ದೋಳ್ಪಾಡಿಯಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

Grama Vastavya: ಕಾಣಿಯೂರು : ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಅವರ ಅರ್ಜಿ ವಿಲೇವಾರಿ ಕ್ರಮ ಗ್ರಾಮವಾಸ್ತವ್ಯದ (Grama Vastavya) ಕುರಿತು ಭರವಸೆ ಮೂಡಿಸಿದರೆ ಸವಣೂರು ಗ್ರಾಮದ ಕಂಚಿಕಾರ ಕೆರೆಯ ಸುತ್ತಲಿನ ಸರಕಾರಿ ಜಾಗವನ್ನು ಒತ್ತುವರಿ ಮಾಡಿರುವ ವಿಚಾರದ ಕುರಿತಂತೆ ಜಿಲ್ಲಾಧಿಕಾರಿಗಳ ಮಾತಿನಿಂದ ಅಸಮಾದಾನಗೊಂಡು ಸವಣೂರು ಗ್ರಾ.ಪಂ.ನ 21 ಮಂದಿ ಸದಸ್ಯರು ಕೂಡ ರಾಜಿನಾಮೆ ಸಲ್ಲಿಸಿದ ಘಟನೆ ನಡೆದಿದೆ.

94ಸಿ ಯೋಜನೆಯನ್ವಯ ಅಕ್ರಮವಾಗಿ ಕಾಣಿಯೂರಿನ ಇಬ್ಬರಿಗೆ ಮಂಜೂರು ಮಾಡಿದ್ದಾರೆ ಎಂಬ ರುಕ್ಮಯ್ಯ ಗೌಡ ಮಲೆಕರ್ಚಿ ಎಂಬವರ ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ವೈಯಕ್ತಿಕ ವೈಮನಸ್ಸಿನಿಂದ ಇಮತಹ ಅರ್ಜಿ ನೀಡುವುದು ಸರಿಯಲ್ಲ ಹಾಗೂ ಸಮಯ ವ್ಯರ್ಥಮಾಡಬಾರದು ಎಂದು ಅರ್ಜಿದಾರರಿಗೆ ಕಿವಿಮಾತು ಹೇಳಿದರು.
ವೆಂಕಪ್ಪ ಪರವ ಅವರು ಗಂಗಾ ಕಲ್ಯಾಣ ಯೋಜನೆಗೆ ಅರ್ಹನಾಗಿದ್ದರೂ ಯೋಜನೆ ಮಂಜೂರಿಗೆ ವಿಳಂಬ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಡಿದ ಮನವಿಗೆ ಅವರು ಯೋಜನೆಯ ಅಧಿಕಾರಿಗಳನ್ನು ಕರೆಸಿ ಕೂಡಲೇ ಮಂಜೂರು ಮಾಡುವಂತೆ ಆದೇಶಿಸಿದರು.
ಪಾಲ್ತಾಡಿ ಗ್ರಾಮಸ್ಥರು ಅಂಗಡಿಹಿತ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಬೇಕೆಂಬ ನೀಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಲಾನಯನ ಇಲಾಖೆಯ ಅಧಿಕಾರಿಗಳಿಗೆ ಈ ವರ್ಷದಲ್ಲೇ ಕಿಂಡಿಅಣೆಕಟ್ಟು ನಿರ್ಮಾಣ ಕುರಿತಂತೆ ಕ್ರಮವಹಿಸಬೇಕು ಹಾಗೂ ಪ್ರಗತಿಯ ವರದಿ ನೀಡುವಂತೆ ಹೇಳಿದರು.
ಪಾಲ್ತಾಡಿ ಗ್ರಾಮವನ್ನು ಪುತ್ತೂರು ತಾಲೂಕಿಗೆ ಸೇರ್ಪಡೆ ಮಾಡಬೇಕೆಂಬ ಮನವಿ ಹಾಗೂ ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾಮ ಪಂಚಾಯತ್ ಮಾಡಬೇಕೆಂಬ ಮನವಿ ಕುರಿತಂತೆ ಜಿಲ್ಲಾಧಿಕಾರಿಗಳು ತಾಲೂಕು ವಿಚಾರ ಸೇರ್ಪಡೆ ಇನ್ನು ಅಸಾಧ್ಯ ಈ ಕುರಿತಂತೆ ಎಲ್ಲಾ ಪ್ರಕ್ರಿಯೆ ಮುಗಿದಿದೆ.ಪಾಲ್ತಾಡಿ ಗ್ರಾ.ಪಂ.ಮಾಡುವ ನಿಟ್ಟಿನಲ್ಲಿ ವರದಿ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ದೋಳ್ಪಾಡಿ ಗ್ರಾಮಕ್ಕೆ ಬಸ್ ಸಂಚಾರ ಕುರಿತಂತೆ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೆಎಸ್.ಅರ್.ಟಿ.ಸಿ ಅಧಿಕಾರಿಗಳಿಗೆ ನಾಳೆಯೇ ದಿನದಲ್ಲಿ 4 ಟ್ರಿಪ್ ಓಡಿಸುವಂತೆ ಆದೇಶಿಸಿದರು.

