IAS v/s IPS: ಸಿನಿಮಾ ಆಗುತ್ತಿದೆ ರೂಪ- ರೋಹಿಣಿಯ ಬೀದಿಯ ರಂಪ! ಟೈಟಲ್ ರಿಜಿಸ್ಟರ್​ಗಾಗಿ ಫಿಲಂ ಚೇಂಬರ್​ಗೆ ಬಂದ್ವು 2 ಅರ್ಜಿ!

IAS v/s IPS: ಸಮಾಜದಲ್ಲಿ ಎಲ್ಲರಿಗೂ ರೋಲ್ ಮಾಡೆಲ್ ಅನಿಸುವ, ಪ್ರತಿಯೊಂದು ವಿಷಯಗಳಲ್ಲೂ ಮಾದರಿಯಾಗುವ, ಬೆಟ್ಟದಷ್ಟು ಯಶೋಗಾಥೆಗಳನ್ನು ಹೊಂದಿರುವ ಅನೇಕ ಸಾಧಕರ ಕುರಿತು ಹಲವು ಭಾಷೆಗಳಲ್ಲಿ ಸಿನಿಮಾಗಳು ಬಂದಿವೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಥೆಗಳನ್ನೂ ಇಂತಹ ಸಿನಿಮಾಗಳು ಒಳಗೊಂಡಿವೆ. ಆ ಸಿನಿಮಾಗಳನ್ನು ನೋಡಿದಾಗ ಬದುಕಿದರೆ ಇವರಂತೆ ಬದುಕ್ಬೇಕಪ್ಪಾ ಅನಿಸುತ್ತದೆ. ಅಲ್ಲದೆ ಕೆಲವು ವಿವಾದಾತ್ಮಕ ವಿಚಾರಗಳನ್ನು ಆಧರಿತವಾಗಿರಿಸಿ ಬೇರೆ ಬೇರೆ ಚಿತ್ರಗಳು ತೆರೆಕಂಡಿವೆ. ಅಂತೆಯೇ ಇದೀಗ ಕರ್ನಾಟಕದಲ್ಲಿ ಕೆಲವು ವಾರದಿಂದ ಬೀದಿ ರಂಪ ಮಾಡಿಕೊಳ್ಳುತ್ತಿರುವ ಐಎಎಸ್ (IAS) ಹಾಗೂ ಐಪಿಎಸ್ (IPS) ಅಧಿಕಾರಿಗಳಿಬ್ಬರ ಕಿತ್ತಾಟವನ್ನು ಸಿನಿಮಾ ಮಾಡಲು ಇಬ್ಬರು ನಿರ್ಮಾಪಕರು ಮುಂದಾಗಿದ್ದಾರಂತೆ! ಸಿನಿಮಾ ಮಾಡುವ ಉದ್ದೇಶದಿಂದ ನಿರ್ಮಾಪಕರು ಟೈಟಲ್ ರಿಜಿಸ್ಟರ್​ಗಾಗಿ ಫಿಲಂ ಚೇಂಬರ್​ಗೆ (Film Chamber) ಅರ್ಜಿ ಹಾಕಿದ್ದಾರೆ. ಈ ಬಗ್ಗೆ ಕುದ್ದಾಗಿ ಫಿಲಂ ಚೇಂಬರ್​ ಅಧ್ಯಕ್ಷರೇ ಮಾಹಿತಿ ನೀಡಿದ್ದಾರೆ.

ಹೌದು, ರಾಜ್ಯದ ಗಮನ ಸೆಳೆದಿರುವ ಐಎಎಸ್ (IAS) ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ (IPS) ಅಧಿಕಾರಿ ರೂಪ ಡಿ ಅವರ ಕಿತ್ತಾಟ ಸಿನಿಮಾ ಆಗಲಿದೆ. ಇಬ್ಬರು ನಿರ್ಮಾಪಕರು ಈ ‘ಬ್ಯೂರೋಕ್ರಾಟ್ ಬಡಿದಾಟ’ವನ್ನು ಸಿನಿಮಾ ಮಾಡಲು ಮುಂದಾಗಿದ್ದು, ಟೈಟಲ್ ರಿಜಿಸ್ಟರ್​ಗಾಗಿ ಫಿಲಂ ಚೇಂಬರ್​ಗೆ (Film Chamber) ಅರ್ಜಿ ಹಾಕಿದ್ದಾರೆ. ಈ ಹಿಂದೆ ‘ಐದು ಅಡಿ ಏಳು ಅಂಗುಲ’, ‘ಕೋಡಂಗಿ’ ಸಿನಿಮಾಗಳನ್ನು ನಿರ್ಮಿಸಿರುವ ಬಿಯಾಂಡ್ ಡ್ರೀಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಹಾಗೂ ಪ್ರವೀಣ್ ಶೆಟ್ಟಿ ಎಂಬ ನಿರ್ಮಾಪಕರು ಎರಡು ಪ್ರತ್ಯೇಕ ಟೈಟಲ್​ ನೀಡುವಂತೆ ಕೋರಿದ್ದಾರೆ.

