ದಕ್ಷಿಣ ಕನ್ನಡ : 4 ಕಾಡಾನೆಗಳ ಇರುವಿಕೆ ಪತ್ತೆ ,ಗುರಿ ತಲುಪದ ಅರಿವಳಿಕೆ ಚುಚ್ಚುಮದ್ದು

Dakshina kannada: ಮಂಗಳೂರು : ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಹಾಗೂ ರೆಂಜಿಲಾಡಿಯಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಾಕಾನೆಗಳ ನೆರವಿನೊಂದಿಗೆ ನಡೆಸುತ್ತಿರುವ ಕಾರ್ಯಾಚರಣೆ ಮೂರನೇ ದಿನವಾದ ಗುರುವಾರವೂ ಮುಂದುವರಿದಿದೆ.

ಕಾಡಾನೆಯು ಮಂಗಳವಾರ ರಾತ್ರಿ ಐತ್ತೂರು ಭಾಗದ ಸುಳ್ಯ ಸಮೀಪದಲ್ಲಿ (Dakshina Kannada) ತೋಟಕ್ಕೆ ನುಗ್ಗಿ ಕೃಷಿ ನಾಶ ಮಾಡಿದೆ ಎಂಬ ಮಾಹಿತಿಯಂತೆ ಅತ್ತ ತೆರಳಿದ ತಂಡಕ್ಕೆ ಐತ್ತೂರಿನ ಅಜನ ಎಂಬಲ್ಲಿ ರಬ್ಬರ್‌ ತೋಟದಲ್ಲಿ ಆನೆ ಕಂಡುಬಂದಿತು.

ರೆಂಜಿಲಾಡಿಯಲ್ಲಿದ್ದ ಸಾಕಾನೆ ಶಿಬಿರದ ಐದು ಆನೆಗಳನ್ನು ಬುಧವಾರ ಬೆಳಗ್ಗೆ ಐತ್ತೂರಿಗೆ ಕೊಂಡೊಯ್ಯಲಾಯಿತು. ಸಂಜೆ ವೇಳೆಗೆ ಕಾರ್ಯಾಚರಣೆಯ ವೈದ್ಯರ ತಂಡವು ಸಮೀಪಕ್ಕೆ ತೆರಳಿ ಎರಡು ಬಾರಿ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದನ್ನು ನೀಡಲು ಯತ್ನಿಸಿದ್ದರೂ ಗುರಿ ತಪ್ಪಿದೆ.

ಅರಣ್ಯ ಮತ್ತು ಕಡಿದಾದ ಪ್ರದೇಶ ಅದಾಗಿರುವ ಕಾರಣ ಕಾಡಾನೆಯ ಸೆರೆ ಸಾಧ್ಯವಾಗಿಲ್ಲ. ಅದಲ್ಲದೆ ಕಾರ್ಯಾಚರಣೆಯ ತಂಡ ಮತ್ತು ಸಾಕಾನೆಗಳು ಆಗಮಿಸುತ್ತಿದ್ದಂತೆ ಒಂಟಿ ಸಲಗವು ತೀವ್ರ ಪ್ರತಿರೋಧ ಒಡ್ಡಿತು ಎನ್ನಲಾಗಿದೆ. ಆ ಒಂಟಿ ಸಲಗ ಕಾರ್ಯಾಚರಣೆ ತಂಡವನ್ನೇ ಹಿಮ್ಮೆಟ್ಟಿಸಲು ಯತ್ನಿಸಿದ ಘಟನೆಯೂ ನಡೆದಿದೆ.

ಬಳಿಕ ಬುಧವಾರದ ಕಾರ್ಯಾಚರಣೆಯನ್ನು ಸ್ಥಗಿತ ಮಾಡಿ ಸಾಕಾನೆಗಳನ್ನು ಪೇರಡ್ಕದ ಆನೆ ಶಿಬಿರಕ್ಕೆ ತರಲಾಯಿತು. ಕಾರ್ಯಾಚರಣೆ ವೇಳೆ 2 ಕಾಡಾನೆಗಳ ಇರುವಿಕೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಗುರುವಾರ ಬೆಳಗ್ಗೆ ಕಾರ್ಯಾಚರಣೆ ಮತ್ತೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸಿಎಫ್‌ ಡಾ| ದಿನೇಶ್‌ ಕುಮಾರ್‌ ಹಾಗೂ ತಂಡದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ ಆಗಮಿಸಿದ ಅಭಿಮನ್ಯು ಸಹಿತ 5 ಸಾಕಾನೆಗಳ ಸಹಕಾರ ಪಡೆಯಲಾಗಿದೆ. ನಾಗರಹೊಳೆ ಮತ್ತು ಮಂಗಳೂರಿನಿಂದ ತಜ್ಞ ವೈದ್ಯರ ತಂಡವೂ ಕಾರ್ಯಾಚರಣೆಯ ತಂಡದಲ್ಲಿದೆ.

Leave A Reply

Your email address will not be published.