ಅಜ್ಜಿನಡ್ಕ ಕಾಲನಿಗೆ ಈ ಹಿಂದೆ 60 ವರ್ಷಗಳಿಂದಲೂ ಇದ್ದ ರಸ್ತೆಯನ್ನು ಸ್ಥಳೀಯರು ವರ್ಗ ಜಾಗವೆಂದು ಕಿರಿದು ಮಾಡಿದ್ದಾರೆ ,ರಸ್ತೆಯಿಲ್ಲದೆ ಹಕವು ಸಮಸ್ಯೆಗಳಾಗುತ್ತಿವೆ ಎಂದು ಗ್ರಾಮಸ್ಥರು ಮಾಡಿದ ಮನವಿಗೆ ಸ್ಪಂದಿಸಿ ಕೂಡಲೇ ಈ ಹಿಂದಿನಂತೆಯೇ ರಸ್ತೆ ನಿರ್ಮಾಣ ಕುರಿತಂತೆ ಕ್ರಮ ಜರಗಿಸುವಂತೆ ಕಾಣಿಯೂರು ಗ್ರಾ.ಪಂ. ಹಾಗೂ ಕಡಬ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

ವಿವಿಧ ಭಾಗದ ರಸ್ತೆಗಳ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು ಎಲ್ಲಾ ರಸ್ತೆಗಳನ್ನೂ ಉದ್ಯೋಗ ಖಾತರಿಯೋಜನೆಯ ಮೂಲಕ ಮಾಡಿಸುವಂತೆ ತಾ.ಪಂ.ಇಓ ಅವರಿಗೆ ಸೂಚನೆ ನೀಡಿದರು.
ಚಾರ್ವಾಕ ಸಿಎ ಬ್ಯಾಂಕಿನ ಮನವಿಯಾದ ಸರಕಾರದ ಯಶಸ್ವಿನಿ ಯೋಜನೆಯಡಿ ಎಲ್ಲಾ ಆಸ್ಪತ್ರೆಗಳು ಮಂಗಳೂರಿನ ವ್ಯಾಪ್ತಿಯಲ್ಲಿದ್ದು,ಇದು ಈ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ.ಪುತ್ತೂರಿನ ಆಸ್ಪತ್ರೆಗಳಲ್ಲೂ ಈ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕೇಂಬ ಕೋರಿಕೆಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಈ ಕುರಿತು ಕ್ರಮ ಜರಗಿಸಿ ವರದಿ ನೀಡುವಂತೆ ಸೂಚಿಸಿದರು.

ಕಸ್ತೂರಿರಂಗನ್ವರದಿಯಿಂದ ದೋಳ್ಪಾಡಿ ಗ್ರಾಮವನ್ನು ಕೈಬಿಡುವಂತೆ ಗ್ರಾ.ಪಂ,ಸದಸ್ಯ ಲೋಕಯ್ಯ ಪರವ ಒತ್ತಾಯಿಸಿದರು. ಒಂದು ವೇಳೆ ಕಸ್ತೂರಿರಂಗನ್ ವರದಿಯಲ್ಲಿ ದೋಳ್ಪಾಡಿಯನ್ನು ಸೇರಿಸಿದರೆ ಇಲ್ಲಿನ ಜನಸಾಮಾನ್ಯರು ಕಷ್ಠಪಡಬೇಕಾದ ಸನ್ನಿವೇಶ ಎದುರಾಗಲಿದೆ ಎಂದರು. ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಯವರು ಪಶ್ಮಿಮ ಘಟ್ಟ ಮತ್ತು ಸೂಕ್ಮ ಪರಿಸರ ವಲಯವೆಂದು ಘೋಷಣೆ ಮಾಡಲಾಗುವ ಕಸ್ತೂರಿರಂಗನ್ ವರದಿಯಲ್ಲಿ ಉಲ್ಲೇಖಿಸಿದೆ ಎಂದಾದರೆ ಈ ಬಗ್ಗೆ ತಕ್ಷಣ ದೋಳ್ಪಾಡಿ ಗ್ರಾಮವನ್ನು ಬಿಡುವಂತೆ ನಾನು ಸರಕಾರಕ್ಕೆ ಶಿಫಾರಸ್ಸು ಮಾಡಲು ಬರೆಯುತ್ತೇನೆ ಎಂದರು.

