FIR on Kodimbadi Ashok Rai । ಯೋಧನ ಅಸಹಾಯಕ ಪತ್ನಿಯ ಕಟ್ಟಡ ಧ್ವಂಸ ಮಾಡಿದ ಕೋಡಿಂಬಾಡಿ ಅಶೋಕ್ ಕುಮಾರ್ ರೈ ?! ಬ್ರಾಹ್ಮಣ ಮಹಿಳೆಯ ಆರ್ತನಾದ !

Kodimbadi Ashok Rai : ಸುರತ್ಕಲ್: ಪುತ್ತೂರು ವಿಧಾನಸಭಾ ಕ್ಷೇತ್ರದ (Puttur) ಮುಂದಿನ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ತಾನು ಎಂದು ಹೇಳಿಕೊಳ್ಳುವ ಕೋಡಿಂಬಾಡಿ ಅಶೋಕ್ ರೈ (Kodimbadi Ashok Rai) ಅವರು ಈ ಚುನಾವಣಾ ಸಂದರ್ಭದಲ್ಲಿ ಬಹು ದೊಡ್ಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮಾಜಿ ಯೋಧರೊಬ್ಬರ ಅಸಹಾಯಕ ಪತ್ನಿ ನಡೆಸುತ್ತಿರುವ ಅಂಗಡಿಯನ್ನು ಹೇಳದೆ ಕೇಳದೆ ತೋಳುಬಲದ ಸಂಗಡಿಗರೊಂದಿಗೆ ಸೇರಿ ಧ್ವಂಸ ಮಾಡಿ ದರ್ಪ ಮೆರೆದ ಬಗ್ಗೆ ಪುತ್ತೂರು ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ (Puttur Congress candidate) ಎನ್ನಲಾಗುತ್ತಿರುವ ಅಶೋಕ್ ಕುಮಾರ್ ರೈ ಕೋಡಿಂಬಾಡಿ ವಿರುದ್ಧ ಮಾಜಿ ಯೋಧನ ಪತ್ನಿ ಠಾಣಾ ಮೆಟ್ಟಿಲೇರಿದ್ದಾರೆ. ಇದೀಗ ಯೋಧನ ಪತ್ನಿ ಕೊಟ್ಟ ದೂರಿನ ಆಧಾರದ ಮೇಲೆ ಕೋಡಿಂಬಾಡಿ ಅಶೋಕ್ ಕುಮಾರ್ ರೈ, ಜೆಸಿಬಿ ಆಪರೇಟರ್ ಮತ್ತು ಇನ್ನೊಬ್ಬರ ಮೇಲೆ ಠಾಣೆಯಲ್ಲಿ FIR ದಾಖಲಾಗಿದೆ.

ಘಟನೆಯ ಸ್ಥಳ ಪರಿಶೀಲನಾ ವರದಿ:

ಮಂಗಳೂರು ನಗರದ ಹೊರವಲಯದಲ್ಲಿರುವ ಸುರತ್ಕಲ್ ಹೇಳಿ ಕೇಳಿ ಕೈಗಾರಿಕ ಪಟ್ಟಣ. ಹಲವರು ಇಲ್ಲಿನ ಕೈಗಾರಿಕೆಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದು, ಇಂಥದ್ದರಲ್ಲಿ ಕಳೆದ ಒಂದೆರಡು ದಿನಗಳ ಹಿಂದೆ ಇಲ್ಲಿನ ಸುರತ್ಕಲ್-ಕಾನ ಸಂಪರ್ಕದ ರಸ್ತೆಯಲ್ಲಿ ಸಿಗುವ ಬಾಳ, ಒಟ್ಟೆಕಾಯರ್ ಕ್ರಾಸ್ ಬಳಿಯಲ್ಲಿ ಚಿತ್ತರಂಜನ್ ರಾವ್ ಎನ್ನುವ ಮಾಜಿ ಯೋಧರೊಬ್ಬರಿಗೆ ಸೇರಿದ ಆಸ್ತಿಯೊಂದಿದೆ. ಸುಮಾರು 28 ವರ್ಷಗಳ ಹಿಂದೆ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಊರಿಗೆ ಮರಳಿದ್ದ ಈ ಯೋಧ, ತನ್ನ ಜೀವನೋಪಾಯಕ್ಕಾಗಿ ಕರ್ನಾಟಕ ಕೈಗಾರಿಕ ಪ್ರದೇಶಗಳ ಅಭಿವೃದ್ಧಿ ಮಂಡಳಿ ನೆರವಿನಿಂದ ಹಾಗೂ BASF ಕಂಪನಿ ಮಾನವೀಯತೆ ನೆಲೆಯಲ್ಲಿ ಕೊಟ್ಟಿದ್ದ ಜಾಗದಲ್ಲಿ ಸಣ್ಣ ಕಟ್ಟಡವೊಂದನ್ನು ಕಟ್ಟಿ STD ಬೂತ್ ನಡೆಸಿಕೊಂಡಿದ್ದರು.

