Cracked Heels: ಪಾದದ ಹಿಮ್ಮಡಿ ಒಡೆದು ಸಮಸ್ಯೆ ಹೆಚ್ಚಾಗಿದೆಯೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ ಪರಿಹಾರ ಕಂಡುಕೊಳ್ಳಿ!

Cracked Heels: ಸುಂದರವಾಗಿ ಕಾಣಿಸಬೇಕು ಎಂದು ಯಾರು ತಾನೇ ಬಯಸಲ್ಲ ಹೇಳಿ! ಅದರಲ್ಲಿಯೂ ಸೌಂದರ್ಯದ ವಿಷಯದಲ್ಲಿ ಮಹಿಳೆಯರಿಗೆ ವಿಶೇಷ ಕಾಳಜಿ ಎಂದರೆ ತಪ್ಪಾಗದು. ಮಹಿಳೆಯರು ತಮ್ಮ ಸುಂದರ ವದನ, ತ್ವಚೆ ಮೇಲೆ ನೀಡುವ ಗಮನವನ್ನು ಕೈ, ಕಾಲುಗಳ ಮೇಲೆ ನೀಡದ ಹಿನ್ನೆಲೆ ಪಾದದ ಹಿಮ್ಮಡಿಗಳು ಬಿರುಕು ಬಿಡುವ(Cracked Heels) ಸಮಸ್ಯೆ ಕಂಡುಬರುತ್ತದೆ. ನಿಮಗೂ ಪಾದಗಳು ಒಡೆದು ಕಿರಿಕಿರಿಯಾಗುತ್ತಿದೆಯೇ ? ಹಾಗಿದ್ರೆ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡಿ ಪರಿಹಾರ ಕಂಡುಕೊಳ್ಳಿ.

ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯ ಹರಸಾಹಸ ಪಡುವುದು ಸಹಜ. ನಮಗೆ ಪ್ರಕೃತಿ ದತ್ತವಾಗಿ ದೊರೆತ ಅಮೂಲ್ಯ ವರ ಎಂದರೆ ನಮ್ಮ ದೇಹ. ಈ ದೇಹದ(Body) ಆರೈಕೆ ಕೂಡ ಅಷ್ಟೇ ಮುಖ್ಯ ಎಂಬುದನ್ನು ಹೆಚ್ಚಿನವರು ಮರೆತುಬಿಡುತ್ತಾರೆ. ಚಳಿಗಾಲ ಸಮೀಪಿಸುತ್ತಿದ್ದಂತೆ ಹೆಚ್ಚಿನವರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ(Women) ತಮ್ಮ ಪಾದಗಳ ಕಾಳಜಿ ಮಾಡೋದೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಮತ್ತೆ ಕೆಲವರಿಗೆ ಬೇಸಿಗೆ ಕಾಲದಲ್ಲಿ ತೇವಾಂಶ ಅಂಶ ಕಡಿಮೆ ಆಗುವ ಹಿನ್ನೆಲೆ ಕಾಲಿನ ಪಾದದ ಚರ್ಮ ಒಣಗಲು ಆರಂಭವಾಗಿ, ಪಾದಗಳು ಒಡೆಯುತ್ತವೆ.

ಪುರುಷರು ಸ್ತ್ರೀಯರು ಎನ್ನದೆ ಸಹಜವಾಗಿ ಎಲ್ಲರಿಗೂ ಈ ಸಮಸ್ಯೆ ಕಂಡುಬರುವುದಲ್ಲದೆ ಪಾದಗಳು ಬಿರುಕು(CRACKED HEELS) ಬಿಡುವಾಗ ಉಂಟಾಗುವ ನೋವು ಅನುಭವಿಸಿದವರಿಗಷ್ಟೇ ಗೊತ್ತು!! ಅಷ್ಟೆ ಏಕೆ ಕೆಲವೊಮ್ಮೆ ನಡೆಯಲು ಆಗದೇ, ಕೆಲವೊಮ್ಮೆ ಕಾಲು ಚಾಚಿ ಕುಳಿತುಕೊಳ್ಳುವಾಗ ಎಲ್ಲರ ಮುಂದೆ ಕಷ್ಟವಾಗುವ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಹಾಗಿದ್ರೆ, ನಾವು ಮನೆಯಲ್ಲೇ ಮಾಡಬಹುದಾದ ಸರಳ ವಿಧಾನ ಯಾವುವು ಎಂದು ಗಮನಿಸಿದರೆ, ಒಂದು ಬಕೆಟ್ನಲ್ಲಿ ನಿಮಗೆ ಸಾಧ್ಯವಾಗುವಷ್ಟು ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನ, ಉಪ್ಪು, ಶಾಂಪು ಹಾಕಿ ಸ್ವಲ್ಪ ಸಮಯ ನಿಮ್ಮ ಕಾಲನ್ನು ಅದರಲ್ಲಿ ಇರಿಸಿಕೊಳ್ಳುವುದರಿಂದ ಕಾಲುಗಳು ಮೃದುವಾಗಿ ಪಾದಗಳ ನೋವು ಕಡಿಮೆ ಆಗುತ್ತದೆ.