ಐಎಎಸ್-ಐಪಿಎಸ್( IAS v/s IPS) ಜಗಳದ ಕೇಂದ್ರ ಬಿಂದುವಾಗಿರುವ ಅಧಿಕಾರಿಯ ಹೆಸರುಳ್ಳ ಟೈಟಲ್​ಗಾಗಿ ಒಂದು ಅರ್ಜಿ ಬಂದಿದ್ದು ಆ ಸಿನಿಮಾವನ್ನು ಪ್ರವೀಣ್ ಶೆಟ್ಟಿ ಎಂಬುವರು ನಿರ್ಮಾಣ ಮಾಡಲಿದ್ದಾರೆ. R v/s R ಎಂಬ ಮತ್ತೊಂದು ಟೈಟಲ್​ಗಾಗಿಯೂ ಅರ್ಜಿ ಬಂದಿದ್ದು ಈ ಸಿನಿಮಾವನ್ನು ನಿತ್ಯಾನಂದ ಪ್ರಭು ಎಸ್ ಎಂಬುವರು ನಿರ್ದೇಶನ ಮಾಡಲಿದ್ದಾರೆ, ಬಿಯಾಂಡ್ ಡ್ರೀಮ್ಸ್ ಹೆಸರಿನ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆಯಂತೆ.

ಇನ್ನು ನಿರ್ಮಾಪಕರು ಟೈಟಲ್ ರಿಜಿಸ್ಟರ್​ಗೆ ಅರ್ಜಿ ಹಾಕಿರುವ ವಿಚಾರವನ್ನು ಫಿಲಂ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್​ ತಿಳಿಸಿದ್ದು, ತಾವು ಕೋರಿರುವ ಟೈಟಲ್ ಅನ್ನು ನೀಡುವಂತೆ ಫಿಲಂ ಚೇಂಬರ್​ಗೆ ಮನವಿ ಮಾಡಿದ್ದಾರಂತೆ. ಭ್ರಷ್ಟಾಚಾರ, ರಾಜಕೀಯ, ಪ್ರೀತಿ-ಪ್ರೇಮ, ಮೋಸದಾಟ, ಆತ್ಮಹತ್ಯೆಯ ಅಂಶವನ್ನು ಈ ಕಥೆ ಒಳಗೊಂಡಿರಲಿದೆ ಎನ್ನುವ ಮಾತುಗಳು ಸಹ ಕೇಳಿ ಬರ್ತಿದೆ. ಈ ಸತ್ಯಕತೆಯನ್ನು ಆಧರಿಸಿ ಸಿನಿಮಾ ಮಾಡಲು ನಿರ್ಮಾಪಕರು ಉತ್ಸುಕರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ನಿರ್ದೇಶಕ ನಿತ್ಯಾನಂದ ಪ್ರಭು, ‘ಆರ್ vs ಆರ್’ ಟೈಟಲ್ ನೀಡುವಂತೆ ಅರ್ಜಿ ಹಾಕಲಾಗಿದ್ದು, ಇದು ನೈಜ ಘಟನೆ ಆಧರಿತ ಸಿನಿಮಾ ಆಗಿರಲಿದೆ. ಆದರೆ ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಸಹ ಇರುತ್ತದೆ. ಫಿಲಂ ಚೇಂಬರ್ ಟೈಟಲ್ ಕೊಟ್ಟ ನಂತರ ಕಥೆ ಸಾರಾಂಶವನ್ನ ಫಿಲಂ ಚೇಂಬರ್​ಗೆ ನೀಡುತ್ತೇವೆ” ಎಂದಿದ್ದಾರೆ.

ಟೈಟಲ್ ರಿಜಿಸ್ಟರ್​ಗೆ ಅರ್ಜಿ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಫಿಲಂ ಚೇಂಬರ್ ಅಧ್ಯಕ್ಷ ಬಾಮಾ ಹರೀಶ್, ‘ಇಂದಷ್ಟೆ ಸಿನಿಮಾ ಟೈಟಲ್​ಗಾಗಿ ಅರ್ಜಿಗಳು ಬಂದಿವೆ. ಬಂದಿರುವ ಎರಡೂ ಅರ್ಜಿಗಳನ್ನು ಸೋಮವಾರ ಟೈಟಲ್ ಕಮಿಟಿಯ ಮುಂದಿಡುತ್ತೇವೆ. ಸಮಿತಿ ಅನುಮತಿ ನೀಡಿದರೆ ಟೈಟಲ್ ನೀಡುತ್ತೇವೆ. ಯಾವುದೇ ವ್ಯಕ್ತಿಯ ಜೀವನ ಆಧರಿಸಿ ಸಿನಿಮಾ ಮಾಡುವುದಾದರೆ ಅವರಿಂದ ನಿರಪೇಕ್ಷಣಾ ಪತ್ರ (NOC) ಪಡೆಯಬೇಕಾಗುತ್ತದೆ’ ಎಂದಿದ್ದಾರೆ.

Leave A Reply

Your email address will not be published.