ಹಳೆಯ ಬಜೆಟ್ ಓದಿ ನಗೆಪಾಟಲಿಗೀಡಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್! ವಿರೋಧ ಪಕ್ಷಗಳಿಂದ ಭಾರೀ ಆಕ್ರೋಶ!

ಇದೀಗ ದೇಶದ ಹಲವು ರಾಜ್ಯಗಳಲ್ಲಿ ಬಜೆಟ್ ಅಧಿವೇಶನಗಳು ನಡೆಯುವ ಸಮಯ. ಕರ್ನಾಟಕದಲ್ಲೂ ಇಂದು ಬಜೆಟ್ ಅಧಿವೇಶನ ನಡೆಯುತ್ತಿದೆ. ಅಲ್ಲದೆ ಈ ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲೂ ಇಂದು ಬಜೆಟ್ ಅಧಿವೇಶನ ಶುರುವಾಗಿದೆ. ಹಾಗಾಗಿ, ಇಂದು ಕಾಂಗ್ರೆಸ್ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ ಸಿಎಂ ಅಶೋಕ್ ಗೆಹ್ಲೋಟ್, ವಿಚಿತ್ರವೆಂಬಂತೆ ಕಳೆದ ಸಾಲಿನ ಬಜೆಟ್ ಓದುವ ಮೂಲಕ ಸಾಕಷ್ಟು ಮುಜುಗರಕ್ಕೆ ಒಳಗಾಗಿ ಪೇಚಿಗೆ ಸಿಲುಕಿದ್ದಾರೆ.

ಬಜೆಟ್ ಮಂಡನೆ ಎಂದರೆ ಅದಕ್ಕೆ ಎಷ್ಟೊಂದು ತಯಾರಿ ನಡೆಸಬೇಕು, ಅದರ ರಚನೆಗೆ ಎಷ್ಟೊಂದು ಕಾಣದ ಕೈಗಳು ಕೆಲಸ ಮಾಡುತ್ತವೆ, ಎಷ್ಟೆಲ್ಲಾ ಶ್ರಮ ಬೇಕು ಅನ್ನುವುದು ನಿಮಗೆ ಗೊತ್ತಿದೆ. ಅಲ್ಲದೆ ಆ ಬಜೆಟ್ ಇಡೀ ವರ್ಷ ರಾಜ್ಯವನ್ನೋ, ದೇಶವನ್ನೋ ಸಲಹುತ್ತದೆ. ಇದರ ಮಂಡನೆಗೂ ಕೂಡ ಪೂರ್ವ ತಯಾರಿ ಆಗಿರಲೇಬೇಕು. ಆದರೆ ರಾಜಸ್ಥಾನ ಸಿಎಂ ಮಾತ್ರ ಯಾವುದೇ ತಯಾರಿಗಳಿಲ್ಲದೆ, ಏಕಾಏಕಿ ಎದ್ದುಕೊಂಡು ಬಂದು ಬಜೆಟ್ ಮಂಡಿಸಿದ್ದಾರೆಂದು ಕಾಣುತ್ತದೆ.

ಹೌದು, ರಾಜಸ್ಥಾನದ ಹಣಕಾಸು ಸಚಿವರು ಮತ್ತು ಮುಖ್ಯಮಂತ್ರಿಗಳು ಆಗಿರುವ ಅಶೋಕ್ ಗೆಹ್ಲೋಟ್ ಅವರು ಇಂದು ವಿಧಾನಸಭೆಯಲ್ಲಿ ರಾಜ್ಯದ ಬಜೆಟ್ ಮಂಡಿಸಲು ಮುಂದಾದ ಸಂದರ್ಭದಲ್ಲಿ, ಹಳೆಯ ಬಜೆಟ್ ಓದುವ ಮೂಲಕ ಮುಜುಗರದ ಸನ್ನಿವೇಶವನ್ನು ಎದುರಿಸಿದರು. ಈ ವೇಳೆ ಕಾಂಗ್ರೆಸ್ ಸಚಿವ ಮಹೇಶ್ ಜೋಶಿ ಮಧ್ಯ ಪ್ರವೇಶಿಸಿ ‘ಇದು ಹಳೆಯ ಬಜೆಟ್’ ಎಂದು ಬಜೆಟ್ ಓದುವುದನ್ನು ತಡೆದರು. ಬಜೆಟ್ ಓದಲಾರಂಭಿಸಿದ ಗೆಹ್ಲೋಟ್ ಗೆ ಸತ್ಯಾಂಶ ತಿಳಿಯುವಾಗ ಹಲವು ನಿಮಿಷಗಳೇ ಕಳೆದಿದ್ದವು.