ದೈವರಾಧನೆಗೆ ಸಂಬಂಧಪಟ್ಟ ಹಾಗೇ ನೃತ್ಯವನ್ನು ಶಾಲಾ, ಇನ್ನೀತರ ವೇದಿಕೆಯಲ್ಲಿ ಪ್ರದರ್ಶಿಸಬಾರದು, ಈ ಬಗ್ಗೆ ಕ್ರಮಕೈಗೊಂಡು ನಿಷೇಧಿಸಬೇಕು ಎಂದು ಲೋಕಯ್ಯ ಪರವ ಹೇಳಿದರು. ಇದರಿಂದ ನಮ್ಮ ತುಳುನಾಡಿನ ಸಂಸ್ಕೃತಿ ನಾಶಮಾಡಿದಂತೆ ಎಂದು ಲೋಕಯ್ಯ ಪರವ ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಈ ಬಗ್ಗೆ ಕನ್ನಡ ಸಂಸ್ಕೃತಿ ಇಲಾಖೆಯ ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ಕ್ರಮಕೈಗೊಳ್ಳಲು ಕಾರ್ಯಪ್ರವೃತ್ತರಾಗುತ್ತೇವೆ ಎಂದರು.

ಕಡಬ ತಾಲೂಕಿಗೆ ಸಂಪರ್ಕಿಸುವ ಕೊಜಂಬೇಡಿ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಅತೀ ಹತ್ತಿರ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಮಾಡಬೇಕು ಎಂದು ಪುರುಷೋತ್ತಮ ಕೆ.ಆರ್ ಮನವಿ ಮಾಡಿದರು. ಶಾಸಕರ ಅನುದಾನ ಮಂಜೂರು ಮಾಡಲು ಬರೆಯುವಂತೆ ಜಿಲ್ಲಾಧಿಕಾರಿಗಳು ಹೇಳಿದರು.

ಎಂ.ಎನ್.ಗೌಡ ಅವರು ಬೆಳಿಗ್ಗೆ ಹೊತ್ತಿನಲ್ಲಿ ಸುಬ್ರಹ್ಮಣ್ಯದಿಂದ ಲೋಕಲ್ ರೈಲು ಸಂಚಾರ ಆರಂಭಿಸುವಂತೆ ಮನವಿ ಮಾಡಿದರು.ಈ ಕುರಿತು ರೈಲ್ವೇ ಇಲಾಖೆಗೆ ಸೂಚನೆ ನೀಡುವ ಕೆಲಸ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಪುಣ್ಚಪ್ಪಾಡಿ ಗ್ರಾಮಕ್ಕೆ ಬ್ಯಾಂಕ್ ಬೇಕು
ಪುಣ್ಚಪ್ಪಾಡಿ ಗ್ರಾಮಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಬೇಕೆಂಬ ಗಿರಿಶಂಕರ ಸುಲಾಯ ಅವರ ಬೇಡಿಕೆಗೆ ,ಲೀಡ್ ಬ್ಯಾಂಕ್ ಅಧಿಕಾರಿಯನ್ನು ಕರೆಸಿ ಈ ಕುರಿತು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.ಸರಕಾರಿ ಜಾಗದಲ್ಲಿರುವ ಕೆರೆಗಳನ್ನು ಗುರುತಿಸಿ ಕೊಡುವಂತೆ ಮನವಿ ಮಾಡಿದರು. ಮುಂದಿನ ಬಾರಿಯ ಗ್ರಾಮ ವಾಸ್ತವ್ಯವನ್ನು ಪುಣ್ಚಪ್ಪಾಡಿ ಗ್ರಾಮದಲ್ಲಿ ನಡೆಸುವಂತೆ ಮನವಿ ಮಾಡಿದರು.ಮುಂದಿನ ಕಡಬ ತಾಲೂಕಿಗೆ ಗ್ರಾಮವಾಸ್ತವ್ಯದ ಗ್ರಾಮ ಆಯ್ಕೆ ಮಾಡುವಾಗ ಪರಿಗಣಿಸುತ್ತೇವೆ ಎಂದು ಭರವಸೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕ್ಕೆ ಸೂಚನೆ
ಯಾವುದೇ ಗ್ರಾಮದಲ್ಲೂ ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದರು.ಹಲವು ಅರ್ಜಿಗಳು 94ಸಿ ಮಂಜೂರಾತಿ ಕುರಿತಂತೆ ಇದ್ದದ್ದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಇಂತಹ ವಿಚಾರಗಳು ಇಲ್ಲಿಯವರೆಗೂ ಬರುವಂತಹ ಅವಶ್ಯಕತೆ ಏನು ಎಂದು ತಹಶೀಲ್ದಾರ್ ಅವರಲ್ಲಿ ಪ್ರಶ್ನಿಸಿದ ಅವರು 94ಸಿ ಕುರಿತಂತೆ ವರದಿ ನೋಡಿ ಮಂಜೂರು ಮಾಡುವಂತೆ ಸೂಚನೆ ನೀಡಿದರು.ತಹಶೀಲ್ದಾರ್ ಕಛೇರಿಯಲ್ಲಿ ವಿಳಂಬ ಮಾಡಿದರೆ ನನ್ನ ಗಮನಕ್ಕೆ ತನ್ನಿ ಎಂದು ಸಾರ್ವಜನಿಕರಲ್ಲಿ ಹೇಳಿದರು.

