Nalin Kumar Kateel- ಹೆಂಡತಿ ಹಾಗೂ ಅಜ್ಜನ ಹೆಸರಿಟ್ಟುಕೊಂಡು ನಾವು MP, MLA ಆಗಲ್ಲ! ಬಿಜೆಪಿಗೆ ಈ ರೀತಿ ರಾಜಕಾರಣ ಮಾಡಿ ಗೊತ್ತಿಲ್ಲ- ಕಟೀಲ್

Nalin Kumar Kateel :ರಾಷ್ಟ್ರದ ಹಿತ ಬಯಸೋ ಬಿಜೆಪಿ ಪಾರ್ಟಿ ಎಂದಿಗೂ ಹೆಂಡತಿ ಹೆಸರಲ್ಲಿ ರಾಜಕಾರಣ ಮಾಡಲ್ಲ, ಅಜ್ಜನ ಹೆಸರನ್ನು ಮುಂದಿಟ್ಟು ಕೊಂಡು ಎಂಪಿ, ಎಂಎಲ್ಎ ಆಗಲ್ಲ. ನಮ್ಮವರೆಲ್ಲ ಸ್ವಂತ ಶ್ರಮದಿಂದ ಗೆದ್ದು ಬಂದೋರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ವ್ಯಂಗ್ಯವಾಡಿ ವಿರೋಧ ಪಕ್ಷಗಳನ್ನು ಪರೋಕ್ಷವಾಗಿ ಕೆಣಕಿದ್ದಾರೆ.

ಹಾವೇರಿ (Haveri) ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಉನ್ನತ ಕುಟುಂಬದಿಂದ ಬಂದವ ಪ್ರಧಾನಿ ಆಗಿಲ್ಲ. ಸಾಮಾನ್ಯ ಕುಟುಂಬದಿಂದ ಬಂದವರು ಪ್ರಧಾನಿ ಆಗಿದ್ದಾರೆ. ಕೆಲ ಪಕ್ಷಗಳಲ್ಲಿ ಕುಟುಂಬದ ಅಡುಗೆ ಮನೆಯಲ್ಲಿ ಕೆಲಸ ಮಾಡಿದವ ಶಾಸಕ ಆಗಬಲ್ಲ. ಅಡುಗೆ ಮನೆಗೆ ಸಾಮಗ್ರಿ ತಂದವ ಶಾಸಕ ಆಗಬಲ್ಲ ಎಂದು ಕುಹಕವಾಡಿದ್ದಾರೆ.

ಅಲ್ಲದೆ ಮನಮೋಹನ್ ಸಿಂಗ್ ಆಡಳಿತವನ್ನು ಟೀಕಿಸಿದ ಅವರು ಕೊರೊನಾ (Corona) ಸಂದರ್ಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರೆ, ಮೊದಲ ಲಸಿಕೆ ಸೋನಿಯಾ ಗಾಂಧಿಗೆ, ಎರಡನೇ ಲಸಿಕೆ ರಾಹುಲ್ ಗಾಂಧಿ (Rahul Gandhi), ಮೂರನೇ ಲಸಿಕೆ ಪ್ರಿಯಾಂಕಾ ಗಾಂಧಿಗೆ ನಾಲ್ಕನೇ ಲಸಿಕೆ ವಾದ್ರಾಗೆ ಕೊಡುತ್ತಿದ್ದರು. ಆದರೆ ನರೇಂದ್ರ ಮೋದಿ (Narendra Modi) ಪ್ರತಿಯೊಬ್ಬರಿಗೂ ಲಸಿಕೆ ಕೊಟ್ಟಿದ್ದಾರೆ. ಇದು ನಮ್ಮ ಬಿಜೆಪಿ ಪಕ್ಷದ ಹೆಗ್ಗಳಿಕೆ ಎಂದರು.

ಸಿದ್ದರಾಮಯ್ಯ(Siddaramaiah) ಅವರನ್ನೂ ಪರೋಕ್ಷವಾಗಿ ತಿವಿದ ಕಟೀಲ್ ‘ಅಹಿಂದ ಚಳುವಳಿ ಮೂಲಕ ಮಾಜಿ ಸಿಎಂ ಒಬ್ರು ನಾಯಕ ಆದರು. ಅಹಿಂದ ಹೆಸರಲ್ಲಿ ಸಿಎಂ ಆದವರು ತಮ್ಮ ಸಮುದಾಯಕ್ಕೂ ನ್ಯಾಯ ಕೊಡಲಿಲ್ಲ. ಕನಕ ಜಯಂತಿ ಮಾಡಿದ್ದು ಯಡಿಯೂರಪ್ಪ. ಕನಕ ಪೀಠಕ್ಕೆ ಅನುದಾನ ಕೊಟ್ಟಿದ್ದು ಯಡಿಯೂರಪ್ಪ ಸರ್ಕಾರ. ಹಿಂದುಳಿದ ವರ್ಗಗಳಿಗೆ ಆ ಮಾಜಿ ಸಿಎಂ ಏನು ಮಾಡಿದರು? ನಾರಾಯಣಗುರು ನಿಗಮ ಮಾಡಿದ್ದು ಬೊಮ್ಮಾಯಿ ಸರ್ಕಾರ’ ಎಂದು ಹೊಗಳಿದರು.

ಇನ್ನು ಸುಮಲತಾ ಅಂಬರೀಷ್ ಬಿಜೆಪಿ ಸೇರುವ ವಿಚಾರದ ಕುರಿತು ಮಾತನಾಡಿ, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ (Sumalatha Ambareesh) ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದಾರೆ. ಯಾವ ಪಕ್ಷಕ್ಕೆ ಹೋಗಬೇಕು ಎನ್ನುವುದನ್ನು ಅವರು ಆಯ್ಕೆ ಮಾಡುತ್ತಾರೆ. ಅದು ಅವರಿಗೆ ಬಿಟ್ಟ ವಿಚಾರ. ಈ ಬಗ್ಗೆ ಚರ್ಚೆಗಳೂ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಒಬ್ಬರು ಸಂಸದರಾಗಿ ಅವರು ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.

ಇದರೊಂದಿಗೆ ವಿರೂಪಾಕ್ಷಪ್ಪ ವಿಚಾರವಾಗಿ ಕೇಳಿದ ಪ್ರಶ್ನೆಗೆ ‘ಈಗಾಗಲೇ ಲೋಕಾಯುಕ್ತರ ಬಳಿ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ. ಯಡಿಯೂರಪ್ಪರ ಐದಾರು ಜನರಿಗೆ ಟಿಕೆಟ್ ಕೈತಪ್ಪುವ ಬಗ್ಗೆ ಮಾತಾಡಿದ್ದರು, ಅದರ ಬಗ್ಗೆ ನಮ್ಮ ಹೈಕಮಾಂಡ್ ತಿರ್ಮಾನ ಕೈಗೊಳ್ಳುತ್ತದೆ ಎಂದರು.

Leave A Reply

Your email address will not be published.