ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ 57 ಅಡಿ ಎತ್ತರದ ಬ್ರಹ್ಮರಥ | ಫೆ.16ರಂದು ಜಗನ್ಮಾತೆಗೆ ಸಮರ್ಪಣೆ

Share the Article

ಕೊಲ್ಲೂರು: ಜಗನ್ಮಾತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ನಿರ್ಮಾಣ ಕಾರ್ಯ ಕುಂಭಾಶಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ಪೂರ್ಣಗೊಂಡಿದ್ದು, ಫೆ. 15ರಂದು ಸಂಪ್ರದಾಯದಂತೆ ರವಾನೆಯಾಗಲಿದ್ದು, ಫೆ.16ರಂದು ಶ್ರೀ ದೇವರಿಗೆ ಸಮರ್ಪಿತವಾಗಲಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಸುನಿಲ್‌ ಆರ್‌. ಶೆಟ್ಟಿ ಅವರಿಂದ ಕೊಡಮಾಡಿದ ನೂತನ ಬ್ರಹ್ಮರಥದ ಪುರಪ್ರವೇಶ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಫೆ. 15 ಹಾಗೂ 16 ರಂದು ನಡೆಯಲಿದೆ.

ಫೆ.15 ರಂದು ಕುಂಭಾಶಿ. ಕೋಟೇಶ್ವರ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು ವಂಡ್ಸೆ, ಚಿತ್ತೂರು, ಈಡೂರು, ಜಡ್ಕಲ್‌ ಹಾಲ್ಕಲ್‌ ಮಾರ್ಗವಾಗಿ ಪುರಮೆರವಣಿಗೆಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ರಥ ಸಾಗುವ ಮಾರ್ಗದಲ್ಲಿ ಅಲ್ಲಿನ ಮುಖ್ಯ ದೇಗುಲ‌ಗಳ ವತಿಯಿಂದ ನೂತನ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

57 ಅಡಿ ಎತ್ತರದ ಬ್ರಹ್ಮರಥ ಕುಂದಾಪುರ ತಾಲೂಕಿನ ಕೋಟೇಶ್ವರದ ರಥಶಿಲ್ಪಿಗಳಾದ ಲಕ್ಷ್ಮೀ ನಾರಾಯಣ ಆಚಾರ್ಯ, ಶಂಕರ ಆಚಾರ್ಯ ಹಾಗೂ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಸುಮಾರು ಒಂದು ವರ್ಷದ ಅನಂತರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಸುಮಾರು 400 ವರ್ಷಗಳ ಹಳೆದಾದ ಬ್ರಹ್ಮರಥದ ಮಾದರಿಯಲ್ಲಿಯೇ ಯಥಾವತ್ತಾಗಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಪುನಃ ನಿರ್ಮಾಣ ಮಾಡಲಾಗಿದೆ.

Leave A Reply