ಎಚ್ಚರ! ಹೆಲ್ಮೆಟ್ ಧರಿಸುವ ಮೊದಲು ಒಮ್ಮೆ ಚೆಕ್ ಮಾಡಿ, ಏಕೆಂದರೆ ನಿಮಗೂ ಈ ಅನುಭವ ಆಗಬಹುದು!!!
ಜಗತ್ತು ವೇಗವಾಗಿ ಮುಂದುವರೆಯುತ್ತಿದೆ. ಹಾಗೇ ಜನರು ವೇಗವಾಗಿ ಎಲ್ಲಾದನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ.
ಜೀವನದ ನೂಕುನುಗ್ಗಲಿನಲ್ಲಿ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯಲ್ಲಿ ಬೇಸತ್ತಿದ್ದಾರೆ. ಸಣ್ಣ ಮಕ್ಕಳಿಗೆ ಶಾಲೆಗೆ ಹೋಗುವ ಅವಸರ, ದೊಡ್ಡವರಿಗೆ ಕೆಲಸ-ಕಾರ್ಯಗಳ ಚಿಂತೆ, ಈ ಅವಸರದಲ್ಲಿ ಹೊಟ್ಟೆಗೆ ಒಂದು ತುತ್ತು ಹಾಕದೆಯೇ ಹೋಗುವವರಿದ್ದಾರೆ. ಇಂದು ಆರೋಗ್ಯದ ಬಗ್ಗೆ ಕಾಳಜಿ, ತಾಳ್ಮೆ ಇವೆಲ್ಲಾ ಮಾರುದ್ದ ದೂರದಲ್ಲಿದೆ. ಸದ್ಯ ಅವಸರವೋ? ಅಥವಾ ಮತ್ತಿನ್ನೇನೋ ತಿಳಿಯದು ಒಟ್ಟಾರೆ ಆಗಬೇಕಿದ್ದ ಅವಘಡ ಸ್ವಲ್ಪದರಲ್ಲೇ ತಪ್ಪಿದೆ. ಏನು ಅಂತಿರಾ? ಇಲ್ಲಿದೆ ವಿವರ.
ಸಾಮಾನ್ಯವಾಗಿ ಜನರು ಬೈಕ್, ಸ್ಕೂಟರ್ ಇದರಲ್ಲೆಲ್ಲಾ ಚಲಿಸುವಾಗ ಹೆಲ್ಮೆಟ್ ಧರಿಸೋದೇ ವಿರಳ. ಪೊಲೀಸರು ಒಂದಷ್ಟು ದೂರದಲ್ಲಿ ಕಂಡರೆ ಸಾಕು ಕೈಯಲ್ಲಿದ್ದ ಹೆಲ್ಮೆಟ್ ತಲೆಗೆ ಬರುತ್ತೆ. ಬಹುಶಃ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಇನ್ನೊಬ್ಬರು ನೆನಪಿಸಬೇಕೇನೋ. ಹೀಗೇ ಹೆಲ್ಮೆಟ್ ಧರಿಸದೆ ಹೋದರೆ ಅಪಘಾತದಲ್ಲಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ. ಕೆಲವೊಂದು ಬಾರಿ ಹೆಲ್ಮೆಟ್ ಬಳಸದೆ ಮನೆಯಲ್ಲೇ ಮೂಲೆಯಲ್ಲಿ ಬಿದ್ದಿರುತ್ತದೆ. ಹಾಗೇ ಅವಸರದಲ್ಲಿ ಅದನ್ನೇ ಧರಿಸುತ್ತೀರಿ. ಆದ್ರೆ ಅಪಾಯ ಅಲ್ಲೇ ಇರೋದು. ಹೆಲ್ಮೆಟ್ ಒಳಗೆ ಏನಿದೆ? ಏನಾದರೂ ಇದೆಯೇ? ನೋಡೋದಿಲ್ಲ. ಇದೇ ತಪ್ಪು. ಆದರೆ ಪ್ರತೀ ದಿನ ಧರಿಸುವವರೂ ಇದನ್ನು ಪರೀಕ್ಷಿಸಬೇಕು. ಯಾಕಂದ್ರೆ ಸದ್ಯ ವೈರಲ್ ಆಗಿರುವ ವಿಡಿಯೋ ಅಂತಹದ್ದು. ಏನು ಗೊತ್ತಾ?
ಈ ವಿಡಿಯೋ ನೋಡಿದ್ರೆ ಎದೆ ಝಲ್!! ಅನ್ನುತ್ತೇ. ಆಮೇಲೆ ಯಾರೂ ಕೂಡ ಹೆಲ್ಮೆಟ್ ಬಗ್ಗೆ ನಿರ್ಲಕ್ಷ್ಯ ಮಾಡೋದೇ ಇಲ್ಲ ಅನಿಸುತ್ತೇ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರ ಹೆಲ್ಮೆಟ್ ನಲ್ಲಿ ಹಾವು ಇರುವುದು ಕಂಡುಬಂದಿದೆ. ಅವರು ಇಕ್ಕಳದ ಸಹಾಯದಿಂದ ಹೆಲ್ಮೆಟ್ ಸ್ಪಾಂಜ್ ಸರಿಸಿ, ಹೆಲ್ಮೆಟ್ ಒಳಗಿನಿಂದ ಸಣ್ಣ ಹಾವೊಂದನ್ನು ಇವರು ಹೊರತೆಗೆಯುತ್ತಾರೆ. ಒಂದು ಕ್ಷಣ ಬೆಚ್ಚಿಬೀಳುವಂತಿದೆ ಈ ವಿಡಿಯೋ.
ಈ ವಿಡಿಯೋವನ್ನು aahanslittleworld ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರಂತೂ
ಈ ದೃಶ್ಯವನ್ನು ಕಂಡು ಭಯಭೀತರಾಗಿದ್ದಾರೆ. ಇನ್ನೊಂದಷ್ಟು ಮಂದಿ ಅದೃಷ್ಟವಶಾತ್ ಹೆಲ್ಮೆಟ್ ಧರಿಸುವ ಮೊದಲೇ ಹಾವನ್ನು ನೋಡಿದ್ದಕ್ಕೆ ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯಾವಾಗಲೂ ಹೆಲ್ಮೆಟ್ ಧರಿಸುವ ಮುನ್ನ ಒಂದು ಕ್ಷಣ ಪರೀಕ್ಷಿಸಿ ಎಂದೂ ಕಿವಿಮಾತು ಹೇಳಿದ್ದಾರೆ. ಹೌದು, ಶೂ, ಹೆಲ್ಮೆಟ್ ಧರಿಸುವ ಮುನ್ನ ಪರೀಕ್ಷಿಸುವುದು ಉತ್ತಮ.
https://www.instagram.com/reel/CmBCcGYui2X/?igshid=YmMyMTA2M2Y=