Mobile : Hi ಎಂದು ಮೆಸೇಜ್‌ ಕಳುಹಿಸಿ, ಕಳೆದು ಹೋದ ಮೊಬೈಲ್‌ ನಿಮ್ಮದಾಗಿಸಿ ! ಹೇಗೆ ಅಂತೀರಾ?

ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಹರಿದಾಡಿ ಸಂಚಲನ ಮೂಡಿಸುತ್ತಿದೆ. ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆದರೆ, ಈ ಮೊಬೈಲ್ ಕಳೆದು ಹೋದರೆ ಏನೂ ಮಾಡೋದು ಎಂಬ ಗೊಂದಲ ಹೆಚ್ಚಿನವರಿಗೆ ಕಾಡದಿರದು. ಈ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಡಿಜಿಪಿಯವರು ವಿಡಿಯೋವೊಂದನ್ನು ಹಂಚಿಕೊಂಡು ಮಾಹಿತಿ ನೀಡಿದ್ದರು. ಇದೀಗ, ಕಳೆದು ಹೋದ ಮೊಬೈಲ್ ಮರಳಿ ಪಡೆಯೋದು ಮತ್ತಷ್ಟು ಸಲೀಸು!! ಹೇಗಪ್ಪಾ ಅಂತೀರಾ?? ಗದಗ ಪೋಲೀಸರು ಹೊಸ ಪ್ರಯೋಗದ ಅನ್ವಯ ಕಳೆದು ಹೋದ ಮೊಬೈಲ್ ಸುಲಭವಾಗಿ ಪಡೆಯಬಹುದಾಗಿದೆ.

 

ಈಗಿನ ಕಾಲದಲ್ಲಿ ಮೊಬೈಲ್ ಕಾಂಟ್ಯಾಕ್ಟ್ ನಿಂದ ಹಿಡಿದು ಬ್ಯಾಂಕ್ ಜೊತೆಗೆ ಇನ್ನಿತರ ಮುಖ್ಯ ಮಾಹಿತಿಗಳು ಈ ಮೊಬೈಲ್ ಎಂಬ ಸಾಧನದ ಒಳಗೆ ಭದ್ರವಾಗಿರುತ್ತದೆ. ಹೀಗಿರುವಾಗ, ಮೊಬೈಲ್ ಕಳೆದುಹೋದರೆ ನಮ್ಮ ಖಾಸಗಿ ಮಾಹಿತಿಗಳು,ಹಣ ಲೂಟಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಜನರಿಗೆ ಮೊಬೈಲ್ ಕಳೆದುಹೋದರೆ ಹೆಚ್ಚು ಚಿಂತಿತರಾಗೋದು ಸಹಜ. ಕೂಡಲೇ ಪಕ್ಕದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದಾಗಲೇ ಕೊಂಚ ಮಟ್ಟಿಗೆ ಸಮಾಧಾನವಾಗೋದು. ಆದರೆ, ಇನ್ನೂ ಮುಂದೆ, ಮೊಬೈಲ್ ಕಳೆದು ಹೋದರೆ, ಯಾವುದೇ ಪೊಲೀಸ್ ಠಾಣೆಗೆ ಹೋಗಬೇಕಾದ ತಾಪತ್ರಯವಿಲ್ಲ. ಕಳೆದುಹೋದ ಮೊಬೈಲ್ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದರ ಪ್ರಯೋಗವನ್ನು ಗದಗ ಪೊಲೀಸ್ ಇಲಾಖೆ ಮಾಡಿದ್ದಾರೆ.

 