ಸಣ್ಣದಾಗಿ ವ್ಯಾಪಾರ ನಡೆಸಿಕೊಂಡು ಸಂತೃಪ್ತಿಯಲ್ಲಿ ಆ ಕುಟುಂಬ ಬದುಕಿತ್ತು. ಮೊಬೈಲ್ ಲಗ್ಗೆ ಇಟ್ಟ ಬಳಿಕ, ಎಲ್ಲರ ಕೈಯಲ್ಲೂ ಎರಡೆರಡು ಮೊಬೈಲುಗಳು ರಾರಾಜಿಸಿದ ಬಳಿಕ ಎಸ್.ಟಿ.ಡಿ ಯಿಂದ ಕರೆಗಳು ಮಾಡುವುದು ನಿಂತು ಹೋಗುತ್ತಿದ್ದ ಕಾರಣ ಯೋಧರು ತಮ್ಮ ಮಡದಿ ಪ್ರಭಾವತಿಯೊಂದಿಗೆ ಸೇರಿ ಅದೇ ಕಟ್ಟಡದಲ್ಲಿ ಜೆರಾಕ್ಸ್ ಅಂಗಡಿ ತೆರೆದರು. ಕೆಲವು ಸಮಯದ ಹಿಂದೆ ಅನಾರೋಗ್ಯದ ಕಾರಣದಿಂದ ಆ ಕಟ್ಟಡದಲ್ಲಿ ಬೇರೊಬ್ಬರಿಗೆ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಅಂಗಡಿ ಮಾಡಲು ಕೊಟ್ಟು ಅದರಿಂದ ಬರುವ ಆದಾಯದಿಂದ ತಮ್ಮ ಇಬ್ಬರು ಹೆಣ್ಣು ಮಕ್ಕಳ ಓದು, ಮದುವೆ ಇತ್ಯಾದಿ ಖರ್ಚು ವೆಚ್ಚಗಳನ್ನು ಹೇಗೋ ಸಂಭಾಳಿಸುತ್ತಾ ಸಂಭಾವಿತರಾಗಿ ಆ ಕುಟುಂಬ ಬದುಕಿತ್ತು.

ಇದೇ ಸಂದರ್ಭದಲ್ಲಿ ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ ಹಾಗೂ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಜೊತೆಯಾಗಿ ಬಾಳ ಬಳಿಯಲ್ಲೇ ಜಾಗವೊಂದನ್ನು ಖರೀದಿಸಿದ್ದರು. ಆ ಜಾಗಕ್ಕೆ ತೆರಳಬೇಕೆಂದರೆ ಈ ಮಹಿಳೆಯ ಕಟ್ಟಡದ ಬದಿಯಲ್ಲೇ ತೆರಳಬೇಕಿತ್ತು. ಇತ್ತ ಅಶೋಕ್ ಕುಮಾರ್ ರೈ ಹಾಗೂ ತಿಮ್ಮಯ್ಯ ಶೆಟ್ಟಿಯೊಂದಿಗೆ ಜಾಗದ ವಿಚಾರದಲ್ಲೇ ಭಿನ್ನಾಭಿಪ್ರಾಯ ಮೂಡಿದ್ದು, ಇದೀಗ ಆ ಪ್ರಕರಣ ಕೋರ್ಟ್ ಮೆಟ್ಟಿಲೇರಿ ತನಿಖೆಯಲ್ಲಿದೆ. ಇದೇ ಸಂದರ್ಭದಲ್ಲಿ ಅಶೋಕ್ ಕುಮಾರ್ ರೈ ಖರೀದಿಸಿದ್ದ ಆ ಜಾಗದಲ್ಲಿ ಖಾಸಗಿ ಸಂಸ್ಥೆಯೊಂದರ ವಾಣಿಜ್ಯ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದ್ದು, ಇದಕ್ಕೆ ತೆರಳಲು ಮಹಿಳೆಯ ಅಂಗಡಿ ಕಟ್ಟಡದ ಬಳಿಯಲ್ಲಿ ರಸ್ತೆಯೊಂದಿದ್ದರೂ, ದೊಡ್ಡ ರಸ್ತೆಯ ಅಗತ್ಯದ ನೆಪವಿತ್ತು.

