Hassan ticket war: ಹಾಸನದಲ್ಲಿ ಭವಾನಿ ಸ್ಪರ್ಧಿಸೋದು ಬೇಡವೆಂದ ದೊಡ್ಡಗೌಡರು, ಆಕ್ರೋಶಗೊಂಡು ಕೂಗಾಡಿ ಹೊರ ನಡೆದ ಭವಾನಿ

Hassan ticket war : ತೀವ್ರ ಕುತೂಹಲ ಕೆರಳಿಸಿದ್ದ ಹಾಸನ(Hassan) ಕ್ಷೇತ್ರದ ಜೆಡಿಎಸ್(JDS) ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ(HD Devegowda) ಕುಟುಂಬ ಸದಸ್ಯರ ನಡುವಿನ ಶೀತಲ ಸಮರ ರಾಜ್ಯದ ಗಮನ ಸೆಳೆದಿದ್ದು ಸದ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟು ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ನಿನ್ನೆ ನಡೆದ ಸಭೆಯಲ್ಲಿ ದೊಡ್ಡಗೌಡರು ತಮ್ಮ ಪುತ್ರ ಎಚ್.ಡಿ ರೇವಣ್ಣಗೆ(HD Revanna) ದೊಡ್ಡ ಶಾಕ್ ನೀಡಿದ್ದು, ಹಾಸನ ಕ್ಷೇತ್ರಕ್ಕೆ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಎಚ್.ಡಿ ಕುಮಾರಸ್ವಾಮಿ(H D Kumaraswamy) ಅವರ ನಿರ್ಧಾರವನ್ನು ಎತ್ತಿ ಹಿಡಿದಿದ್ದಾರೆ. ಗೌಡರ ಈ ನಿಲುವಿನಿಂದ ಆಕ್ರೋಶಗೊಂಡ ಭವಾನಿ(Bhavani) ಮತ್ತು ಎಚ್‌.ಡಿ.ರೇವಣ್ಣ ಮುನಿಸಿಕೊಂಡು ಸಭೆಯ ಅರ್ಧದಲ್ಲೇ ಪ್ರತ್ಯೇಕವಾಗಿ ನಿರ್ಗಮಿಸಿದ್ದಾರೆ.

ಹೌದು, ಕುಟುಂಬದವರಿಗೆ ಟಿಕೆಟ್‌ (Hassan ticket war )ಬೇಡ ಎಂಬ ಬಲವಾದ ನಿಲುವು ವ್ಯಕ್ತಪಡಿಸಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತಿಗೇ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಸನ ಕ್ಷೇತ್ರದ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಹೆಚ್.ಡಿ ರೇವಣ್ಣ ಮತ್ತು ಭವಾನಿ ಅವರ ಅನುಯಾಯಿಗಳು ಭೇಟಿಯಾದ ಬಳಿಕ ಹೆಚ್.ಡಿ ದೇವೇಗೌಡ ಈ ಮೂಲಕ ಪುತ್ರ ಹೆಚ್.ಡಿ.ರೇವಣ್ಣ, ಸೊಸೆ ಭವಾನಿ ಮತ್ತು ಮೊಮ್ಮಕ್ಕಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದರು ಎನ್ನಲಾಗಿದೆ.

ಭಾನುವಾರ ರಾತ್ರಿ ದೇವೇಗೌಡರ ನಿವಾಸದಲ್ಲಿ ಈ ಸಭೆ ನಡೆಯಿತು. ಮೊದಲಿಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆಗಮಿಸಿ ಗೌಡರ ಜತೆ ಮಾತುಕತೆ ನಡೆಸಿದರು. ಬಳಿಕ ರೇವಣ್ಣ ಮತ್ತು ಪತ್ನಿ ಭವಾನಿ ಒಟ್ಟಿಗೆ ಆಗಮಿಸಿದರು. ಮೂವರನ್ನೂ ಕೂಡಿಸಿಕೊಂಡು ಸಮಾಲೋಚನೆ ನಡೆಸಿದ ದೇವೇಗೌಡ, ಆರಂಭದಲ್ಲಿ ಅವರವರ ಅಭಿಪ್ರಾಯಗಳನ್ನು ಕೇಳಿದ್ದಾರೆ. ಹಾಸನ ಕ್ಷೇತ್ರದ ಪ್ರಸಕ್ತ ಸನ್ನಿವೇಶದಲ್ಲಿ ಹಾಲಿ ಶಾಸಕ ಪ್ರೀತಂಗೌಡ ಅವರನ್ನು ಮಟ್ಟಹಾಕಲು ತಮಗೇ ಟಿಕೆಟ್‌ ನೀಡಬೇಕು. ಪ್ರೀತಂಗೌಡ ತಮಗೆ ಸಾಕಷ್ಟುಅವಮಾನ ಮಾಡಿರುವುದರಿಂದ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗಿದೆ. ತಮಗೇ ಟಿಕೆಟ್‌ ನೀಡಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಭವಾನಿ ರೇವಣ್ಣ ಕಡ್ಡಿ ಮುರಿದಂತೆ ಹೇಳಿದರು ಎನ್ನಲಾಗಿದೆ.