ಈ ಕುರಿತ ಮಾಹಿತಿಯನ್ನು ಗದಗ ಪೋಲಿಸ್ ವರಿಷ್ಟಾಧಿಕಾರಿ ಬಿ.ಎಸ್ ನೇಮಗೌಡ ಮೊಬೈಲ್ ಕಳೆದುಕೊಂಡರೆ ಕೂಡಲೇ ಏನು ಮಾಡಬೇಕು ಎಂಬ ಮಾಹಿತಿಯನ್ನು ನೀಡಿದ್ದಾರೆ. ನೀವು ಇರುವ ಸ್ಥಳದಿಂದಲೇ ಕೆಲವು ಮಾಹಿತಿ ನೀಡಿದರೆ ಸಾಕು!! ಕಳೆದು ಹೋದ ಮೊಬೈಲ್ ಮರಳಿ ಪಡೆಯಬಹುದು. ಕೇವಲ ಮೊಬೈಲ್ ಮೂಲಕ ಜಸ್ಟ್ Hi ಎಂದು ಮೆಸ್ಸೇಜ್ ಕಳುಹಿಸುವ ಮೂಲಕ ಕಳೆದು ಹೋದ ಮೊಬೈಲ್ ಮರಳಿ ಪಡೆಯಬಹುದು. ಗದಗ ಪೋಲಿಸ್ ಇಲಾಖೆಯು ಮೊಬೈಫೈ ಎಂಬ ಹೊಸದೊಂದು ಆ್ಯಪ್‌ ಅನ್ನು ಸಿದ್ದಪಡಿಸಿ ಪ್ರಯೋಗ ನಡೆಸಿದ್ದಾರೆ. ಸದ್ಯ, ಈ ತಂತ್ರಾಂಶದ ಮೂಲಕ ಕಳೆದುಹೋದ ಮೊಬೈಲ್ ಅನ್ನು ಕಂಡುಹಿಡಿಯಬಹುದಾಗಿದ್ದು, ಇದಕ್ಕಾಗಿ ಕೆಲ ಪ್ರಕ್ರಿಯೆಗಳನ್ನ ಕಡ್ಡಾಯವಾಗಿ ಭರ್ತಿ ಮಾಡಬೇಕಾಗಿರುವ ಕುರಿತು ಬಿ.ಎಸ್ ನೇಮಗೌಡ ರವರು ಮಾಹಿತಿ ನೀಡಿದ್ದಾರೆ.

 

ಈ ಪ್ರಯೋಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ಗದಗ ಪೊಲೀಸರಿಂದ ನಡೆದಿರುವ ಕುರಿತು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.ಬೇರೆಯವರ ಇಲ್ಲವೇ ಸಂಬಂಧಿಕರ ಮೊಬೈಲ್ ಮೂಲಕ ಪೊಲೀಸ್ ಇಲಾಖೆಯ 8277969900 ಈ ನಂಬರ್ಗೆ Hi ಎಂದು ಮೆಸೇಜ್ ಕಳುಹಿಸಬೇಕಾಗುತ್ತದೆ. ಮೆಸೇಜ್ ಪೊಲೀಸ್ ಇಲಾಖೆ ಸಿಬ್ಬಂದಿಗೆ ತಲುಪಿದ ತಕ್ಷಣ ಆ ಮೊಬೈಲ್ ವಾಟ್ಸಪ್ಗೆ ಒಂದು ಲಿಂಕ್ ಸಂದೇಶ ತಲುಪಲಿದ್ದು, ಆ ಲಿಂಕ್ ಓಪನ್ ಮಾಡಿ ತಮ್ಮ ಕಳೆದುಹೋದ ಮೊಬೈಲ್ ಸಂಖ್ಯೆ ಸೇರಿದಂತೆ ಕೆಲವು ಮಾಹಿತಿಯನ್ನು ಪೂರ್ಣಗೊಳಿಸಬೇಕು. ಹೀಗೆ, ಭರ್ತಿಯಾದ ಮಾಹಿತಿಯ ಅನುಸಾರ ದೂರು ದಾಖಲಾಗುತ್ತದೆ. ಈ ದೂರು ದಾಖಲಾದ ಅನ್ವಯ, ಕಳೆದುಹೋದ ಮೊಬೈಲ್ ಅನ್ನು ಕೆಲವು ತಂತ್ರಾಂಶದ ಪ್ರಕ್ರಿಯೆ ಅನುಸಾರ ಹುಡುಕಾಟ ನಡೆಸಲಾಗುತ್ತದೆ. ಅಕಸ್ಮಾತ್, ಒಂದು ವೇಳೆ, ಆ ಮೊಬೈಲ್ ಪತ್ತೆಯಾಗದೇ ಇದ್ದ ಸಂದರ್ಭದಲ್ಲಿ ಆ ಮೊಬೈಲ್ ಅನ್ನೇ ಬ್ಲಾಕ್ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಪೋಲಿಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.