ಫ್ರೆಂಡ್ಸ್ಗಳ ಮಧ್ಯೆ 10 ನಿಮಿಷದಲ್ಲಿ 3 ಕ್ವಾರ್ಟರ್ ಕುಡಿಯೋ ಚಾಲೆಂಜ್, ಆದರೆ ಮುಂದಾದದ್ದು ಬೇರೆ!
ಅತಿಯಾದರೆ ಅಮೃತವೂ ವಿಷವೇ ಎಂಬ ಮಾತು ಹೆಚ್ಚು ಪ್ರಚಲಿತವಾದರು ಕೂಡ ನೈಜ ಜೀವನಕ್ಕೆ ಅಷ್ಟೇ ಅನ್ವಯವಾಗುತ್ತದೆ. ಮದ್ಯ ಸೇವನೆ , ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಷಯ ತಿಳಿಯದೆ ಇರುವವರು ವಿರಳ. ಅಷ್ಟೆ ಏಕೆ ಸಿಗರೇಟ್ ಇಲ್ಲವೇ ಮಧ್ಯಪಾನ ಮಾಡುವ ಕವರ್ ಗಳಲ್ಲಿ ಹೈ ಲೈಟ್ ಮಾಡಿದ್ದರು ಕೂಡ ನಮಗೇನು ಆಗದು ಎಂಬ ಬಂಡ ದೈರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಚಟವನ್ನು ರೂಢಿಸಿಕೊಂಡು ಅನಾಹುತಕ್ಕೆ ಎಡೆ ಮಾಡಿಕೊಡುವ ಪ್ರಮೇಯ ಹೆಚ್ಚುತ್ತಿದೆ.
ಎಣ್ಣೆಯ ಮಹಿಮೆಯ ಬಗ್ಗೆ ತಿಳಿಯದಿರುವವರೆ ವಿರಳ. ಕೆಲವೊಮ್ಮೆ ಹುಚ್ಚಾಟಕ್ಕೆ ಏನೋ ಮಾಡಲು ಹೋಗಿ ಇನ್ನೇನೋ ಅವಾಂತರ ಸೃಷ್ಟಿಯಾಗುತ್ತದೆ. ಆಲ್ಕೋಹಾಲ್ ಆರೋಗ್ಯಕ್ಕೆ ಮಾರಕ ಎಂದು ತಿಳಿದಿದ್ದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಲ್ಕೋಹಾಲ್ ಕುಡಿಯುವ ಚಟವನ್ನು ರೂಢಿಸಿಕೊಂಡಿದ್ದಾರೆ. ಅದರಲ್ಲಿಯೂ ಬೆಟ್ಟಿಂಗ್ ಕಟ್ಟಿ ಮದ್ಯ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಮುಗಿಯಿತು. ಅಪಾಯ ಕಟ್ಟಿಟ್ಟ ಬುತ್ತಿ. ಕೆಲವೊಮ್ಮೆ ತನಗೇನು ಆಗದು ಎಂಬ ಕುರುಡು ನಂಬಿಕೆಯಿಂದ ಕಂಠ ಪೂರ್ತಿ ಕುಡಿದರೆ ಅನಾರೋಗ್ಯ ಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಘಟನೆ ವರದಿಯಾಗಿದೆ
ಉತ್ತರ ಪ್ರದೇಶದ ಆಗ್ರಾದಲ್ಲಿ ಯುವಕನೊಬ್ಬ ಸ್ನೇಹಿತರೊಂದಿಗೆ ಬೆಟ್ಟಿಂಗ್ ಕಟ್ಟಿಕೊಂಡು ಒಂದೇ ಸಮನೆ ಅತಿಯಾಗಿ ಮದ್ಯ ಸೇವಿಸಿದ ಪರಿಣಾಮ ಅಸುನೀಗಿದ ಘಟನೆ ನಡೆದಿದೆ. ಈ ಘಟನೆ ಮೂರು ದಿನಗಳ ಹಿಂದೆ ತಾಜ್ಗಂಜ್ ಎಂಬಲ್ಲಿ ನಡೆದಿದೆ ಎನ್ನಲಾಗಿದೆ. 10 ನಿಮಿಷದಲ್ಲಿ 3 ಕ್ವಾರ್ಟರ್ ಮದ್ಯವನ್ನು ಯಾರು ಮೊದಲು ಕುಡಿಯುತ್ತಾರೆ ಎಂದು ಸ್ನೇಹಿತರು ಚಾಲೆಂಜ್ ಮಾಡಿಕೊಂಡಿದ್ದು,ಯಾರು ಈ ಚಾಲೆಂಜ್ ನಲ್ಲಿ ಗೆಲ್ಲುತ್ತಾರೋ ಅವರು ಮದ್ಯದ ಹಣ ಪಾವತಿಸಬೇಕಾಗಿಲ್ಲ ಎಂದು ತೀರ್ಮಾನ ಕೈಗೊಂಡಿದ್ದಾರೆ. ಹೀಗಾಗಿ, ಈ ಹುಚ್ಚಾಟಕ್ಕೆ ಸ್ನೇಹಿತರೆಲ್ಲರು ಸಮ್ಮತಿಸಿ ಚಾಲೆಂಜ್ ಸ್ವೀಕರಿಸಿ ಕುಡಿಯಲು ಆರಂಭಿಸಿದ್ದಾರೆ. ಹೀಗಾಗಿ, ಜೈಸಿಂಗ್, ಕೇಶವ್ ಮತ್ತು ಭೋಲಾ ಈ ಮೂವರು ಬೆಟ್ಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ.
ಆದರೆ, ಈ ನಡುವೆ ಚಾಲೆಂಜ್ ಪೂರ್ತಿಮಾಡುವಷ್ಟರಲ್ಲಿ ಅತಿಯಾದ ಮದ್ಯ ಸೇವನೆಯಿಂದಾಗಿ ಜೈಸಿಂಗ್ ಎಂಬಾತ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ಮತ್ತೊಂದು ವಿಪರ್ಯಾಸ ಏನಪ್ಪಾ ಅಂದರೆ ಒಬ್ಬ ಸ್ನೇಹಿತ ಮೃತಪಟ್ಟಾಗ ಸ್ನೇಹಿತರು ಮರುಗುವ ಬದಲಿಗೆ ಸತ್ತವನ ಜೇಬಿನಲ್ಲಿದ್ದ 60 ಸಾವಿರ ರೂಪಾಯಿಯನ್ನೂ ಹೊರತೆಗೆದಿದ್ದಾರೆ. ಈ ಹಣವನ್ನು ಭೋಲಾ ಹಾಗೂ ಕೇಶವ್ ತಲಾ 30 ಸಾವಿರ ರೂಪಾಯಿ ಹಂಚಿಕೊಂಡಿದ್ದು, ಸದ್ಯ ಈ ಪ್ರಕರಣ ಪೋಲಿಸ್ ಠಾಣೆ ಮೆಟ್ಟಿಲೇರಿದೆ. ಈ ಪ್ರಕರಣ ತನಿಖೆ ವೇಳೆ ಭೋಲಾ ಮತ್ತು ಕೇಶವ್ ಹಣ ಹಂಚಿಕೊಂಡ ವಿಚಾರ ತಿಳಿಸಿದ್ದು, ಆ ಬಳಿಕ ಪೊಲೀಸರು ನಿರ್ದಾಕ್ಷಿಣ್ಯ ನರಹತ್ಯೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೈಲಿಗೆ ರವಾನಿಸಿದ್ದು, ಸದ್ಯ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.