ದಕ್ಷಿಣಕನ್ನಡ : ಮಗಳ ಮದುವೆಗೆ ಚಿನ್ನಾಭರಣ ಖರೀದಿಗೆ 10 ಲಕ್ಷ ರೂ.ಕೊಂಡೊಯ್ಯುತ್ತಿದ್ದ ವ್ಯಕ್ತಿಯ ದರೋಡೆ : ಕಡವಿನ ಕಲ್ಕುಡ ದೈವಕ್ಕೆ ಮೊರೆ,ಪತ್ತೆಯಾದ ಕಳ್ಳ

Mangalore  : ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ ಹತ್ತು ಲಕ್ಷ ರೂ. ಕೊಂಡೊಯ್ಯುತ್ತಿದ್ದ ವೇಳೆ ಅಪರಿಚಿತ ಯುವಕನೋರ್ವ ಹಣದ ಕಟ್ಟನ್ನು ಕಿತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಆತನಿಂದ 9 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ಉಪ್ಪಿನಂಗಡಿ ಕಡವಿನ ಬಾಗಿಲು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಕಳ್ಳನ ಪತ್ತೆಗೆ ಪ್ರಾರ್ಥನೆ ಸಲ್ಲಿಸಿದ್ದರು.ಇದೀಗ ಕಳ್ಳನ ಪತ್ತೆಯಾಗಿದೆ.

 

ಇಳಂತಿಲ ಗ್ರಾಮದ ಪೆದಮಲೆಯ ಸರಳೀಕಟ್ಟೆ ರಸ್ತೆಯಲ್ಲಿ ಸೋಮವಾರ ಈ ಪ್ರಕರಣ ಸಂಭವಿಸಿದ್ದು, ಕಾಯರ್ಪಾಡಿ ನಿವಾಸಿ 60 ವರ್ಷ ಪ್ರಾಯದ ಮಹಮ್ಮದ್ ಎಂಬವರು ತನ್ನ ಮಗಳ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ಹತ್ತು ಲಕ್ಷ ರೂ. ಹಣವನ್ನು ಚಿನ್ನಾಭರಣ ಖರೀದಿಸುವ ಸಲುವಾಗಿ ಚೀಲವೊಂದರಲ್ಲಿ ಹಾಕಿ ಪೆದಮಲೆ – ಸರಳೀಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ನಿಲ್ಲಿಸಿದ್ದ ತನ್ನ ದ್ವಿಚಕ್ರ ವಾಹನದ ಸೀಟಿನ ಅಡಿಯಲ್ಲಿ ಇಡಲೆತ್ನಿಸುವಾಗ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಅವರ ಕೈಯಲ್ಲಿದ್ದ ಹಣದ ಕಟ್ಟನ್ನು ಕಿತ್ತುಕೊಂಡು ಪರಾರಿಯಾಗಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಉಪ್ಪಿನಂಗಡಿ (Mangalore) ಪೊಲೀಸರು ತನಿಖೆ ನಡೆಸಿ ಇಳಂತಿಲ ಗ್ರಾಮದ ಕಡವಿನಬಾಗಿಲು ನಿವಾಸಿ ಮುಸ್ತಫಾ (41) ಎಂಬಾತನನ್ನು ಗುರುವಾರ ಬಂಧಿಸಿ ಆತ ಎರಡು ಕಡೆಗಳಲ್ಲಿ ಅಡಗಿಸಿಟ್ಟಿದ್ದ 9 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಇನ್ನೋರ್ವ ಆರೋಪಿ ಒಂದು ಲಕ್ಷ ರೂಪಾಯಿಯೊಂದಿಗೆ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸ್ ಕಾರ್ಯಾಚರಣೆ ಮುಂದುವರೆದಿದೆ.

ಕಾರಣಿಕದ ಕಡವಿನ ಕಲ್ಕುಡ ದೈವದ ಪವಾಡ

ಹತ್ತು ಲಕ್ಷ ರೂ. ಹಣವನ್ನು ಹಾಡ ಹಗಲೇ ಕಿತ್ತೊಯ್ದ ಪ್ರಕರಣ ಸಮಾಜದಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸುತ್ತಿದ್ದಂತೆಯೇ ಹಣವನ್ನು ಕಿತ್ತೊಯ್ದ ತಂಡವನ್ನು ಪತ್ತೆ ಹಚ್ಚಲು ಹಾಗೂ ಹಣವನ್ನು ಮರಳಿ ದೊರಕಿಸಿಕೊಡುವಂತಾಗಲು ತಂಡವೊಂದು ಉಪ್ಪಿನಂಗಡಿಯ ಕಡವಿನ ಕಲ್ಕುಡ ಎಂದೇ ಪ್ರಖ್ಯಾತವಾಗಿರುವ ಕಡವಿನಬಾಗಿಲು ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಮಂಗಳವಾರದಂದು ಪ್ರಾರ್ಥನೆ ಸಲ್ಲಿಸಿದ್ದರು. ದೈವದ ಕೃಪೆಯೋ ಎಂಬಂತೆ ಹಣ ಕಿತ್ತೊಯ್ದ ತಂಡದ ಸುಳಿವು ಅದೇ ದಿನ ಪೊಲೀಸರಿಗೆ ಲಭಿಸಿ, ತನಿಖೆಯಲ್ಲಿ ಪ್ರಗತಿ ಸಾಧಿಸಲ್ಪಟ್ಟು ಇದೀಗ ಒರ್ವ ಆರೋಪಿಯು ಪೊಲೀಸರ ವಶವಾಗಿ ಕಿತ್ತೊಯ್ಯಲ್ಪಟ್ಟ ಹಣದಲ್ಲಿ ಗರಿಷ್ಟ ಮೊತ್ತದ ಹಣ ದೊರೆತಂತಾಗಿದೆ ಎಂದು ಕಲ್ಕುಡ ದೈವಸ್ಥಾನದ ಪ್ರಧಾನ ಪೂಜಾಕರ್ತೃ ಐ. ಚಂದ್ರಶೇಖರ್ ನಾಯಕ್‌ರವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ದೈವಸ್ಥಾನದಲ್ಲಿ ಸಮಾಜದ ಎಲ್ಲಾ ಮತೀಯರೂ ಹರಕೆ ಪ್ರಾರ್ಥನೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿದೆ.

Leave A Reply

Your email address will not be published.