಗೆ ‘ಕೈ’ ಎತ್ತಿ, ಸಿಎಂ ವಿರುದ್ಧ ಅಭ್ಯರ್ಥಿ ಬದಲಿಸಿದ KPCC

Congress 5th list released : 2023ರ ವಿಧಾನಸಭೆ ಚುನಾವಣೆಗೆ ದಿನ ಗಣನೆ ಶುರುವಾದರೂ ಇನ್ನೂ ಕೂಡ ಪಕ್ಷಗಳು ಹಂತ ಹಂತವಾಗಿ ಅಭ್ಯರ್ಥಿಗಳ ಘೋಷಣೆಯನ್ನು ಮಾಡುತ್ತಲೇ ಇವೆ. ಇದೀಗ ಕಾಂಗ್ರೆಸ್​ ಪಕ್ಷ (Congress Candidate List)ಬುಧವಾರ 5ನೇ ಪಟ್ಟಿ ಬಿಡುಗಡೆ ಮಾಡಿದ್ದು (Congress 5th list released), ಇದರಲ್ಲಿ ಪುಲಕೇಶನಗರ (Pulakeshinagar) ಸೇರಿದಂತೆ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

ಹೌದು, ಮಂಗಳವಾರ 4ನೇ ಪಟ್ಟಿಯಲ್ಲಿ 7 ಮಂದಿಗೆ ಟಿಕೆಟ್ ಘೋಷಣೆ ಮಾಡಿ 8 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿತ್ತು. ಇದೀಗ ಮತ್ತೆ 3 ಕ್ಷೇತ್ರಗಳನ್ನು ಘೋಷಣೆ ಮಾಡಿದ್ದು, ಐದು ಕ್ಷೇತ್ರಗಳ ಅಭ್ಯರ್ಥಿಗಳ ಲಿಸ್ಟ್​ ಬಾಕಿ ಉಳಿಸಿಕೊಂಡಿದೆ. ಪುಲಕೇಶಿನಗರ, ಕೆಆರ್ ಪುರಂ, ಮುಳಬಾಗಿಲು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ, ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯನ್ನ ಬದಲಾವಣೆ ಮಾಡಿದೆ.

ವಿಚಿತ್ರ ಅಂದರೆ ನಾಮಪತ್ರ ಸಲ್ಲಿಕೆಗೆ ಇನ್ನೊಂದು ದಿನ ಬಾಕಿ ಇರುವಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ತವರು ಕ್ಷೇತ್ರದಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನ ಬದಲಾವಣೆ ಮಾಡಿದೆ. ಶಿಗ್ಗಾಂವಿ(Shiggavi) ಕ್ಷೇತ್ರದಿಂದ ಮೊಹಮ್ಮದ್‌ ಯೂಸುಫ್ ಸವಣೂರು ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿತ್ತು, ಆದ್ರೆ ಬುಧವಾರ ಬಿಡುಗಡೆಯಾದ 5ನೇ ಪಟ್ಟಿಯಲ್ಲಿ ಶಿಗ್ಗಾಂವಿಗೆ ಯಾಸೀರ್ ಅಹ್ಮದ್ ಖಾನ್ ಪಠಾನ್ ಅವರನ್ನ ಅಭ್ಯರ್ಥಿಯಾಗಿ ಘೋಷಿಸಿದೆ.

ಇನ್ನು ಇದರೊಂದಿಗೆ ಪುಲಕೇಶಿನಗರಕ್ಕೆ ಎ.ಸಿ ಶ್ರೀನಿವಾಸ್, ಕೆ.ಆರ್ ಪುರಕ್ಕೆ ಡಿ.ಕೆ ಮೋಹನ್ ಹಾಗೂ ಮುಳಬಾಗಿಲು ಕ್ಷೇತ್ರಕ್ಕೆ ಮುದ್ದುಗಂಗಾಧರ್ ಅವರನ್ನ ಅಭ್ಯರ್ಥಿಗಳಾಗಿ ಘೋಷಿಸಿದೆ. ಶಿಡ್ಲಘಟ್ಟ, ಮಂಗಳೂರು ಉತ್ತರ, ರಾಯಚೂರು, ಅರಕಲಗೂಡು, ಸಿವಿ ರಾಮನ್ ನಗರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡದೇ ಬಾಕಿ ಉಳಿಸಿಕೊಂಡಿದೆ.