ನಂತರ ಇದಕ್ಕೆ ಪ್ರತಿಯಾಗಿ ಮಾತನಾಡಿದ ಕುಮಾರಸ್ವಾಮಿ, ಸದ್ಯದ ಪರಿಸ್ಥಿತಿಯಲ್ಲಿ ಹಾಸನ ಕ್ಷೇತ್ರದಿಂದ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡುವುದು ಸರಿಯಲ್ಲ. ಮೇಲಾಗಿ ಸ್ವರೂಪ್‌ ಅವರ ತಂದೆ ಪಕ್ಷದಲ್ಲಿ ಸಾಕಷ್ಟು ಕೆಲಸ ಮಾಡಿ ಶಾಸಕರಾಗಿದ್ದರು. ದಾಸ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸ್ವರೂಪ್‌ ಅವರಿಗೆ ಟಿಕೆಟ್‌ ನೀಡುವುದರಿಂದ ಉತ್ತಮ ಸಂದೇಶ ರವಾನಿಸಿದಂತೆ ಆಗುತ್ತದೆ. ಭವಾನಿಗೆ ಟಿಕೆಟ್‌ ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಆತಂಕ ಹೊರಹಾಕಿದರು.

ಈ ಹಂತದಲ್ಲಿ ದೇವೇಗೌಡರು ಕುಮಾರಸ್ವಾಮಿ ಅವರ ಅಭಿಪ್ರಾಯವನ್ನೇ ಬೆಂಬಲಿಸಿ ಮಾತನಾಡಿದರು. ಭವಾನಿಗೆ ಮುಂದೆ ಅವಕಾಶ ಕಲ್ಪಿಸಿದರಾಯಿತು. ಈಗಾಗಲೇ ಪುತ್ರರಿಬ್ಬರೂ ಸ್ಥಾನಮಾನ ಹೊಂದಿದ್ದಾರೆ. ಹೀಗಾಗಿ ದಾಸವೊಕ್ಕಲಿಗ ಉಪಜಾತಿಯವರಾದ ಎಚ್‌ಪಿ ಸ್ವರೂಪ್(H P Swaroop) ಅವರನ್ನು ಒಕ್ಕಲಿಗ ಉಪಜಾತಿಯಾಗಿ ಕಣಕ್ಕಿಳಿಸೋಣ ಎಂದು ಹೇಳಿದರು. ಇದು ಹಾಸನ ಮತ್ತು ಹಲವಾರು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ಸೂಚಿಸಿದರು.

ಗೌಡರು ಹೀಗೆ ಹೇಳುತ್ತಿದ್ದಂತೆ ಆಕ್ರೋಶದಿಂದ ಕೂಗಾಡಿದ ಭವಾನಿ ಅವರು ಸಭೆಯ ಅರ್ಧದಲ್ಲೇ ಎದ್ದು ತಮ್ಮ ಕಾರು ಏರಿ ಹೊರಟರು. ಅದಾದ ಬಳಿಕ ರೇವಣ್ಣ ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಅದು ಯಶಸ್ಸು ಕಾಣದೇ ಇದ್ದಾಗ ಅವರೂ ಕೋಪದಿಂದಲೇ ತೆರಳಿದರು. ಇಬ್ಬರೂ ನಿರ್ಗಮಿಸಿದ ಬಳಿಕ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಸುದೀರ್ಘ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಹಾಸನ ಜಿಲ್ಲಾ ರಾಜಕಾರಣದಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಗೌಡರು ಆದ್ಯತೆ ನೀಡಿದ್ದರಿಂದ ಹಾಸನ ಸೀಟು ವಿಚಾರವನ್ನು ಸವಾಲಾಗಿ ತೆಗೆದುಕೊಂಡ ಹೆಚ್.ಡಿ.ರೇವಣ್ಣ ಅವರ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ. ಭವಾನಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಭವಾನಿ ರೇವಣ್ಣ ಬೆಂಬಲಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಕಾರ ಶೀಘ್ರದಲ್ಲೇ ಪ್ರಕಟಿಸಲಾದ ಎರಡನೇ ಪಟ್ಟಿಯಲ್ಲಿ ಹಾಸನದ ಅಭ್ಯರ್ಥಿಯ ಹೆಸರನ್ನು ಸೇರಿಸಲಾಗುವುದು. ಆದರೆ, ಎಚ್.ಪಿ.ಸ್ವರೂಪ್ ಅವರನ್ನು ಬೆಂಬಲಿಸುವ ಅಥವಾ ಪ್ರಚಾರದಿಂದ ಅಂತರ ಕಾಯ್ದುಕೊಳ್ಳುವ ಎಚ್.ಡಿ.ರೇವಣ್ಣ, ಭವಾನಿ, ಪ್ರಜ್ವಲ್ ಮತ್ತು ಸೂರಜ್ ನಿರ್ಧಾರದ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಇಂದು ಸೋಮವಾರ ಜೆಡಿಎಸ್‌ನ ಎರಡನೇ ಪಟ್ಟಿಪ್ರಕಟಗೊಳ್ಳುವುದೇ? ಒಂದು ವೇಳೆ ಪ್ರಕಟಗೊಂಡರೂ ಅದರಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಹೆಸರು ಇರಲಿದೆಯೇ ಎಂಬುದು ಕುತೂಹಲಕರವಾಗಿದೆ.

ಇದನ್ನೂ ಓದಿ: Hassan Ticket Fight: ಭವಾನಿ ರೇವಣ್ಣ‌ಗೆ ಟಿಕೆಟ್ ನಿರಾಕರಿಸೋ ಹಿಂದೆದೆ HDKಯ ಈ ರಾಜಕೀಯ ಲೆಕ್ಕಾಚಾರ, ಏನೀ ಹೊಸ ತಂತ್ರ!?

Leave A Reply

Your email address will not be published.