ಪಾದಗಳು ಮೃದುವಾಗಿರಲು ಪ್ರತಿದಿನ ಆರೈಕೆ ಮಾಡುವುದು ಅವಶ್ಯಕವಾಗಿದ್ದು, ರಾತ್ರಿ ಮಲಗುವ ಮುನ್ನ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಹಚ್ಚಿಕೊಂಡು ಮೃದುವಾದ ಹತ್ತಿ ಸಾಕ್ಸ್‌ಗಳನ್ನು ಹಾಕಿಕೊಂಡು ಮಲಗುವ ಅಭ್ಯಾಸ ರೂಡಿಸಿಕೊಳ್ಳಿ. ವಾರಕ್ಕೊಮ್ಮೆ ಪಾದಗಳನ್ನು 20 ನಿಮಿಷ ಉಗುರುಬೆಚ್ಚಗಿನ ನೀರಿನಲ್ಲಿ ಇರಿಸಿಕೊಂಡು ಬಳಿಕ ಸ್ಕ್ರಬ್ ಮಾಡಿ ಮಾಯಿಶ್ಚರ್ ಕ್ರೀಮನ್ನು ಹಚ್ಚಿಕೊಳ್ಳಬೇಕು. ಸ್ನಾನ ಮಾಡುವಾಗ ಕಾಲುಗಳನ್ನು ಸ್ಕ್ರಬ್ಬರ್‌ನಿಂದ ಚೆನ್ನಾಗಿ ಉಜ್ಜಿ ಕೊಳೆ ತೆಗೆದರೆ ನೋವು ಕಡಿಮೆ ಆಗುತ್ತದೆ

ಪಾದಗಳು ಒಡೆಯುವ ಸಮಸ್ಯೆಯಿಂದ ಪರಿಹಾರ ಪಡೆಯಲು ಎಲ್ಲರ ಮನೆಯಲ್ಲಿ ದೊರೆಯುವಂತಹ ಎಳ್ಳಿನ ಎಣ್ಣೆ ಬಳಕೆ ಮಾಡುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಗಾಯಗಳನ್ನು ಗುಣಪಡಿಸುವ ಗುಣ ಹೊಂದಿರುವ ಎಳ್ಳೆಣ್ಣೆಯಲ್ಲಿ ಹಲವಾರು ಪೋಷಕಾಂಶಗಳಿರುವ ಹಿನ್ನೆಲೆ ನೋವಿನಿಂದ ಪರಿಹಾರ ಪಡೆಯಬಹುದು. ಇದಲ್ಲದೇ ಕೊಬ್ಬರಿ ಎಣ್ಣೆಯನ್ನು ಕೂಡ ಪಾದ ಒಡೆದಾಗ ಬಳಕೆ ಮಾಡಬಹುದು.

ಹೈ-ಹೀಲ್ಡ್ಸ್ ಚಪ್ಪಲಿಗಳನ್ನು ಹೆಚ್ಚು ಬಳಕೆ ಮಾಡುವುದನ್ನು ತಪ್ಪಿಸಿ. ಇದರಿಂದ ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಗಳಿವೆ. ನಿಂಬೆಯಲ್ಲಿ ಸಿ ವಿಟಮಿನ್ ಅಂಶವಿರುವ ಹಿನ್ನೆಲೆ ಚರ್ಮದ ಆರೋಗ್ಯವನ್ನು ಹೆಚ್ಚಿಸಲೂ ನೆರವಾಗುತ್ತದೆ. ಹದ ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಹತ್ತು ನಿಮಿಷಗಳ ಕಾಲ ಅದರೊಳಗೆ ಪಾದಗಳನ್ನು ಇಟ್ಟುಕೊಂಡರೆ ತ್ವಚೆ ಕೋಮಲವಾಗುತ್ತದೆ.

ಪ್ರತಿದಿನ ಕನಿಷ್ಠ ನಾಲ್ಕು ಲೀಟರಿನಷ್ಟು ನೀರು ಕುಡಿಯುವ ಅಭ್ಯಾಸ ರೂಡಿಸಿಕೊಂಡರೆ ಚರ್ಮದ ಆರೋಗ್ಯ ಮಾತ್ರವಲ್ಲದೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದರ ಜೊತೆಗೆ ಚರ್ಮ ತೇವಾಂಶಯುಕ್ತವಾಗಿಡಲು ಸಾಕಷ್ಟು ನೀರು ಕುಡಿಯಬೇಕು. ಮೇಲೆ ತಿಳಿಸಿದ ಸರಳ ವಿಧಾನ ಅನುಸರಿಸಿದರು ಕೂಡ ಪಾದ ಒಡೆದ ನೋವು ಕಡಿಮೆಯಾಗದೇ ಇದ್ದರೆ ವೈದ್ಯರನ್ನು (Doctor) ಭೇಟಿಯಾಗುವುದು ಉತ್ತಮ.

Leave A Reply

Your email address will not be published.