ಸವಣೂರು ಗ್ರಾಮದ ಕಂಚಿಕಾರ ಕೆರೆ ಸುತ್ತಲಿನ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿರುವ ಕುರಿತು ಗ್ರಾ.ಪಂ.ಮಾಡಿದ ಮನವಿಗೆ ಜಿಲ್ಲಾಧಿಕಾರಿಗಳು ಮಾತನಾಡಿ,ಕೆರೆಯ ಜಾಗವನ್ನು ಈಗಾಗಲೇ ಗ್ರಾ.ಪಂ.ಗೆ ಹಸ್ತಾಂತರಿಸಲಾಗಿದೆ.ಅದರ ಸುತ್ತಲಿನ ಸರಕಾರಿ ಜಾಗವನ್ನು ಯಾರೇ ಒತ್ತುವರಿ ಮಾಡಿದರೂ ಅದನ್ನು ಕಂದಾಯ ಇಲಾಖೆ ಆ ಜಾಗವನ್ನು ಉಳಿಸಿ ಸಂರಕ್ಷಿಸುತ್ತದೆ ಎಂದರು.ಕೆರೆಗೆ ಹೋಗಲು ದಾರಿಯಿಲ್ಲ ಎಂದಾಗ ಸರಕಾರಿ ಜಾಗವನ್ನು ಬಳಸಿಕೊಳ್ಳಿ ಎಂದರು.ಸರಕಾರಿ ಜಾಗವನ್ನು ಗ್ರಾ.ಪಂ.ಗೆ ನೀಡುವುದಿಲ್ಲ.ಕಂದಾಯ ಇಲಾಖೆ ಸಂರಕ್ಷಿಸುತ್ತದೆ ಎಂದರು.

ಇದರಿಂದ ತೃಪ್ತರಾಗದ ಹಾಗೂ ಕಂಚಿಗಾರ ಕೆರೆಯ ಸುತ್ತಲಿನ ಪರಂಬೋಕು ಜಾಗದ ಒತ್ತುವರಿ ತೆರವು ಮಾಡದ ಕುರಿತು,ಅಧಿಕಾರಿಗಳು ಗ್ರಾ.ಪಂ.ಅಧ್ಯಕ್ುಪಾಧ್ಯಕ್ಷ ಸದಸ್ಯರಿಗೆ ಅಗೌರವ ತೋರಿದ ಬಗ್ಗೆ,ಜಿಲ್ಲಾಧಿಕಾರಿಗಳ ಕಛೇರಿಯಲ್ಲೂ ತಾರತಮ್ಯ ಮಾಡಿರುವ ಕುರಿತು,ಗ್ರಾಮ ವಾಸ್ತವ್ಯ (Grama Vastavya) ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಅಹವಾಲನ್ನು ಗಂಭೀರವಾಗಿ ಪರಿಗಣಿಸದ ಬಗ್ಗೆ ಅಸಮಾನಗೊಂಡು 21 ಮಂದಿ ಸದಸ್ಯರು ವೇದಿಕೆಯಲ್ಲೇ ರಾಜಿನಾಮೆ ಸಲ್ಲಿಸಿದರು.

ವೇದಿಕೆಯಲ್ಲಿ ಕಾಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ದರ್ಕಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಸರ್ವೆ ಇಲಾಖಾ ಅಧಿಕಾರಿ ನಿರಂಜನ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್, ಪುತ್ತೂರು ವಿಭಾಗಧಿಕಾರಿ ಗಿರೀಶ್ ನಂದನ್, ಕಡಬ ತಾಲುಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ನವೀನ್ ಭಂಡಾರಿ, ಕಡಬ ತಹಶೀಲ್ದಾರ ರಮೇಶ್ ಬಾಬು ಉಪಸ್ಥಿತರಿದ್ದರು. ಕಡಬ ತಾಲೂಕು ಕಚೇರಿ ಉಪತಹಸೀಲ್ದಾರ ಗೋಪಾಲ್ ಕಲ್ಲುಗುಡ್ಡೆ ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು.

Leave A Reply

Your email address will not be published.