2023-24ರ ಬಜೆಟ್ ಬದಲು ಕಳೆದ ಸಾಲಿನ ಬಜೆಟ್‌ನ ನಗರ ಉದ್ಯೋಗ ಹಾಗೂ ಕೃಷಿ ಬಜೆಟ್‌ನ ವಿವರಗಳನ್ನು ಓದಿದರು. 2022-23ನೇ ಸಾಲಿನ ಬಜೆಟ್‌ನಲ್ಲಿನ ಮೊದಲ ಎರಡು ಘೋಷಣೆಗಳನ್ನು ಮಾಡುತ್ತಿದ್ದಂತೆಯೇ, ವಿರೋಧ ಪಕ್ಷವು ಗದ್ದಲ ಶುರುಮಾಡಿತು. ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿತು. ಸ್ಪೀಕರ್ ಸಿ.ಪಿ.ಜೋಶಿ ಸದನದಲ್ಲಿ ಶಾಂತಿ ಕಾಪಾಡುವಂತೆ ಸದಸ್ಯರಿಗೆ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ಹೀಗಾಗಿ ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಿದರು. ಅಲ್ಲದೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೊಸ ಬಜೆಟ್ ಬಗ್ಗೆ ಪ್ರಚಾರ ಮಾಡಿದ್ದು, ಆದರೆ ಹಳೆ ಬಜೆಟ್ ಅನ್ನು ಓದಿದರು ಎಂದು ಕೇಂದ್ರ ಸಚಿವ ಮತ್ತು ಜೋಧಪುರ ಸಂಸದ ಗಜೇಂದ್ರ ಸಿಂಗ್ ಶೆಖಾವತ್ ಅಣಕಿಸಿದ್ದಾರೆ.

‘ಮುಖ್ಯಮಂತ್ರಿ ಅವರು ಎಂಟು ನಿಮಿಷಗಳ ಕಾಲ ಹಳೆಯ ಬಜೆಟ್ ಪ್ರತಿಯನ್ನೇ ಓದುತ್ತಿದ್ದರು. ಇದು ಇತಿಹಾಸದಲ್ಲಿಯೇ ಮೊದಲು. ನಾನು ಕೂಡ ಮುಖ್ಯಮಂತ್ರಿಯಾಗಿದ್ದೆ. ಸದನದಲ್ಲಿ ಬಜೆಟ್ ಪ್ರತಿಯನ್ನು ನನ್ನ ಕೈಗೆ ಎತ್ತಿಕೊಳ್ಳುವ ಮುನ್ನ ಎರಡು, ಮೂರು ಬಾರಿ ಅದನ್ನು ಓದುತ್ತಿದ್ದೆ ಹಾಗೂ ಪ್ರತಿಯೊಂದನ್ನೂ ಪರಿಶೀಲಿಸುತ್ತಿದ್ದೆ. ದೊಡ್ಡ ದಾಖಲೆಯನ್ನು ಪರಿಶೀಲನೆ ಮಾಡದೆಯೇ ವಿಧಾನಸಭೆ ಒಳಗೆ ತರುವ ಮತ್ತು ಹಳೆಯ ಬಜೆಟ್ ಓದುವ ಮುಖ್ಯಮಂತ್ರಿಯ ಕೈಯಲ್ಲಿ ಈ ರಾಜ್ಯ ಎಷ್ಟು ಸುರಕ್ಷಿತವಾಗಿರುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬಹುದು’ ಎಂದು ಮಾಜಿ ಸಿಎಂ ವಸುಂದರಾ ರಾಜೇ ವ್ಯಂಗ್ಯವಾಡಿದ್ದಾರೆ.

Leave A Reply

Your email address will not be published.