Pet Dog: ನಾಯಿ ಸಾಕೋರಿಗೆ ಆಯುಷ್ಯ ಹೆಚ್ಚಾಗುತ್ತೆ ಅಂತಿದೆ ಸಂಶೋಧನೆ !

Pet Dog : ಸಾಕು ಪ್ರಾಣಿಯಾದ ನಾಯಿ (Pet Dog) ಎಂದರೆ ಮೊದಲು ಪ್ರಾಮಾಣಿಕತೆ, ನಿಯತ್ತು ನೆನಪಿಗೆ ಬರುವುದು ಸಹಜ. ಸಾಕು ಪ್ರಾಣಿ ನಾಯಿ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಮನೆಯವರೊಂದಿಗಿದ್ದು ಮನೆಯವರಂತೆಯೇ ಆಗಿ ಬಿಡುವ ಏಕೈಕ ಸಾಕು ಪ್ರಾಣಿ ನಾಯಿ ಎಂದರೆ ತಪ್ಪಾಗಲಾರದು. ಏಕೆಂದರೆ ಮನೆಯವರೊಂದಿಗೆ ಸದಾ ಬೆರೆತು ಅದು ಅಷ್ಟೊಂದು ಲವಲವಿಕೆಯಿಂದ ಕೂಡಿರುತ್ತದೆ. ಮನೆಯೊಡೆಯನಿಲ್ಲದಿದ್ದಾಗ ಮನೆಯೊಡೆಯನಂತೆ, ಮಕ್ಕಳೊಂದಿಗೆ ಮಕ್ಕಳಂತೆ ಇರುವ ನಾಯಿಯನ್ನು ಎಲ್ಲರೂ ಇಷ್ಟ ಪಡಲೇ ಬೇಕು. ಅಂತಹ ನಾಯಿಯ ಬಗ್ಗೆ ಇಲ್ಲಿ ನಿಮಗಿವತ್ತು ಇನ್ನಷ್ಟು ಇಂಟ್ರೆಸ್ಟಿಂಗ್ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ.

ನಾಯಿ ಸಾಕುವುದು ಬಾಯಿಯಲ್ಲಿ ಹೇಳಿದಷ್ಟು ಸುಲಭವಲ್ಲ. ಆದರೆ ಒಮ್ಮೆ ನೀವು ತಂದು ಸಾಕಿದ ಮೇಲೆ ಮಾತ್ರ ಆ ನಾಯಿ ಯಜಮಾನನಿಗೆ ಯಾವತ್ತೂ ಋಣಿಯಾಗಿ ಇರುತ್ತದೆ ಎಂಬ ಮಾತು ನಾವು ಕೇಳಿರುತ್ತೇವೆ. ಆ ಮಾತು ಅಷ್ಟೇ ಸತ್ಯ. ನಿಇನ್ಮುಂದೆ ನಿಯತ್ತಿನ ಪ್ರಾಣಿ ಎಂದೋ, ಅಲ್ಲಾ ಎಲ್ಲರೊಂದಿಗೆ ಬೆರೆಯುತ್ತೆ, ಅಗತ್ಯ ಬಿದ್ದಾಗ ಜೀವ ಪಣಕ್ಕಿಟ್ಟು ರಕ್ಷಿಸುತ್ತೆ ಎಂದೋ ನಾವು ನಾಯಿಯನ್ನು ಸಾಕಬೇಕಿಲ್ಲ. ನಾಯಿ ಸಾಕೋದ್ರಿಂದ ಆಗತ್ತೆ ನಿಮ್ಮ ಆಯುಷ್ಯ ಹೆಚ್ಚಳ ಕೂಡಾ ಆಗತ್ತೆ ಅನ್ನೋ ಹೊಸ ಅಂಶ ಈಗ ಬೆಳಕಿಗೆ ಬಂದಿದೆ.

