Mango EMI: ಮಾವಿನ ಹಣ್ಣಿಗೂ ಬಂತು EMI ! ಈಗ ಹಣ್ಣು ತಿನ್ನಿ, ಆಮೇಲೆ ದುಡ್ಡು ಕೊಡಿ!

Mango EMI : ಈಗ ಮಾವಿನಹಣ್ಣಿನ ಸೀಸನ್ (Mango Season)‌. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ವಿವಿಧ ಜಾತಿಯ ಮಾವಿನಹಣ್ಣಿನದ್ದೇ ಕಾರುಬಾರು. ತರಹೇವಾರಿ ಹಣ್ಣುಗಳಂತೂ ನೋಡುಗರ ಬಾಯಲ್ಲಿ ನೀರೂರಿಸುತ್ತವೆ. ಕೊಳ್ಳೋಣ ಎಂದು ಹೋದರೆ ಗನನಕ್ಕೇರಿರುವ ಅದರ ಬೆಲೆ ಹತ್ತಿರಹೋದಂತೆ ಕೈ ಸುಡುವಂತೆ ಮಾಡುತ್ತದೆ. ಆದರೆ ಇಲ್ಲೊಬ್ಬ ವ್ಯಾಪಾರಿ ಗ್ರಾಹಕರಿಗೂ ಅನುಕೂಲವಾಗುವಂತೆ, ತನಗೂ ಲಾಭವಾಗುವಂತೆ ಒಂದು ಹೊಸ ಯೋಜನೆಯನ್ನು ರೂಪಿಸಿ ಭಾರೀ ಫೇಮಸ್ ಆಗ್ತಿದ್ದಾರೆ .

ಹೌದು, ಪುಣೆಯ ಮಾವಿನ ಹಣ್ಣಿನ ವ್ಯಾಪಾರಿಯೊಬ್ಬರು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದ್ದಾರೆ. ಯಾಕೆಂದರೆ ಹೆಚ್ಚುತ್ತಿರುವ ಹಣದುಬ್ಬರದೊಂದಿಗೆ ಮಾವಿನ ಹಣ್ಣಿನ ಮಾರಾಟವನ್ನು ಹೆಚ್ಚು ಮಾಡಲು ಅವರು ಹೊಸ ಟ್ರಿಕ್‌ ಉಪಯೋಗಿಸಿದ್ದಾರೆ. ಅದೇ ಇಎಂಐನಲ್ಲಿ ಹಣ್ಣಿನ ಮಾರಾಟ ಮಾಡುವಂಥ ಯೋಜನೆ! ಹೌದು, ಅಲ್ಫೋನ್ಸೊ ಮಾವಿನ ಹಣ್ಣುಗಳನ್ನು ಮಾಸಿಕ ಕಂತುಗಳು ಅಥವಾ EMI  (Mango EMI)ಗಳಲ್ಲಿ ಮಾರಾಟ ಮಾಡಲು ಒಂದು ಪ್ರಯೋಗ ನಡೆಸಿದ್ದಾರೆ.

ಪುಣೆಯ ಸನ್ ಸಿಟಿ ರಸ್ತೆಯಲ್ಲಿರುವ ಆನಂದ್ ನಗರ್ ಪ್ರದೇಶದಲ್ಲಿ ಗುರುಕೃಪಾ ಟ್ರೇಡರ್ಸ್ ಎಂಬ ಅಂಗಡಿಯಲ್ಲಿ ಮಾವಿನ ಹಣ್ಣಿನ ವ್ಯಾಪಾರ ಮಾಡುವ ಗೌರವ್ ಸನಸ್ ಎಂಬುವವರು ಇಎಂಐ ಸೌಲಭ್ಯ ನೀಡಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಇಎಂಐ ಮೂಲಕ ಮಾವಿನ ಹಣ್ಣು ಮಾರುತ್ತಿರುವ ಮೊದಲ ಅಂಗಡಿ ತಮ್ಮದು ಎಂದು ಗೌರವ್ ಸನಸ್ ಹೇಳಿಕೊಳ್ಳುತ್ತಾರೆ. ಸದ್ಯ ಇವರ ಮಾವಿನ ಅಂಗಡಿಯಲ್ಲಿ ದೇವಗಡದ ಆಲ್ಫೋನ್ಸೋ ಮಾವಿನ ಹಣ್ಣಿಗೆ ಈ ಇಎಂಐ ಸೌಲಭ್ಯ ಕೊಡಲಾಗಿದೆ. ಸದ್ಯ ಈ ತಳಿಯ ಹಣ್ಣಿನ ಬೆಲೆ ಡಜನ್​ಗೆ 1200ರೂನಷ್ಟು ಬೆಲೆ ಇದೆ.