ಅಂದಹಾಗೆ ಎಂಟು ಕ್ಷೇತ್ರಗಳ ಪೈಕಿ ಕೇವಲ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಇನ್ನೂ
ಐದು ಕ್ಷೇತ್ರಗಳಿಗೆ (ಶಿಡ್ಲಘಟ್ಟ, ಸರ್​ ಸಿವಿ ರಾಮನ್ ನಗರ, ರಾಯಚೂರು ನಗರ, ಅರಕಲಗೂಡು ಹಾಗೂ ಮಂಗಳೂರು ಉತ್ತರ) ಟಿಕೆಟ್ ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಕೆ ಮಾಡಲು ಗುರುವಾರವೇ ಕೊನೆಯ ದಿನವಾಗಿದೆ. ಹೀಗಿದ್ದರೂ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿಲ್ಲದಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಇನ್ನು ಬಾಕಿ ಉಳಿದಿರುವ 5 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾಗಿದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕೂಡ ಇಬ್ಬರು ಲೀಡರ್​ಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಮೊಹಿದ್ದೀನ್ ಬಾವ v/s ಇನಾಯತ್ ಅಲಿ ಇಬ್ಬರಲ್ಲಿ ಸ್ಪರ್ಧೆ ಇರುವುದರಿಂದ ಈ ಕ್ಷೇತ್ರ ಟಿಕೆಟ್​ಅನ್ನು ಕಾಯ್ದಿರಿಸಲಾಗಿದೆ. ಶಿಡ್ಲಘಟ್ಟದಲ್ಲಿ ಸೂಕ್ತ ಅಭ್ಯರ್ಥಿಯೇ ಇಲ್ಲ ಎನ್ನಲಾಗುತ್ತಿದೆ. ಶಿಡ್ಲಘಟ್ಟದ ಹಾಲಿ ಶಾಸಕ ವಿ.ಮುನಿಯಪ್ಪ ವಯಸ್ಸಿನ ಕಾರಣಕ್ಕೆ ತಾವು ಸಕ್ರಿಯ ರಾಜಕಾರಣದಿಂದ ದೂರು ಉಳಿದಿರುವುದರಿಂದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್​ ಕಗ್ಗಂಟಾಗಿ ಉಳಿದಿದೆ.

ಇನ್ನು ಅರಕಲಗೂಡಿನಲ್ಲಿ ಎಂ.ಟಿ.ಕೃಷ್ಣೇಗೌಡ ಮತ್ತು ಶ್ರೀಧರ ಗೌಡ ನಡುವೆ ಭಾರೀ ಪೈಪೋಟಿ ಇದೆ. ಎಂ.ಟಿ.ಕೃಷ್ಣೇಗೌಡ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೂಲಕ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದು, ಟಿಕೆಟ್‌ ಖಚಿತ ಎಂದು ನಂಬಿಕೊಂಡು ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದರೆ, ಶ್ರೀಧರಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿದ್ದು, ಚುನಾವಣೆಗೆ ಸಿದ್ಧತೆ ಮಾಡಿ ಕೊಂಡಿದ್ದಾರೆ. ಹಾಗಾಗಿ ಟಿಕೆಟ್​ ಘೋಷಣೆ ಕಾಂಗ್ರೆಸ್​ ಕಗ್ಗಂಟಾಗಿದೆ.

ಕಾಂಗ್ರೆಸ್‌ ಈ ಬಾರಿಯ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಿತು. ಐದು ಪಟ್ಟಿಗಳು ಬಿಡುಗಡೆಯಾಗಿದ್ದು, ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಮಂಡ್ಯದ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಏ.20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಗುರುವಾರ ಬೆಳಿಗ್ಗೆಯೊಳಗೆ ಬಾಕಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಅಖಂಡ ಶ್ರೀನಿವಾಸ್‌ಮೂರ್ತಿಗೆ ತಪ್ಪಿದ ಟಿಕೆಟ್‌
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (2018) ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಪುಲಕೇಶಿನಗರದ ಅಖಂಡ ಶ್ರೀನಿವಾಸ ಮೂರ್ತಿಯವರು ಕೊನೆಯ ಅಂತದವರೆಗೂ ಕಾಂಗ್ರೆಸ್‌ ಟಿಕೆಟ್‌ಗಾಗಿ ಕಾದಿದ್ದರು. ಕೊನೆಗೂ ಈ ಬಾರಿ ಟಿಕೆಟ್‌ ಸಿಕ್ಕಿಲ್ಲ. ದೊಡ್ಡ ನಾಯಕರೊಬ್ಬರು ಟಿಕೆಟ್ ತಪ್ಪಿಸಿದ್ದಾರೆ. ಈ ಬೆಳವಣಿಗೆಯಿಂದ ನನಗೆ ತುಂಬಾ ನೋವಾಗಿದೆ ಎಂದು ಅಖಂಡ ಶ್ರೀನಿವಾಸಮೂರ್ತಿ ಅವರು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ‘ಹಾಲಿ ಶಾಸಕನಾಗಿದ್ದರೂ ನನಗೆ ಟಿಕೆಟ್ ಕೊಟ್ಟಿಲ್ಲ. ನಾನು ಎಲ್ಲ ಸಮುದಾಯದವರ ಜೊತೆ ಚೆನ್ನಾಗಿದ್ದೇನೆ. ಕ್ಷೇತ್ರದಲ್ಲಿ ಹಿಂದೂ- ಮುಸ್ಲಿಂ ಅಣ್ಣ ತಮ್ಮಂದಿರಂತೆ ಇದ್ದಾರೆ’ ಎಂದರು.

Leave A Reply

Your email address will not be published.