ಸ್ವೀಡನ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ನಾಯಿ ಸಾಕಿದ್ರೆ ನಿಮ್ಮ ಆಯುಷ್ಯ ಹೆಚ್ಚಾಗುತ್ತದೆ ಎಂಬುದು ತಿಳಿದು ಬಂದಿದೆ. ಆ ಅಧ್ಯಯನದಲ್ಲಿ ಸುಮಾರು 3.4 ಮಿಲಿಯನ್ ಜನರನ್ನು ಈ ಕುರಿತಂತೆ ಹಿಂದೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರೆಲ್ಲ ನಾಯಿ ಪ್ರಿಯರು. ಅವರು ಸುಮಾರು 12 ವರ್ಷಗಳಿಂದ ಅವರೆಲ್ಲ ನಾಯಿಯನ್ನು ಸಾಕಿದ್ದಾರೆ. ವಿಶೇಷ ಅಂದ್ರೆ ಒಬ್ಬರಲ್ಲೂ ಹೃದಯದ ಸಮಸ್ಯೆಯಿಲ್ಲ. ನಾಯಿಯನ್ನು ಸಾಕದೇ ಇರುವವರಿಗೆ ಹೋಲಿಸಿದ್ರೆ ಇವರಲ್ಲಿ ಸಾವಿನ ಅಪಾಯ ಶೇ.20 ರಷ್ಟು ಕಡಿಮೆ ಇದೆ ಎನ್ನುವ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲ, ಯಾರು ಒಂಟಿಯಾಗಿ ಇರುತ್ತಾರೆಯೋ ಅಂಥವರಂತೂ ನಾಯಿ ಸಾಕೋದು ಬೆಸ್ಟ್ ಎನ್ನಲಾಗಿದೆ. ಯಾಕೆಂದರೆ ನಾಯಿ ಸಾಕುವವರು ದೈಹಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಅವರನ್ನು ಏಕಾಂಗಿತನ ಬಾಧಿಸುವುದಿಲ್ಲ, ಅವರ ಜೀವನಶೈಲಿ ಉತ್ತಮವಾಗಿರುತ್ತದೆ. ಅದಲ್ಲದೆ ಅವರಲ್ಲಿ ಸಾವಿನ ಅಪಾಯ ಶೇ.33 ರಷ್ಟು ಕಡಿಮೆಯಾಗಿರುತ್ತದೆ. ಸ್ಟ್ರೋಕ್, ಹೃದಯಾಘಾತದಂತಹ ಸಮಸ್ಯೆಗಳು ಬರುವುದಿಲ್ಲ ಎಂದಿದೆ ಸಂಶೋಧನೆ.

ಮುಖ್ಯವಾಗಿ ನೀವು ಯಾವುದೇ ಅಪಾಯಕಾರಿ ಖಾಯಿಲೆಯಿಂದ ಬಲಳುತ್ತಿದ್ದರೆ ವೈದ್ಯಕೀಯ ಚಿಕಿತ್ಸೆ ಜೊತೆಗೆ ಮನೆಯಲ್ಲಿ ಮುದ್ದಾದ ನಾಯಿಯೊಂದನ್ನು ಸಾಕಿ. ಇದರಿಂದ ಒಂದು ಮೂಕ ಪ್ರಾಣಿಗೆ ಆಶ್ರಯ ದೊರೆತಂತಾಗುತ್ತದೆ, ಜೊತೆಗೆ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ಇನ್ನು ಪತಿ, ಮಕ್ಕಳು, ಇತರೆ ಸಂಬಂಧಿ ಒಡನಾಟ ಇಲ್ಲದೇ ಒಂಟಿಯಾಗಿರುವವರಿಗೆ ನಾಯಿಗಳನ್ನು ಸಾಕುವುದರಿಂದ ಭಾವನಾತ್ಮಕ ಬೆಂಬಲ ಕೂಡ ದೊರೆಯುತ್ತದೆ. ಅದೊಂದು ಮೂಕ ಪ್ರಾಣಿಯಾಗಿದ್ದರೂ, ನಾಯಿ ಮನುಷ್ಯನಿಗೆ ಸದಾ ಒಂದಲ್ಲ ಒಂದು ರೀತಿಯಲ್ಲಿ ಕೊಡುಗೆ ನೀಡುತ್ತಲೇ ಬರುತ್ತಿದೆ, ಈಗ ಕೊಡ್ತಿದೆ ಆಯುಷ್ಯ. ಹಾಗಾಗಿ, ಇನ್ನೆಲ್ಲಾದರೂ ಒಂದು ಬಡಪಾಯಿ ಹಸಿದ ಹೊಟ್ಟೆಯ, ಅನ್ನದ ಅಗುಳಿನ ನಿರೀಕ್ಷೆಯ ಕಣ್ಣುಗಳ ನಾಯಿ ಎಂಬ ಆಪತ್ ಬಾಂಧವ ಎದುರು ಬಂದರೆ ನಿಮ್ಮ ಮನಸ್ಸು ಕರಗಲಿ. ಒಂದು ತುತ್ತು ಅನ್ನ ಅದರ ಮುಂದೆ ಬೀಳಲಿ.

Leave A Reply

Your email address will not be published.