ಎಚ್ಚರ!!!15 ವರ್ಷದೊಳಗಿನ ಮಕ್ಕಳಿಗೆ ಮಾರಕವಾಗಲಿದೆ ಈ H3N2 ವೈರಸ್‌ ! ಸರಕಾರದಿಂದ ಗೈಡ್‌ಲೈನ್ಸ್‌ ಜಾರಿ!!! ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಏನು?

H3N2 Virus: ದೇಶಾದ್ಯಂತ ಜನರಲ್ಲಿ ನಡುಕ ಹುಟ್ಟಿಸಿದ ಕೋರೋನಾ ಮಹಾಮಾರಿ ತಗ್ಗಿತು ಎಂದು ನಿಟ್ಟುಸಿರು ಬಿಟ್ಟ ಮಂದಿಗೆ ಇದೀಗ ಮತ್ತೊಂದು ಸಾಂಕ್ರಾಮಿಕ ರೋಗ ಪತ್ತೆಯಾಗಿದ್ದು, ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಏರಿಕೆ ಕಾಣುತ್ತಿದೆ. ಈ ಎಲ್ಲ ಲಕ್ಷಣಗಳು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯ ತಜ್ಞರು ಎಚ್‌3ಎನ್‌2 ವೈರಸ್‌ನ H3N2 (hemagglutinin (H) and neuraminidase (N) ) ಉಪತಳಿಯಿಂದ ಕಂಡು ಬರುತ್ತಿವೆ ಎಂದಿದ್ದಾರೆ.

ಇತ್ತೀಚೆಗೆ ಬೆಳಿಗ್ಗೆ ಎದ್ದಾಗ ಚುಮು ಚುಮು ಚಳಿಯಾದರೆ ಮಧ್ಯಾಹ್ನ ರಣ ಬಿಸಿಲು ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತಿರುವ ಹಿನ್ನೆಲೆ ಜ್ವರ (Fever) ಶೀತ (cold) ಕೆಮ್ಮಿನ ಸಮಸ್ಯೆ ವ್ಯಾಪಕವಾಗಿ ಕಂಡುಬರುತ್ತಿದೆ.ಕರ್ನಾಟಕದಲ್ಲಿ ಈವರೆಗೆ 26 ಮಂದಿಯಲ್ಲಿ ಎಚ್‌3ಎನ್‌2 ವೈರಸ್ ಪತ್ತೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಜ್ವರ, ಕೆಮ್ಮು, ಶೀತ ಜ್ವರದ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಎಚ್‌3ಎನ್‌2 ವೈರಸ್( H3N2 Virus)ಕಾರಣವಾಗಿದ್ದು, ಕಳೆದ ಎರಡು ತಿಂಗಳಿನಿಂದ ಈ ಕುರಿತು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಆರೋಗ್ಯ ಸಚಿವರಾದ ಡಾ. ಸುಧಾಕರ್( K. Sudhakar)ರವರು ಈ ಬಗ್ಗೆ ಮಾಹಿತಿ ನೀಡಿದ್ದು, (H3N2 Virus)ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ತಜ್ಞರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ ಬಳಿಕ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಆರೋಗ್ಯ ಸಿಬ್ಬಂದಿಗೆ ಇಂದಿನಿಂದಲೇ (ಮಾ.6) ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ.

ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ ನೀಡಲಾಗಿದ್ದು, ರೋಗಿಗಳಿಗೆ ಅರಿವು ಮೂಡಿಸುವ ಕಾರ್ಯವನ್ನು ಕೈಗೊಳ್ಳಲು ಸೂಚಿಸಲಾಗಿದೆ. ಇದರ ಜೊತೆಗೆ 15 ವರ್ಷ ಕೆಳಗಿನ ಮಕ್ಕಳಿಗೆ, ಗರ್ಭಿಣಿ ಹೆಂಗಸರು ಕೂಡ ಎಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ಈ ವೈರಸ್ ಬೇಗ ತಗುಲುತ್ತದೆ ಎಂದು ತಜ್ಞರು ಮಾಹಿತಿ ನೀಡಿದ್ದು, ಸದ್ಯಕ್ಕೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ರಾಜ್ಯ ಆರೋಗ್ಯ ಇಲಾಖೆ ಇಂದು ಪ್ರತ್ಯೇಕ ಮಾರ್ಗಸೂಚಿ ನೀಡಲಿದ್ದು, ಎಚ್​3ಎನ್2 ಕೂಡಾ ಕೋವಿಡ್ ಪರೀಕ್ಷೆ(Covid Test) ರೀತಿ ಸ್ವ್ಯಾಬ್​ ಟೆಸ್ಟ್ ಮೂಲಕ ಎಚ್​3ಎನ್2 ವೈರಸ್ ಪತ್ತೆ ಮಾಡಲು ಸಾಧ್ಯವಿದೆ. ಎಚ್3ಎನ್2 ಸೋಂಕು ಕೋರೋನಾದಷ್ಟು ಮಾರಕ ರೋಗವಲ್ಲ ಹೀಗಾಗಿ, ಸೋಂಕು ಪತ್ತೆಯಾದ ಬಳಿಕ ಚೇತರಿಕೆ ಕಾಣಬಹುದು ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಆದರೆ, ಜ್ವರ, ಶೀತ ದೀರ್ಘ ಕಾಲದ ಕೆಮ್ಮು ಕಂಡು ಬಂದಾಗ ತಾವೇ ವೈಯಕ್ತಿಕವಾಗಿ ಚಿಕಿತ್ಸೆ ತೆಗೆದುಕೊಳ್ಳುವ ಮತ್ತು ರೋಗ ನಿರೋಧಕ ಔಷಧಿಗಳನ್ನ ಹೆಚ್ಚು ಬಳಕೆ ಮಾಡುವುದನ್ನು ತಪ್ಪಿಸಬೇಕು. ಬಿಸಿಗಾಳಿ ಇದ್ದು, ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸುವುದು ಉತ್ತಮ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಬಿಸಿಲಿಗೆ ಓಡಾಡುವ ಪರಿಣಾಮ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿರುವ ಕುರಿತು ಆರೋಗ್ಯ ಸಚಿವರು ಮಾಹಿತಿ ನೀಡಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ.

ಈ ನಡುವೆ H3N2 ಬಗ್ಗೆ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆತಂಕ ವ್ಯಕ್ತಪಡಿಸಿದೆ. ಸಿಕ್ಕಿದ ಎಲ್ಲ ಆಂಟಿಬಯೋಟಿಕ್ ಮಾತ್ರೆಗಳನ್ನು ಬಳಸದಂತೆ ಎಚ್ಚರಿಕೆ ನೀಡಿದೆ. ದೀರ್ಘ ಕಾಲದ ಕೆಮ್ಮು, ಜ್ವರ ಮತ್ತು ಅನಾರೋಗ್ಯ ಸಮಸ್ಯೆಗಳು ಕಂಡು ಬಂದ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಜ್ವರ ಬಂದರೆ ಹೊರಗಡೆ ಹೋಗದಿರುವುದು ಉತ್ತಮ.ಹೀಗಾಗಿ ಆರೋಗ್ಯ ಸಮಸ್ಯೆ ಉಂಟಾದರೆ ನಿರ್ಲಕ್ಷ್ಯ ತೋರದೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

Leave A Reply

Your email address will not be published.