ರಸ್ತೆಯ ಅಗತ್ಯಗಳು ವ್ಯಾಪಾರ ನಡೆಸಲು ಅತೀ ಅಗತ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ರಸ್ತೆ ನಿರ್ಮಿಸುವ ಬಗ್ಗೆ ಮಹಿಳೆಯೊಂದಿಗೆ ಯಾವುದೇ ಮಾತುಕತೆ ನಡೆಸದೆ, ರಾತ್ರಿಯಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಶೋಕ್ ಕುಮಾರ್ ರೈ ಹಾಗೂ ತೋಳು ಬಲದ ಟೊಣಪರು ಹಿಟಾಚಿ ಮೂಲಕ ಏಕಾಏಕಿ ಮಹಿಳೆಯ ಅಂಗಡಿ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ. ಅಲ್ಲದೆ, ಸ್ಥಳೀಯವಾಗಿ ಮಹಿಳೆಗೆ ಇಂತಿಷ್ಟು ಹಣ ನೀಡಿದ್ದೇನೆ ಹಾಗೂ ಪಂಚಾಯತ್ ಅನುಮತಿ ಪಡೆದಿದ್ದೇನೆ ಎನ್ನುತ್ತಾ ಕೋಡಿಂಬಾಡಿ ಮತ್ತವರ ಪಟಾಲಂ ಕಾನೂನು ಮರೆತು ವರ್ತಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಈ ಮಹಿಳೆ ಉಟ್ಟ ಬಟ್ಟೆಯಲ್ಲಿ ಓಡೋಡಿ ಬಂದಿದ್ದು ಅದಾಗಲೇ ಕಟ್ಟಡ ಅರ್ಧ ನೆಲಸಮವಾಗಿದ್ದನ್ನು ಕಂಡು ಅಲ್ಲಿಯೇ ಬೇಸರದ ಜೊತೆಗೆ ಕೋಪಗೊಂಡಿದ್ದು, ಅಶೋಕ್ ಕುಮಾರ್ ರೈ ಅವರನ್ನು ಸ್ಥಳದಲ್ಲೇ ಪ್ರಶ್ನಿಸಿದ್ದಾರೆ. ಇದಕ್ಕೆ ಉಡಾಫೆಯಾಗಿ ಉತ್ತರಿಸಿದ ರೈಯವರು ‘ ಕೇಸು ಕೊಡಿ, ಕೋರ್ಟ್ ನಲ್ಲಿ ನೋಡಿಕೊಳ್ಳೋಣ ‘ ಎಂದಿದ್ದಾರೆ. ಹಾಗನ್ನುವ ವಿಡಿಯೋ ಕೆಲ ನಿಮಿಷಗಳಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸ್ಥಳೀಯರು ಕೂಡಾ ಕೆಲವರು ಪ್ರತಿಭಟಿಸಿದ್ದಾರೆ. ಆದರೆ ಅಂದು ಗರ್ಜಿಸುವ ಜೆಸಿಬಿಗಳ ಜತೆ ಬೌನ್ಸರ್ ಗಳು ಕೂಡಾ ಸ್ಥಳಕ್ಕೆ ಬಂದಿದ್ದು, ಸ್ಥಳದಲ್ಲಿ ದೊಡ್ಡ ಮಟ್ಟದ ಭಯದ ವಾತಾವರಣ ಸೃಷ್ಟಿಯಾಗಿದೆ. (ಡೆಮಾಲಿಶ್ ಆದ ಅಂಗಡಿಯ ಚಿತ್ರ ಗಮನಿಸಿ)

ಇತ್ತ ತಾನು ದುಡಿದು ಜೀವನ ಸಾಗಿಸಿದ, ಹಲವು ವರ್ಷಗಳಿಂದ ಅನ್ನ ನೀಡಿದ ಅಂಗಡಿ ಕಟ್ಟಡ ಯಾವುದೇ ಅನುಮತಿ, ಯಾವುದೇ ದಾಖಲೆ ಪತ್ರಗಳಿಲ್ಲದೆ ನೆಲಸಮವಾಗಿದ್ದರಿಂದ ಮಹಿಳೆ ಕಣ್ಣೀರು ಸುರಿಸಿದ್ದು, ತಮ್ಮಲ್ಲಿ ಜಾಗದ ದಾಖಲೆ ಪತ್ರಗಳ ಬಗ್ಗೆ