ಮಾದ್ಯಮದ ಜೊತೆಗೆ ಮಾತನಾಡಿದ ಗೌರವ್‌ ಸನಾಸ್‌, “ರೆಫ್ರಿಜರೇಟರ್‌ಗಳು ಮತ್ತು ಹವಾನಿಯಂತ್ರಣಗಳನ್ನು ಕಂತುಗಳಲ್ಲಿ ಖರೀದಿಸಬಹುದಾದರೆ, ಮಾವಿನಹಣ್ಣನ್ನು ಏಕೆ ಖರೀದಿಸಬಾರದು? ತಮ್ಮ ಕುಟುಂಬದ ಔಟ್‌ಲೆಟ್ ಇಡೀ ದೇಶದಲ್ಲಿ ಇಎಂಐ ಮೇಲೆ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೊದಲ ಸ್ಥಾನದಲ್ಲಿದೆ. ಋತುವಿನ ಆರಂಭದಲ್ಲಿ ಬೆಲೆಗಳು ಯಾವಾಗಲೂ ತುಂಬಾ ಹೆಚ್ಚಿರುತ್ತವೆ. ರೆಫ್ರಿಜರೇಟರ್‌ಗಳು, ಎಸಿಗಳು ಮತ್ತು ಇತರ ಉಪಕರಣಗಳನ್ನು ಇಎಂಐನಲ್ಲಿ ಖರೀದಿಸಬಹುದೇ ಎಂದು ನಾವು ಯೋಚಿಸಿದ್ದೇವೆ, ಏಕೆ ಮಾವಿನಹಣ್ಣುಗಳನ್ನು ಖರೀದಿಸಬಾರದು? ಆಗ ಎಲ್ಲರೂ ಮಾವಿನಹಣ್ಣುಗಳನ್ನು ಖರೀದಿಸಬಹುದು” ತಿಳಿಸಿದ್ದಾರೆ.

ಅಂದಹಾಗೆ ಮಾಲ್​ಗೆ ಹೋಗಿ ಕ್ರೆಡಿಟ್ ಕಾರ್ಡ್ ಬಳಸಿ ಮಾವಿನ ಹಣ್ಣು ಖರೀದಿಸಿದರೂ ಆ ಹಣವನ್ನು ಇಎಂಐ ಆಗಿ ಪರಿವರ್ತಿಸಬಹುದಲ್ವಾ ಎಂದು ಕೇಳಬಹುದು. ಆದರೆ, ಎಲ್ಲಾ ಕ್ರೆಡಿಟ್ ಕಾರ್ಡ್​ಗಳೂ ಇಎಂಐ ಆಯ್ಕೆ ಹೊಂದಿರುವುದಿಲ್ಲ. ಇಲ್ಲಿ ಪುಣೆಯ ಗೌರವ್ ಸನಸ್ ಅಂಗಡಿಯಲ್ಲಿರುವ ಇಎಂಐ ವ್ಯವಸ್ಥೆ ತುಸು ಭಿನ್ನವಾಗಿದೆ.

ಗೌರವ್ ಸನಸ್ ಅವರು ಪೇಟಿಎಂ ಕಂಪನಿ ಅಧಿಕಾರಿಗಳ ಜೊತೆ ಮಾತನಾಡಿ ಇಎಂಐ ಸೌಲಭ್ಯ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ. ಆಗ ಪೇಟಿಎಂನಿಂದ ಇಎಂಐ ವ್ಯವಸ್ಥೆ ಸಿಕ್ಕಿತಂತೆ. ಪೇಟಿಎಂನಿಂದಲೇ ಸ್ವೈಪ್ ಮೆಷೀನ್ ಅನ್ನು ಅವರು ಪಡೆದರು. ಇಎಂಐ ಸೌಲಭ್ಯ ಪಡೆಯಲು ಗ್ರಾಹಕರ ಬಳಿ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇರಬೇಕಾಗುತ್ತದೆ. ಪೇಟಿಎಂ ಮೆಷೀನ್​ನಲ್ಲಿ ಕಾರ್ಡ್ ಸ್ವೈಪ್ ಮಾಡಿದಾಗ ಕೂಡಲೇ ಎಷ್ಟು ತಿಂಗಳಿಗೆ ಇಎಂಐ ಬೇಕೆಂದು ಆಯ್ಕೆಗಳು ಕಾಣುತ್ತವೆ. 3-12 ಕಂತುಗಳ ಅವಕಾಶ ಇರುತ್ತದೆ. ಅದರಲ್ಲಿ ಒಂದನ್ನು ಗ್ರಾಹಕರೇ ಆಯ್ದುಕೊಳ್ಳಬಹುದು. ಬಜಾಜ್ ಫೈನಾನ್ಸ್ ಇತ್ಯಾದಿ ಕೆಲಸ ಸಂಸ್ಥೆಗಳು ಬಿಟ್ಟರೆ ಹಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್​ಗೆ ಇಎಂಐ ಅವಕಾಶ ಇದೆ. ಇನ್ನು ಡೆಬಿಟ್ ಕಾರ್ಡ್​ಗೂ ಇಎಂಐ ಇದೆಯಾದರೂ ಎಲ್ಲಾ ಬ್ಯಾಂಕ್ ಕಾರ್ಡ್​ಗಳೂ ತಾಳೆಯಾಗುತ್ತವಾ ಗೊತ್ತಿಲ್ಲ.

ಆದಾಗ್ಯೂ, ಈ ಯೋಜನೆಯು ಕನಿಷ್ಠ 5,000 ರೂ ಖರೀದಿಗೆ ಮಾತ್ರ ಲಭ್ಯವಿದೆ. ಇದುವರೆಗೆ ನಾಲ್ವರು ಗ್ರಾಹಕರು ಈ ಯೋಜನೆಯನ್ನು ಪಡೆದುಕೊಂಡಿದ್ದಾರೆ ಎಂದು ಗೌರವ್ ಸನಾಸ್ ಮಾಹಿತಿ ನೀಡಿದರು.

Leave A Reply

Your email address will not be published.