ಹೇಳದೆ ಕೇಳದೆ ಕಟ್ಟಡ ಕೆಡವಿದ ಬಗ್ಗೆ ಮಹಿಳೆ ಇದೀಗ ಕಣ್ಣೀರು ಹಾಕುತ್ತಿದ್ದಾರೆ. ‘ ಎಲ್ಲವನ್ನೂ ಕೋರ್ಟಿನಲ್ಲೇ ನೋಡಿಕೊಳ್ಳೋಣ ಅನ್ನುತ್ತಿದ್ದಾರೆ ಅಶೋಕ್ ರೈ ಅವರು ಎನ್ನುವುದು ಯೋಧನ ಪತ್ನಿ ಪ್ರಭಾವತಿಯವರ ಹೇಳಿಕೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ನಲ್ಲಿ ವಿಚಾರಿಸಿದಾಗ ಯಾವುದೇ ಅನುಮತಿ ಪತ್ರ ನೀಡಿಲ್ಲ ಎಂದಿದೆ. ಅದೇ, ಕೋರ್ಟಿನಲ್ಲಿಯೇ ಆರ್ಡರ್ ತಂದು ಜಾಗದ ಕಟ್ಟಡ ತೆರವು ಮಾಡಿದ್ದರೆ ಆಗ ಅದಕ್ಕೊಂದು ಅರ್ಥವಿತ್ತು. ಮೊದಲೇ ಕಟ್ಟಡ ಕೆಡವಿ, ನಂತರ ‘ ಕೋರ್ಟಿನಲ್ಲಿ ನೋಡಿಕೊಳ್ಳಿ ‘ ಎನ್ನುವುದು ಯಾವ ರೀತಿಯ ಶಾಸನ? ‘ ಎಂದು ಆಕೆ ಪ್ರಶ್ನಿಸಿದ್ದಾರೆ.

ಮುಂದಿನ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತಾನೇ ಅಭ್ಯರ್ಥಿಯೆಂದು ಬಿಂಬಿತವಾಗಿರುವ ಕೊಡಿ೦ಬಾಡಿ ಅಶೋಕ ರೈಗಳು ಅದ್ಯಾವ ರೀತಿ ಕಾನೂನಿನಲ್ಲಿ ಬಡವರ ರಕ್ಷಣೆ ಮಾಡಿಯಾರು ಎನ್ನುವುದು ಈ ನೊಂದ ಮಹಿಳೆಯ ಪ್ರಶ್ನೆ. ” ಈ ವ್ಯಕ್ತಿಯಿಂದ ನನಗೆ ಅನ್ಯಾಯವಾಗಿದೆ. ಇದಕ್ಕೆ ಸೂಕ್ತ ನ್ಯಾಯ ದೊರಕಿಸಬೇಕು. ಬೇರೊಬ್ಬರ ಕಟ್ಟಡ ಕೆಡವಲು ಅಶೋಕ್ ರೈಯವರು ಯಾರು ? ಅವರ ಬಳಿ ಕಟ್ಟಡ ಕೆಡವಲು ಅನುಮತಿ ಪತ್ರ ಇದ್ದರೆ ಅದನ್ನು ಬಿಡುಗಡೆ ಮಾಡಲಿ. ಸುಳ್ಳು ದೂರು ಕೊಟ್ಟಿದ್ದಾರೆ ಎಂದು ಪತ್ರಿಕೆಗಳಲ್ಲಿ ಸ್ಪಷ್ಟೀಕರಣ ನೀಡಿದ ಕೂಡಲೇ ಕೆಡವಿದ ನನ್ನ ಕಟ್ಟಡ ಎದ್ದು ನಿಲ್ಲುತ್ತದೆಯೇ?” ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ ಯೋಧನ ಪತ್ನಿ. ಘಟನೆಯಲ್ಲಿ ಸತ್ಯ ಇಲ್ಲದೆ ಹೋದರೆ ಪೊಲೀಸರು ಯಾಕೆ FIR ದಾಖಲಿಸಿಕೊಳ್ಳುತ್ತಾರೆ ? ಎನ್ನುವುದು ಮಹಿಳೆಯ ಹೇಳಿಕೆ.
ಅಲ್ಲದೆ, ಮಾಜಿ ಯೋಧನಿಗೆ ಮತ್ತು ಓರ್ವ ಮಹಿಳೆಗೆ ಗೌರವ ನೀಡಲಾಗದ ಇವರೆಂತಹಾ ಸಮಾಜಸೇವಕರು ? ಎನ್ನುವ ಮೂಲಭೂತ ಪ್ರಶ್ನೆಯನ್ನು ಆಕೆಯನ್ನು ಸಂದರ್ಶಿಸಿದ ವರದಿಗಾರನನ್ನು ಆಕೆ ಪ್ರಶ್ನಿಸಿದ್ದಾರೆ. ನಿರುತ್ತರನಾಗಿ ಬರುವ ಸರದಿ ವರದಿಗಾರನದಾಗಿದೆ.

Leave A Reply

Your email address will not be published.